ADVERTISEMENT

ಕೋವಿಡ್‌ ಲಸಿಕೆ ಪಡೆಯಲು ನೂಕುನುಗ್ಗಲು

ಬೀದಿಬದಿ ವ್ಯಾಪಾರಿಗಳಿಗಾಗಿನ ಶಿಬಿರದಲ್ಲಿ ಅನ್ಯರ ಪ್ರವೇಶ l ವ್ಯಾಪಕ ಪ್ರಚಾರ ಕಾರಣ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 3:34 IST
Last Updated 17 ಜೂನ್ 2021, 3:34 IST
ಕೋವಿಡ್ ಲಸಿಕೆ ಪಡೆಯಲು ಅಂಗವಿಕಲರು ಮೈಸೂರಿನ ಕಿವುಡ–ಮೂಗರ ಶಾಲೆಯಲ್ಲಿ ಬುಧವಾರ ಸಾಲಿನಲ್ಲಿ ಕುಳಿತಿದ್ದ ದೃಶ್ಯ ಕಂಡು ಬಂತು
ಕೋವಿಡ್ ಲಸಿಕೆ ಪಡೆಯಲು ಅಂಗವಿಕಲರು ಮೈಸೂರಿನ ಕಿವುಡ–ಮೂಗರ ಶಾಲೆಯಲ್ಲಿ ಬುಧವಾರ ಸಾಲಿನಲ್ಲಿ ಕುಳಿತಿದ್ದ ದೃಶ್ಯ ಕಂಡು ಬಂತು   

ಮೈಸೂರು: ಜಿಲ್ಲಾಡಳಿತ ಮತ್ತು ಪಾಲಿಕೆಯ‌‘ಡೇನಲ್ಮ್’ ಯೋಜನೆಯ ಪಟ್ಟಣ ವ್ಯಾಪಾರ ಸಮಿತಿ ವತಿಯಿಂದ ಇಲ್ಲಿನ ಪುರಭವನದಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಬುಧವಾರ ಆಯೋಜಿಸಲಾಗಿದ್ದ ‘ಕೋವಿಡ್ ಲಸಿಕಾ ಕಾರ್ಯಕ್ರಮ’ದಲ್ಲಿ ನೂಕುನುಗ್ಗಲು ಉಂಟಾಯಿತು.

ಪಾಲಿಕೆ ವತಿಯಿಂದ ಗುರುತಿನ ಚೀಟಿ ನೀಡಲಾಗಿದ್ದ 2 ಸಾವಿರ ಮಂದಿ ಹಾಗೂ ಗುರುತಿನ ಚೀಟಿ ಹೊಂದಿರದೇ ಇರುವ ಇತರರಿಗೂ ಲಸಿಕೆ ನೀಡಲಾಗುತ್ತಿತ್ತು. ಇದಕ್ಕೆ ವ್ಯಾಪಕವಾದ ಪ್ರಚಾರ ನೀಡಿದ್ದರಿಂದ ಒಮ್ಮೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರು.

ವ್ಯಾಪಾರಸ್ಥರ ಜತೆಗೆ ಅವರ ಕುಟುಂಬದವರು, ಅವರ ಮನೆಯ ಅಕ್ಕಪಕ್ಕದವರು, ಸ್ನೇಹಿತರು ಸೇರಿದಂತೆ ಇತರೆ ಸಾರ್ವಜನಿಕರೂ ಸಾಲಿನಲ್ಲಿ ನಿಂತರು. ಇದರಿಂದ ಹಲವು ಹೊತ್ತು ನೂಕುನುಗ್ಗಲು ಉಂಟಾಯಿತು.

ADVERTISEMENT

ಜನದಟ್ಟಣೆ ಅಧಿಕವಾಗಿ ಯಾವುದೇ ಅಂತರ ಕಾಪಾಡದೇ ಜನರು ಮುಗಿ
ಬಿದ್ದರು. ಕೊನೆಗೆ, ಸ್ಥಳಕ್ಕೆ ಪೊಲೀಸರು ಬಂದು ಜನರನ್ನು ನಿಯಂತ್ರಿಸಿದರು.

ಪುರಭವನದ ಆವರಣದಲ್ಲಿನ ಗೇಟನ್ನೇ ಬಂದ್ ಮಾಡಲಾಯಿತು. ಭದ್ರತಾ ಸಿಬ್ಬಂದಿ ಗೇಟಿನಲ್ಲಿಯೇ ಜನರನ್ನು ತಡೆದರು. ಒಳಗೆ ಸೇರಿದ್ದವರು ಒಬ್ಬರ ಮೇಲೋಬ್ಬರಂತೆ ಸಾಲಿನಲ್ಲಿ ಮುಗಿಬಿದ್ದರು. ಪುರಭವನದ ದ್ವಾರದಲ್ಲೂ ಭದ್ರತಾ ಸಿಬ್ಬಂದಿ ನಿಂತು ಒಂದಿಬ್ಬರನ್ನು ಮಾತ್ರವೇ ಒಮ್ಮೆಗೆ ಒಳ ಬಿಡುತ್ತಿದ್ದರು. ಜನರನ್ನು ನಿಯಂತ್ರಿಸುವಲ್ಲಿ ಭದ್ರತಾ ಸಿಬ್ಬಂದಿ ಹೈರಣಾದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆಯ ಹೆಚ್ಚುವರಿ ಆಯುಕ್ತ ಶಶಿಕುಮಾರ್, ‘ವ್ಯಾಪಕವಾಗಿ ಪ್ರಚಾರ ನೀಡಿದ್ದರಿಂದ ಜನದಟ್ಟಣೆ ಅಧಿಕವಾಗಿತ್ತು. 423 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ ನೀಡಲಾ
ಗಿದೆ. ಸದ್ಯಕ್ಕೆ, ಇವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಮುಂದೂಡಲಾ
ಗಿದೆ’ ಎಂದು ತಿಳಿಸಿದರು.

ಇಲ್ಲಿ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಬೇಕಿದ್ದ ಸಚಿವ ಎಸ್.ಟಿ.ಸೋಮಶೇಖರ್ ಗೈರಾದರು. ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಹೆಚ್ಚುವರಿ ಆಯುಕ್ತ ಶಶಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.