ಮೈಸೂರು: ‘ವೈದ್ಯರು ಚಿಕಿತ್ಸೆ ನೀಡುವುದರೊಂದಿಗೆ, ರೋಗಿಗಳ ಮನೋಬಲ ಹೆಚ್ಚಿಸುವ ಕೆಲಸ ಮಾಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉಷಾರಾಣಿ ಸಲಹೆ ನೀಡಿದರು.
ವಕೀಲರ ಸಂಘ ಹಾಗೂ ಸುಯೋಗ ಆಸ್ಪತ್ರೆ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೃದಯ ಮತ್ತು ಸಕ್ಕರೆ ಕಾಯಿಲೆ ಉಚಿತ ತಪಾಸಣೆ ಹಾಗೂ ಅರಿವಿನ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ನ್ಯಾಯಾಧೀಶರು ತಪ್ಪು ಮಾಡಿದರೆ ತಿದ್ದಲು ಮೇಲೆ ಮತ್ತೊಬ್ಬ ನ್ಯಾಯಮೂರ್ತಿ ಇದ್ದಾರೆ. ಆದರೆ ವೈದ್ಯ ಮಾಡಿದ ತಪ್ಪು ಒಂದು ಜೀವ ಕಸಿಯಬಹುದು. ಹೀಗಾಗಿ ವೈದ್ಯರನ್ನು ಹಲವರು ದೇವರ ಸ್ಥಾನದಲ್ಲಿ ನೋಡುತ್ತಾರೆ. ಅವರ ಸಲಹೆಗಳಿಂದಲೇ ಅರ್ಧ ರೋಗ ಕಡಿಮೆಯಾದ ಅನೇಕ ಉದಾಹರಣೆ ಇದೆ’ ಎಂದರು.
ಸುಯೋಗ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ‘ವೈದ್ಯರಿಗೆ ತಂತ್ರಜ್ಞಾನದೊಂದಿಗೆ ಸಂವಹನ ಸಾಮರ್ಥ್ಯ ಬೇಕು. ರೋಗಿ ಹಾಗೂ ವೈದ್ಯರ ನಡುವಿನ ಸಂಬಂಧವು ವಿಜ್ಞಾನ ಲೋಕವನ್ನೂ ವಿಸ್ಮಯಗೊಳಿಸುತ್ತದೆ. ವೈದ್ಯಕೀಯ ಕ್ಷೇತ್ರ ವಾಣಿಜ್ಯಮಯವಾದ ಬಳಿಕ ಈ ಸಂಬಂಧ ಕ್ಷೀಣಿಸುತ್ತಿದೆ’ ಎಂದು ಹೇಳಿದರು.
‘ವೈದ್ಯರಿಗೆ ತಂತ್ರಜ್ಞಾನದೊಂದಿಗೆ ಮಾತುಕತೆ ಸಾಮರ್ಥ್ಯ ಇರಬೇಕು. ರೋಗಿ ಹಾಗೂ ವೈದ್ಯರ ಸಂಬಂಧ ವಿಜ್ಞಾನ ಲೋಕವನ್ನು ಮೀರಿದ್ದು, ವೈದ್ಯಕೀಯ ಕ್ಷೇತ್ರ ವಾಣಿಜ್ಯಮಯವಾದ ಬಳಿಕ ಆ ಸಂಬಂಧ ಕ್ಷೀಣಿಸುತ್ತದೆ. ವೈದ್ಯರ ಕೆಲಸಕ್ಕೆ ಸ್ಥಾಪಿತ ಸಿದ್ಧಾಂತ ಇಲ್ಲ. ಅನುಭವ, ವಿಮರ್ಶೆಯಿಂದ ಕೆಲಸ ಮಾಡುತ್ತಾನೆ’ ಎಂದರು.
‘ವಕೀಲ ವೃತ್ತಿಯಲ್ಲಿ ಒತ್ತಡ ಹೆಚ್ಚಿದೆ. ಒತ್ತಡ ಹೃದಯಾಘಾತಕ್ಕೆ ಪ್ರಮುಖ ಕಾರಣ. ವಕೀಲರು, ನ್ಯಾಯಾಧೀಶರ ವೃತ್ತಿಯಲ್ಲಿ ಒತ್ತಡ ಕಡಿಮೆ ಮಾಡಬಲ್ಲ ದೊಡ್ಡ ಬದಲಾವಣೆ ಅಗತ್ಯವಿದೆ. ಹೃದಯಾಘಾತ ತಡೆಯಲು ನಾವೇ ಸ್ವಯಂ ವೈದ್ಯರಾಗಬೇಕು. ನಾವು ಗಾಡಿಗೆ ಪೆಟ್ರೋಲ್ ಹಾಕಲು ಯೊಚಿಸುತ್ತೇವೆ. ದೇಹಕ್ಕೆ ಶಕ್ತಿ ನೀಡುವ ಆಹಾರ ಸೇವಿಸುವಾಗ ಚಿಂತಿಸುವುದಿಲ್ಲ. ಇದರಿಂದ ಆಹಾರದ ಸಮಸ್ಯೆ ಹೆಚ್ಚುತ್ತಿದೆ’ ಎಂದು ಹೇಳಿದರು.
ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಲೋಕೇಶ್, ಕಾರ್ಯದರ್ಶಿ ಎ.ಜಿ.ಸುಧೀರ್, ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.