ADVERTISEMENT

ಕೊರೊನಾ ವಾರಿಯರ್ಸ್‌ಗೆ ಸಂದ ಗೌರವ: ಡಾ.ಸಿ.ಎನ್.ಮಂಜುನಾಥ್

‘ದಸರಾ ಉದ್ಘಾಟನೆ ನನ್ನ ಜೀವನದಲ್ಲಿ ಮರೆಯಲಾಗದ ಅವಿಸ್ಮರಣೀಯ ಕ್ಷಣ’

ಡಿ.ಬಿ, ನಾಗರಾಜ
Published 17 ಅಕ್ಟೋಬರ್ 2020, 6:11 IST
Last Updated 17 ಅಕ್ಟೋಬರ್ 2020, 6:11 IST
ಡಾ.ಸಿ.ಎನ್.ಮಂಜುನಾಥ್
ಡಾ.ಸಿ.ಎನ್.ಮಂಜುನಾಥ್   

ಮೈಸೂರು: ‘ನಾಡಹಬ್ಬ ಮೈಸೂರು ದಸರಾದ ಉದ್ಘಾಟನೆ ನನ್ನ ಜೀವಿತಾವಧಿಯ ಸೌಭಾಗ್ಯ. ಬಯಸದೆ ಬಂದ ಭಾಗ್ಯವಿದು. ಇದುವರೆಗೂ ನನ್ನ ಸೇವೆಗೆ ಸಿಕ್ಕ ಉನ್ನತ ಪ್ರಶಸ್ತಿ (ಪದ್ಮಶ್ರೀ)ಗಿಂತಲೂ ಇದು ದೊಡ್ಡ ಗೌರವ...’

ಅ.17ರ ಶನಿವಾರ ಬೆಳಿಗ್ಗೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ 410ನೇ ದಸರಾ ಉದ್ಘಾಟಿಸಲಿರುವ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಶುಕ್ರವಾರ ‘ಪ್ರಜಾವಾಣಿ’ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

‘ಅಕ್ಷರಶಃ ಇದು ನನಗೆ ದೊರೆತ ಗೌರವವಲ್ಲ. ಜಗತ್ತನ್ನೇ ಕಾಡುತ್ತಿರುವ ಕೋವಿಡ್‌ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್‌ಗಳಿಗೆ ದೊರೆತ ಗೌರವವಿದು’ ಎಂದು ಹೇಳಿದರು.

ADVERTISEMENT

‘ನಾನು ಮೈಸೂರಿನಲ್ಲೇ ಪಿಯುಸಿ, ಎಂಬಿಬಿಎಸ್‌ ಮಾಡಿದ್ದು. ಸಯ್ಯಾಜಿರಾವ್‌ ರಸ್ತೆಯಲ್ಲಿ ನಿಂತು ಜಂಬೂಸವಾರಿಯನ್ನು ಕಣ್ತುಂಬಿಕೊ ಳ್ಳುತ್ತಿದ್ದೆ. ಗೆಳೆಯರು, ಊರವರು, ಮನೆಯವರು ಸಾಥ್‌ ಕೊಟ್ಟಿದ್ದುಂಟು. ಇದೀಗ ನನಗೆ ದಸರಾ ಉದ್ಘಾಟನೆಯ ಭಾಗ್ಯ ದೊರೆತಿರುವುದು ನನ್ನ ಜೀವನ ಮರೆಯಲಾಗದ ಕ್ಷಣ. ಮೈಮನ ರೋಮಾಂಚನವಾಗುತ್ತಿದೆ’ ಎಂದು ಭಾವುಕರಾದರು.

‘ಸಂಪ್ರದಾಯ ಪಾಲನೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ವಿದ್ಯುತ್‌ ದೀಪಾಲಂಕಾರ ಈಚೆಗಿನ ವರ್ಷಗಳಲ್ಲಿ ಅದ್ಭುತವಾಗಿರುತ್ತದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಹೋಟೆಲ್ ಉದ್ಯಮವೂ ಬೆಳೆದಿದೆ’ ಎಂದು ಹಿಂದಿನ ಹಾಗೂ ಈಗಿನ ದಸರಾವನ್ನು ಮಂಜುನಾಥ್ ವಿಶ್ಲೇಷಿಸಿದರು.

