ADVERTISEMENT

ಹಿಮಾಲಯ ಚಾರಣಿಗರಿಗೆ ಬೀಳ್ಕೊಡುಗೆ

ಚಾರಣ ತಂಡಕ್ಕೆ ಹಲವರಿಂದ ಧನಸಹಾಯ; 12 ಹಾಡಿಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 10:47 IST
Last Updated 29 ಏಪ್ರಿಲ್ 2019, 10:47 IST
ಹಿಮಾಲಯ ಚಾರಣಕ್ಕೆ ಸಜ್ಜಾಗಿರುವ ಮೈಸೂರಿನ ಯುವತಿಯರು ಹಾಗೂ ಗಿರಿಜನ ಹಾಡಿಯ ಮಕ್ಕಳಿಗೆ ರಂಗಾಯಣದ ಶಿಬಿರದಲ್ಲಿ ಶುಭ ಕೋರಲಾಯಿತು
ಹಿಮಾಲಯ ಚಾರಣಕ್ಕೆ ಸಜ್ಜಾಗಿರುವ ಮೈಸೂರಿನ ಯುವತಿಯರು ಹಾಗೂ ಗಿರಿಜನ ಹಾಡಿಯ ಮಕ್ಕಳಿಗೆ ರಂಗಾಯಣದ ಶಿಬಿರದಲ್ಲಿ ಶುಭ ಕೋರಲಾಯಿತು   

ಮೈಸೂರು: ಹಿಮಾಲಯ ಚಾರಣಕ್ಕೆ ಸಜ್ಜಾಗಿರುವ ಮೈಸೂರು ನಗರದ ಯುವತಿಯರಿಗೆ ಹಾಗೂ ಗಿರಿಜನ ಶಾಲೆಯ ಮಕ್ಕಳಿಗೆ ರಂಗಾಯಣದ ವನರಂಗದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾನುವಾರ ಶುಭ ಹಾರೈಸಿ, ಬೀಳ್ಕೊಡಲಾಯಿತು.

ಟೈಗರ್ ಅಡ್ವೆಂಚರ್ ಫೌಂಡೇಷನ್ ಇಂಡಿಯಾ ಮತ್ತು ಲೇಡಿಸ್‌ ಸರ್ಕಲ್‌ ಇಂಡಿಯಾ ಸಹಯೋಗದಲ್ಲಿ ‘ಆಶಾ 2019’ ಚಾರಣಕ್ಕೆ ತಂಡ ಸಜ್ಜುಗೊಂಡಿದ್ದು, ತಂಡದಲ್ಲಿ ಹೊಸಹಳ್ಳಿಯ ಎಚ್‌.ಡಿ.ಕೋಟೆ ತಾಲ್ಲೂಕಿನ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದ 12 ಹಾಡಿಯ ಮಕ್ಕಳು ಭಾಗವಹಿಸುತ್ತಿದ್ದಾರೆ. ಈ ಶಾಲೆಯ ಎರಡು ತಂಡ ಕಳೆದೆರಡು ವರ್ಷದಿಂದ ಯಶಸ್ವಿ ಚಾರಣ ನಡೆಸಿದ್ದು ವಿಶೇಷ.

ಒಟ್ಟು 42 ಜನರು ಮೇ 2ರಂದು ಪ್ರಯಾಣ ಬೆಳೆಸಲಿದ್ದು, ಟೈಗರ್‌ ಅಡ್ವೆಂಚರ್ಸ್‌ ಫೌಂಡೇಷನ್ ಅಧ್ಯಕ್ಷ ಡಿ.ಎಸ್‌.ಡಿ. ಸೋಲಂಕಿ,ರಿಯಾ ಸೋಲಂಕಿ ನೇತೃತ್ವದಲ್ಲಿ ಲೇಡಿಸ್‌ ಸರ್ಕಲ್‌ನ 22 ಸದಸ್ಯೆಯರು, ನಾಲ್ವರು ಪುರುಷರು, ಹಾಡಿ ಮಕ್ಕಳೊಂದಿಗೆ ಪ್ರಾಂಶುಪಾಲ ಕುಮಾರ್‌, ಎಚ್‌.ಆರ್‌. ಅಧಿಕಾರಿ ಮಹೇಶ್ವರಿ, ವಾರ್ಡನ್‌ ಶ್ರುತಿ ಇರುತ್ತಾರೆ. ಮೇ 2ರಿಂದ ಮೇ 17ರವರೆಗೆ ಚಾರಣ ನಡೆಸಲಿದ್ದಾರೆ.

ADVERTISEMENT

ರಂಗಾಯಣ ನಿರ್ದೇಶಕಿ ಭಾಗರಥಿ ಬಾಯಿ ಕದಂ, ಪ್ರಸಾದನ ಕಲಾವಿದ ಬಿ.ಎಂ.ರಾಮಚಂದ್ರ, ಕಲಾವಿದೆ ಗೀತಾ ಮೋಂಟಡ್ಕ, ಸಂಗಾಪುರ ನಾಗರಾಜ್, ಚಾರಣದ ಸಂಯೋಜಕರಾದ ನಿರ್ಮಲಾ ಮಠಪತಿ ಅವರು ‘ಆಶಾ 2019’ ಫಲಕಕ್ಕೆ ಹಸ್ತಾಕ್ಷರ ಮಾಡುವ ಮೂಲಕ ಶುಭ ಹಾರೈಸಿದರು.

ರಂಗಾಯಣದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಆಲ್‌ ದಿ ಬೆಸ್ಟ್‌ ಎಂದು ಹೇಳಿದರು.

ಚಾರಣಕ್ಕೆ ಅಂದಾಜು ₹ 8.5 ಲಕ್ಷ ಖರ್ಚಾಗಲಿದ್ದು, ಏಳು ದೇಶಗಳು, ಲೇಡಿಸ್‌ ಸರ್ಕಲ್‌ನ 14 ತಂಡಗಳು, ವೈದ್ಯರು, ಸಾಫ್ಟ್‌ವೇರ್‌ ಉದ್ಯಮಿಗಳು, ಶಿಕ್ಷಕರು, ಫಾರ್ಮಾಸಿಸ್ಟ್‌ಗಳು ಸೇರಿದಂತೆ ಹಲವರು ಧನಸಹಾಯ ನೀಡಿದ್ದಾರೆ. ರಿಯಾ ಸೋಲಂಕಿ ಅವರು ತಮಗೆ ಬಂದ ಯುವ ಸಾಹಸಿ ಪುರಸ್ಕಾರದ ₹ 10 ಸಾವಿರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.