ADVERTISEMENT

ಹರ್ಷಿತಾ ನಾಯಕ್‌ ಸಾಧನೆ

ಐಸಿಎಆರ್‌–ಜೆಆರ್‌ಎಫ್‌: ಕೆಟಗರಿಯಲ್ಲಿ 2ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 2:12 IST
Last Updated 13 ನವೆಂಬರ್ 2020, 2:12 IST
ಹರ್ಷಿತಾ ನಾಯಕ್‌
ಹರ್ಷಿತಾ ನಾಯಕ್‌   

ಮೈಸೂರು: ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌) ನಡೆಸಿದ 2020–21ನೇ ಸಾಲಿನ ಕಿರಿಯ ಸಂಶೋಧನಾ ಫೆಲೋಷಿಪ್‌ (ಜೆಆರ್‌ಎಫ್‌) ಪರೀಕ್ಷೆಯಲ್ಲಿ ಜಿಲ್ಲೆಯ ಎಸ್‌.ಹರ್ಷಿತಾ ನಾಯಕ್‌ ಉತ್ತಮ ಸಾಧನೆ ತೋರಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಅಖಿಲ ಭಾರತ ಮಟ್ಟದ ಪರೀಕ್ಷೆಯ ಫಲಿತಾಂಶ ನ.7 ರಂದು ಪ್ರಕಟವಾಗಿದೆ. ನಂಜನಗೂಡು ತಾಲ್ಲೂಕಿನ ಬೊಕ್ಕಳ್ಳಿ ಗ್ರಾಮದ ಹರ್ಷಿತಾ ಅವರಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ವಿಭಾಗದಲ್ಲಿ ಎರಡನೇ ರ‍್ಯಾಂಕ್‌ ಲಭಿಸಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನಲ್ಲಿ ಬಿಎಸ್‌ಸಿ (ಅಗ್ರಿ ಕಲ್ಚರಲ್‌ ಮಾರ್ಕೆಟಿಂಗ್‌) ಪದವಿಯನ್ನು ಡಿಸ್ಟಿಂಕ್ಷನ್‌ನೊಂದಿಗೆ ಪೂರೈಸಿರುವ ಅವರು ಕೃಷಿ ವಿಷಯದಲ್ಲಿ ಉನ್ನತ ಶಿಕ್ಷಣದ ಕನಸು ಹೊಂದಿದ್ದಾರೆ.

ADVERTISEMENT

‘ಕಳೆದ ವರ್ಷದ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಉತ್ತಮ ರ‍್ಯಾಂಕ್‌ ಪಡೆದುಕೊಂಡಿ ದ್ದರು. ಅವರಿಂದ ಉತ್ತೇಜನ ಪಡೆದು ನಾನೂ ಪರೀಕ್ಷೆ ಬರೆದೆ. ಕೆಟಗರಿಯಲ್ಲಿ ಎರಡನೇ ರ‍್ಯಾಂಕ್‌ ಲಭಿಸಿರುವುದು ಸಂತಸ ಉಂಟುಮಾಡಿದೆ’ ಎಂದು ಹರ್ಷಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಿಜಿಸಿಇಟಿ ಪರೀಕ್ಷೆಯನ್ನೂ ಬರೆದಿದ್ದು, ಅದರ ಫಲಿತಾಂಶ ಮುಂದಿನ ಬುಧವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಅಲ್ಲೂ ಉತ್ತಮ ರ‍್ಯಾಂಕ್‌ ಪಡೆಯುವ ನಿರೀಕ್ಷೆಯಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಶಿಕ್ಷಣ ಮುಂದುವರಿಸಲು ಬಯಸಿದ್ದೇನೆ. ಪಿಎಚ್‌.ಡಿ ಮಾಡುವ ಜತೆಗೆ ಯುಜಿಸಿ ‘ಎನ್‌ಇಟಿ’ ಪಾಸ್ ಮಾಡಬೇಕೆಂಬುದು ನನ್ನ ಗುರಿ’ ಎಂದರು.

ಬೊಕ್ಕಳ್ಳಿ ಗ್ರಾಮದ ಕೃಷಿಕರಾದ ಸ್ವಾಮಿನಾಯಕ ಮತ್ತು ಮೀನಾಕ್ಷಿ ದಂಪತಿಯ ಪುತ್ರಿ ಹರ್ಷಿತಾ ಅವರು ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡಿನಲ್ಲಿ ಪಡೆದಿದ್ದಾರೆ. ಆರನೇ ತರಗತಿಯಿಂದ ಪಿಯುಸಿ ವರೆಗೆ ಮೈಸೂರಿನ ನವೋದಯ ಶಾಲೆಯಲ್ಲಿ ಕಲಿತಿದ್ದಾರೆ. ಸೋದರಮಾವ ತಗಡೂರಿನ ಗೋಪಿನಾಥ್‌ ಅವರು ಇವರ ಸಾಧನೆಗೆ ನೆರವಾಗಿ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.