ADVERTISEMENT

ಹುಣಸೂರು | ಹನುಮಂತೋತ್ಸವ: ಹರಿದು ಬಂದ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 14:41 IST
Last Updated 15 ಡಿಸೆಂಬರ್ 2024, 14:41 IST
ಹುಣಸೂರಿನ ರಂಗನಾಥ ಬಡಾವಣೆಯಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಸೇರಿದಂತೆ ರಾಜಕೀಯ ಮುಖಂಡರು ಆಂಜನೇಯಸ್ವಾಮಿಗೆ ಪುಷ್ಪನಮನ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು
ಹುಣಸೂರಿನ ರಂಗನಾಥ ಬಡಾವಣೆಯಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ ಸೇರಿದಂತೆ ರಾಜಕೀಯ ಮುಖಂಡರು ಆಂಜನೇಯಸ್ವಾಮಿಗೆ ಪುಷ್ಪನಮನ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು   

ಹುಣಸೂರು: ನಗರದಲ್ಲಿ ಭಾನುವಾರ 30ನೇ ಹನುಮಂತೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ರಂಗನಾಥಸ್ವಾಮಿ ಬಡಾವಣೆಯಲ್ಲಿ ಬೆಳಿಗ್ಗೆ 11.30ಕ್ಕೆ ಆಂಜನೇಯಸ್ವಾಮಿ ಉತ್ಸವ ಮೂರ್ತಿಗೆ ಶಾಸಕ ಜಿ.ಡಿ.ಹರೀಶ್ ಗೌಡ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ, ಎಚ್.ಪಿ.ಮಂಜುನಾಥ್ ಮತ್ತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒಳಗೊಂಡಂತೆ ಮಠಾಧಿಪತಿಗಳು ಪುಷ್ಟಾರ್ಚನೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ಜಿಲ್ಲಾಡಳಿತ ನಿಗದಿಪಡಿಸಿದ ಮಾರ್ಗದಲ್ಲಿ ಮೆರವಣಿಗೆ ಸಾಗಿತು.

ಬೃಹತ್ ಮೆರವಣಿಗೆಯಲ್ಲಿ ನಗರದ ಜೆ.ಎಲ್.ಬಿ ರಸ್ತೆಯ ಜನಜಾಗೃತಿ ವೇದಿಕೆ ಮತ್ತು ವರ್ತಕರ ಸಂಘ, ಶ್ರೀರಾಮ ಮಂದಿರ ಕಲ್ಕುಣಿಕೆ, ಹನುಮಂತೋತ್ಸವ ಸಮಿತಿಯಿಂದ ದತ್ತಾತ್ರೇಯ, ಶಿವಲಿಂಗ, ಕೋದಂಡರಾಮ, ಪಂಚಲೋಹದ ರಾಮ ಲಕ್ಷ್ಮಣ ಮತ್ತು ಸೀತೆ ಉತ್ಸವ ಮೂರ್ತಿ, ಒಳಗೊಂಡಂತೆ 13 ವಿವಿಧ ಗರಡಿ ಮನೆಯಿಂದ ಆಗಮಿಸಿದ ಆಂಜನೇಯ ಉತ್ಸವ ಮೂರ್ತಿಗಳು ಆಕರ್ಷಣೀಯವಾಗಿತ್ತು.

ADVERTISEMENT

ಉತ್ಸವಕ್ಕೆ ಮೆರಗು ನೀಡಿದ ಜಾನಪದ ಕಲಾ ತಂಡಗಳಾದ ನಗಾರಿ, ತಮಟೆ, ಡೊಳ್ಳು, ಮಂಗಳವಾದ್ಯ, ಕೀಲು ಕುದುರೆ, ವೀರಗಾಸೆ, ಕೇರಳ ಚಂಡೆ, ಎಚ್.ಡಿ.ಕೋಟೆ ತಾಲ್ಲೂಕಿನ ಬಸವನ ಮುಂಡಿ ಹಾಡಿಯ ಸೋಲಿಗರ ಬುರುಡೆ ಕುಣಿತ ನೋಡುಗರನ್ನು ಸೆಳೆಯಿತು.

ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಆಗಮನದಿಂದ ಯುವಕರು ಮತ್ತಷ್ಟು ಹುರುಪಿನಲ್ಲಿ ಶ್ರೀರಾಮನ ಘೋಷಣೆ ಹಾಕುವಲ್ಲಿ ತೊಡಗಿದ್ದರು. ಹನುಮಂತೋತ್ಸವ ಮೆರವಣಿಗೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಧ್ಯಾಹ್ನ 3 ಗಂಟೆಗೆ ಉತ್ಸವದಲ್ಲಿ ಭಾಗವಹಿಸಿ ತೆರೆದ ವಾಹನದಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡರೊಂದಿಗೆ ಸಾಥ್ ನೀಡಿದರು. ಇವರೊಂದಿಗೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಶರವಣ, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಎಚ್.ವೈ.ಮಹದೇವ್ ಹಾಗೂ ನಗರಸಭೆ ಸದಸ್ಯರಿದ್ದರು.

ಈ ಬಾರಿ ಯುವಸಮುದಾಯ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಡಿ.ಜೆಗೆ ಕುಣಿದು ಕುಪ್ಪಳಿಸಿದದರು. ಕೇಸರಿ ಬಾವುಟಗಳ ಹಾರಾಟ ನಗರದಲ್ಲೆಡೆ ಆವರಿಸಿಕೊಂಡಿತ್ತು.

ಹನುಮಂತೋತ್ಸವದಲ್ಲಿ ಭಾಗವಹಿಸಲು ವಿವಿಧ ಸ್ಥಳದಿಂದ ಹರಿದು ಬಂದ ಭಕ್ತಸಾಗರ

ದಾಸೋಹ: ಹನುಮಂತೋತ್ಸವ ಸಂಬಂಧ ಉತ್ಸವ ತೆರಳುವ ಮಾರ್ಗದಲ್ಲಿ ಭಕ್ತರಿಗೆ ಸಂಘ ಸಂಸ್ಥೆ, ವರ್ತಕರು, ಚಿನ್ನಬೆಳ್ಳಿ ವ್ಯಾಪಾರಿಗಳು, ಮುಸ್ಲಿಂ ಸಮುದಾಯದವರಿಂದ ಮಜ್ಜಿಗೆ, ಪಾನಕ, ನೀರು ಮತ್ತು ಪ್ರಸಾದ ವಿತರಣೆ ನಡೆಯಿತು. ನಗರದ ಗೋಕುಲ ಬಡಾವಣೆ ಮುಖ್ಯ ರಸ್ತೆ ಸಂಪೂರ್ಣ ಕೇಸರಿ ಬಂಟಿಂಗ್ಸ್‌ನಿಂದ ಅಲಂಕರಿಸಿ ದೀಪಾಲಂಕಾರದಿಂದ ಗಮನ ಸೆಳೆದಿತ್ತು.

ಮಂಜುನಾಥ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೆರವಣಿಗೆ ಅಂತ್ಯಗೊಂಡಿತು.

ಹನುಮಂತೋತ್ಸವದಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಸಬವನ ಮುಂಡಿ ಹಾಡಿಯ ಸೋಲಿಗರ ಕುಣಿತ
ಉತ್ಸವದಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಮತ್ತು ಮಠಾಧಿಪತಿಗಳು ತೆರದ ವಾಹನದಲ್ಲಿ ಸಾಗಿದರು

1500 ಪೊಲೀಸರ ನಿಯೋಜನೆ

ಹನುಮಂತೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಎಸ್‌ಪಿ ವಿಷ್ಣುವರ್ಧನ್ ಮತ್ತು ಸುಂದರ್ ರಾಜ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪ್ರತಿಯೊಂದು ವೃತ್ತ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜಿಸಿದ್ದರು. ಕಾರ್ಖಾನೆ ರಸ್ತೆಯಲ್ಲಿ ಮಸೀದಿ ಮುಂಭಾಗದಲ್ಲಿ ಪೊಲೀಸ್ ತುಕಡಿ ನಿಯೋಜಿಸಿ ಬ್ಯಾರಿಕೇಡ್ ಅಳವಡಿಸಿದ್ದರು. ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.