ADVERTISEMENT

ಚಾಮುಂಡೇಶ್ವರಿ ಸನ್ನಿಧಿಯಿಂದಲೇ ಹೊಸ ಸಂದೇಶ: ಕುಮಾರಸ್ವಾಮಿ

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌– ಉಪ ಮೇಯರ್ ಚುನಾವಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 20:12 IST
Last Updated 23 ಫೆಬ್ರುವರಿ 2021, 20:12 IST
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ   

ಮೈಸೂರು: ‘ಕಾಂಗ್ರೆಸ್‌ ಮತ್ತು ಬಿಜೆಪಿ ನಮ್ಮನ್ನು ಹೀನಾಯವಾಗಿ ನಡೆಸಿ ಕೊಂಡಿದ್ದು, ಎರಡೂ ಪಕ್ಷಗಳ ಮೇಲೆ ನಮಗೆ ಒಲವಿಲ್ಲ’ ಎಂದಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ದೇವೇಗೌಡರ ಜೊತೆ ಚರ್ಚಿಸಿ ಬುಧವಾರ ಬೆಳಿಗ್ಗೆ ಮೈತ್ರಿಯ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಮಂಗಳವಾರ ಇಲ್ಲಿ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌– ಉಪ ಮೇಯರ್ ಚುನಾವಣೆಗೆ ಸಂಬಂಧಿಸಿ ಮೈತ್ರಿಯ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡೇಶ್ವರಿ ಸನ್ನಿಧಿಯಿಂದಲೇ ಹೊಸ ಸಂದೇಶ ನೀಡುವುದಾಗಿ ಹೇಳಿದರು.

‘ಈ ಹಿಂದೆ, ಮೈತ್ರಿಗಾಗಿ ರಾಜ್ಯ ಮಟ್ಟದ ನಾಯಕರು ಮಾತುಕತೆ ನಡೆಸಿದ್ದರು. ಈಗ ಸಹಕಾರ ಕೋರಿ ಮೇಲ್ಮಟ್ಟದ ಯಾವೊಬ್ಬ ಕಾಂಗ್ರೆಸ್‌ ನಾಯಕರೂ ಚರ್ಚಿಸಿಲ್ಲ. ಸಣ್ಣಪುಟ್ಟವರು ಮಾತನಾಡಿದರೆ ಪ್ರಯೋಜನವಾಗುವುದಿಲ್ಲ. ಈಗ, ಮೈತ್ರಿಗಾಗಿ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮೊಬೈಲ್‌ ಮೂಲಕ ಸಂಪರ್ಕಿಸಿದ್ದಾರೆ’ ಎಂದರು.

ADVERTISEMENT

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ‘ಜೆಡಿಎಸ್‌ ಒಂದು ಪಕ್ಷವೇ ಅಲ್ಲ ಅನ್ನೋರ ಜೊತೆ ಮೈತ್ರಿ ಯಾಕೆ?’ ಎಂದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ‘ಈಗಾಗಲೇ ಮುಖ್ಯಮಂತ್ರಿಯಾಗಿದ್ದೀನಿ ಎಂಬ ಕನಸು ಕಾಣುತ್ತಿದ್ದಾರೆ. ಮುಂದಿನ‌ ಮುಖ್ಯಮಂತ್ರಿ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಜೆಡಿಎಸ್‌ ಬಗ್ಗೆಯೇ ತುಚ್ಛವಾಗಿ ಮಾತನಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಈ ಹಿಂದೆ ಇದ್ದ ಸಂಸ್ಕೃತಿಯೇ ಬೇರೆ; ಇವರು ಹೋದ ಮೇಲೆ ಇರುವ ಸಂಸ್ಕೃತಿಯೇ ಬೇರೆ. ಅವರ ನಡವಳಿಕೆ, ಅಗೌರವದ ಎಲ್ಲ ಮಾತು ಕೇಳಿದ್ದೇವೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.