ADVERTISEMENT

‘ಎಚ್‌1ಎನ್‌1’ ನಿಯಂತ್ರಣಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 14:58 IST
Last Updated 29 ಡಿಸೆಂಬರ್ 2018, 14:58 IST

ಮೈಸೂರು: ಎಚ್‌1ಎನ್‌1 ಇನ್‌ಫ್ಲುಯೆನ್ಸಾ ‘ಎ’ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಇಲಾಖೆಯು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ತಿಳಿಸಿದರು.

ಜ್ವರ, ತಲೆನೋವು, ಕೆಮ್ಮು, ಶೀತ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಮುಂಚಿತವಾಗಿಯೇ ಚಿಕಿತ್ಸೆ ಪಡೆದಲ್ಲಿ ಈ ಸೋಂಕು ಮಾರಣಾಂತಿಕ ಅಲ್ಲ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಎಲ್ಲ ರೀತಿಯಮುಂಜಾಗ್ರತೆ ವಹಿಸಿದೆ. ಹಲವು ಹಂತದ ಸಭೆಗಳು ನಡೆದಿವೆ. ಸೋಂಕು ಪತ್ತೆ ಹಚ್ಚುವಲ್ಲಿ ವಿಳಂಬ ಮಾಡದೇ ತಕ್ಷಣ ಚಿಕಿತ್ಸೆ ನೀಡುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ನಾಗರಿಕರಿಗೆ ಅರಿವು ಮೂಡಿಸಲು ರಸ್ತೆ ಜಾಥಾ ನಡೆಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ADVERTISEMENT

2018ರ ಜ. 1ರಿಮದ ಡಿ. 27ರವರೆಗೆ ಒಟ್ಟು 598 ಮಂದಿಯಿಂದ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ 88 ಮಂದಿಗೆ ಎಚ್‌1ಎನ್‌1 ಸೋಂಕು ಇರುವುದು ಪತ್ತೆಯಾಗಿದೆ. ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಹಾಗಾಗಿ, ಶಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ಎಲ್ಲ ಸಿದ್ಧತೆಗಳು ನಡೆದಿವೆ ಎಂದು ಮಾಹಿತಿ ನೀಡಿದರು.

ಮೈಸೂರು ನಗರದಲ್ಲಿ 52, ತಾಲ್ಲೂಕಿನಲ್ಲಿ 12, ತಿ.ನರಸೀಪುರ 1, ನಂಜನಗೂಡು 8, ಎಚ್.ಡಿ.ಕೋಟೆ 6, ಕೆ.ಆರ್.ನಗರ 5 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಿರಿಯಾಪಟ್ಟಣದಲ್ಲಿ ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ. ಕಳೆದ ಮಾರ್ಚಿಯಲ್ಲಿ ವಿಜಯನಗರದ ನಿವಾಸಿ ಶಾಂತಾಬಾಯಿ (85), ಸೆಪ್ಟಂಬರ್‌ನಲ್ಲಿ ನಂಜನಗೂಡಿನ ನಿವಾಸಿ ಪುಟ್ಟಮ್ಮಣ್ಣಿ (23) ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದರು.

ಕೆಮ್ಮು, ಸೀನು ಬಂದಾಗ ಬಾಯಿಗೆ ಅಡ್ಡಲಾಗಿ ಕರವಸ್ತ್ರ ಅಥವಾ ತೋಳನ್ನು ಅಡ್ಡವಾಗಿಟ್ಟುಕೊಳ್ಳಬೇಕು. ಇದರಿಂದ ಸೋಂಕು ಇತರರಿಗೆ ಹರಡುವುದು ತಪ್ಪುತ್ತದೆ. ಸೋಂಕಾಗಿರುವರುಜನ ನಿಬಿಡ ಪ್ರದೇಶಗಳಿಗೆ ಹೋಗಬಾರದು. ವಿಶ್ರಾಂತಿ ಪಡೆದುಕೊಳ್ಳಬೇಕು. ಬೇರೊಬ್ಬರಿಗೆ ಹಸ್ತಲಾಘವ ಮಾಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಾಧಿಕಾರಿ ಡಾ.ಕುಸುಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.