ಎಚ್.ಡಿ.ಕೋಟೆ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿ.ಸುರೇಶ್ ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಅವರು ಸೇವೆಯಿಂದ ಅಮಾನತುಗೊಳಿಸಿ ಯಾದಗಿರಿ ನಗರಸಭೆ ಕಂದಾಯ ಅಧಿಕಾರಿ ಹುದ್ದೆ ನೀಡಿ ಆದೇಶ ಹೊರಡಿಸಿದ್ದಾರೆ.
ಎಚ್.ಡಿ.ಕೋಟೆ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಅವರು, ಕಂದಾಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅನಧಿಕೃತವಾಗಿ ಕಂದಾಯ ಭೂಮಿಗೆ ಖಾತೆ ಮಾಡಿಕೊಟ್ಟಿರುವ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ವರದಿ ಕೊಡುವಂತೆ ಮಂಡ್ಯ ಜಿಲ್ಲೆ ಯೋಜನಾ ನಿರ್ದೇಶಕರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.
ಈ ಸಂಬಂಧ ದಾಖಲಾತಿ ಕೊಡಲು ಪಿ.ಸುರೇಶ್ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಯಾವುದೇ ದಾಖಲೆಗಳನ್ನು ಸಲ್ಲಿಸಿರಲಿಲ್ಲ ಮತ್ತು ದೂರವಾಣಿ ಕರೆಗೂ ಸ್ವಂದಿಸಲಿಲ್ಲ. ಲಿಖಿತವಾಗಿ ಸಮಜಾಯಿಷಿ ಕೇಳಿದರೂ ಕೊಡಲಿಲ್ಲ. ಹಾಗಾಗಿ ತನಿಖೆಗೆ ಸಹಕರಿಸದ ಮತ್ತು ಕರ್ತವ್ಯಲೋಪ ಹಿನ್ನೆಯಲ್ಲಿ ಸೇವೆಯಿಂದ ಅಮಾನತುಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.