ADVERTISEMENT

ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:04 IST
Last Updated 28 ಜುಲೈ 2024, 14:04 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದರು
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದರು   

ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭಾನುವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮೊದಲಿಗೆ ಶ್ರೀಕಂಠೇಶ್ವರಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ದೇಗುಲದ ಒಳಾವರಣದಲ್ಲಿರುವ ಗಣಪತಿ, ಸುಬ್ರಹ್ಮಣ್ಯ, ಪಾರ್ವತಮ್ಮ ದೇವರ ಗುಡಿಗಳಿಗೂ ತೆರಳಿ ದರ್ಶನ ಪಡೆದರು. ದೇವಾಲಯದ ವತಿಯಿಂದ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಎಷ್ಟೇ ದೇವಾಲಯಗಳನ್ನು ಸುತ್ತಿದರೂ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದಿಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಈ ಹಿಂದೆ ಅವರಪ್ಪನಾಣೆ ಕುಮಾರಸ್ವಾಮಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ, ನಾನು ಗೆದ್ದು ಕೇಂದ್ರ ಸಚಿವನಾಗಿಲ್ಲವೇ ಹಾಗೆಯೇ ಅವರು ನೀಡಿದ ಹೇಳಿಕೆಗಳಿಗೆ ತದ್ವಿರುದ್ಧವಾಗಿ ನನಗೆ ಒಳ್ಳೆಯದೇ ನಡೆಯುತ್ತದೆ. ಅದರಲ್ಲಿ ಯಾವೂದೇ ಸಂಶಯ ಬೇಡ’ ಎಂದರು.

ADVERTISEMENT

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡ ಸಾ.ರಾ.ಮಹೇಶ್‍ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ಸಂಜಯ್‌ ಗೌಡ ಇದ್ದರು.

ಪ್ರವಾಸಿ ಮಂದಿರಕ್ಕೆ ಬೀಗ; ಆಕ್ರೋಶ

ದೇವರದರ್ಶನ ಮುಗಿಸಿದ ಬಳಿಕ ವಿಶ್ರಾಂತಿ ಪಡೆಯಲೆಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು  ಬೈಪಾಸ್‍ ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಆದರೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಿದ್ದು ಸ್ಥಳದಲ್ಲಿ ಯಾವೊಬ್ಬ ಸಿಬ್ಬಂದಿಯೂ ಇರಲಿಲ್ಲ. ಸಚಿವರ ಭದ್ರತಾ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಮುಖಂಡ ಸಾ.ರಾ.ಮಹೇಶ್ ಅವರು ಸಚಿವರ ಪ್ರವಾಸದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಉದ್ಧಟತನ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 10 ನಿಮಿಷಗಳ ಕಾಲ ಕಾರಿನಲ್ಲಿಯೇ ಕುಳಿತಿದ್ದ ಕುಮಾರಸ್ವಾಮಿ ಅವರು ಬಳಿಕ ನಿರ್ಗಮಿಸಿದರು. ಘಟನೆ ಕುರಿತು ಲೋಕೋಪಯೋಗಿ ಇಲಾಖೆ ಎಇಇ ಸತ್ಯನಾರಾಯಣ ಸುದ್ದಿಗಾರರಿಗೆ ಮಾತನಾಡಿ ‘ಕಪಿಲಾ ನದಿಯಲ್ಲಿ ಪ್ರವಾಹ ಪರಿಸ್ಥಿತಿಯಿರುವುದರಿಂದ ಪ್ರವಾಸಿ ಮಂದಿರದಲ್ಲಿನ ಪೀಠೋಪಕರಣಗಳನ್ನು ಕಟ್ಟಡದ ಮೇಲ್ಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿತ್ತು. ಕೇಂದ್ರ ಸಚಿವರ ಪ್ರವಾಸದ ಬಗ್ಗೆಯೂ ನಮಗೆ ಮಾಹಿತಿ ಲಭ್ಯವಿಲ್ಲದ್ದರಿಂದ ಅಚಾತುರ್ಯವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.