ಅವಿನಾಭಾವ ಸಂಬಂಧ: ‌‘ದಸರೆಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನನ್ನ ತಂದೆ ದಸರಾ ದಿನವೇ ಹುಟ್ಟಿದ್ದರಂತೆ. ಆದ್ದರಿಂದ ಅವರನ್ನು ಚಾಮರಾಜೇಗೌಡ ಅಂತಲೂ ಕರೆಯುತ್ತಿದ್ದರು. ನಾನು ಐದು ವರ್ಷದ ಬಾಲಕನಿದ್ದಾಗ ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡಿದ್ದೆ ಎಂದು ನನ್ನ ತಾಯಿ ಹೇಳುತ್ತಿದ್ದರು’ ಎಂಬುದನ್ನು ಮಂಜುನಾಥ್‌ ನೆನಪಿಸಿಕೊಂಡರು.

‘ನನ್ನ ಪತ್ನಿ ಅನಸೂಯಾ ಚಾಮುಂಡೇಶ್ವರಿಯ ಆರಾಧಕಿ. ಕೋವಿಡ್‌ನ ಸಂಕಷ್ಟದ ಕಾಲದಲ್ಲಿ ತಾಯಿ ಸನ್ನಿಧಾನದಲ್ಲೇ ನನ್ನೊಟ್ಟಿಗೆ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದ್ದಾಳೆ. ಮೈಸೂರಿಗೆ ಬಂದಾಗಲೆಲ್ಲಾ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸುವುದು ಆಕೆಯ ವಾಡಿಕೆ’ ಎಂದು ಹೇಳಿದರು.

ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ

‘ಸರಳ ದಸರಾ ಆಚರಣೆ ಸೂಚ್ಯವಾದುದು. ಈ ಬಾರಿಯ ದಸರಾವನ್ನು ವರ್ಚುವಲ್‌ನಲ್ಲೇ ವೀಕ್ಷಿಸಿ. ಮುಂದಿನ ಬಾರಿ ಹರ್ಷದಿಂದ ಕಣ್ತುಂಬಿಕೊಳ್ಳಿ. ಹಬ್ಬಗಳ ಸಾಲು ಎದುರಾಗಿದ್ದು, ಈ ಬಾರಿ ಎಲ್ಲವೂ ಮನೆಯೊಳಗೆ ಸೀಮಿತವಾಗಿರಲಿ. ಸಂದಿಗ್ಧ ಸನ್ನಿವೇಶದಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ’ ಎಂದು ನಾಡಿನ ಜನರಲ್ಲಿ ಡಾ.ಸಿ.ಎನ್.ಮಂಜುನಾಥ್‌ ಮನವಿ ಮಾಡಿಕೊಂಡರು.

ಹಾಸನದವರಿಗೆ ಅವಕಾಶ

ದಸರಾ ಉದ್ಘಾಟನೆಯ ಅವಕಾಶ ಸತತ ಎರಡನೇ ಬಾರಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಾಧಕರಿಗೆ ಸಿಕ್ಕಿದೆ.

2019ರಲ್ಲಿ 409ನೇ ದಸರಾವನ್ನು ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರದ ಎಸ್‌.ಎಲ್‌.ಭೈರಪ್ಪ ಉದ್ಘಾಟಿಸಿದ್ದರೆ, ಈ ಬಾರಿಯ ದಸರಾವನ್ನು ಚೋಳೇನಹಳ್ಳಿಯವರಾದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಲಿದ್ದಾರೆ.

ಯುವ ಸಮೂಹಕ್ಕೂ ಪರಿಚಯ

‘ನಾಲ್ಕು ಶತಮಾನದಿಂದಲೂ ದಸರೆಯ ಸಂಪ್ರದಾಯ ಪಾಲನೆಯಾಗುತ್ತಿದೆ. ನಮ್ಮ ಸಂಸ್ಕೃತಿ, ದೇಸಿಯತೆಯ ವೈಭವ ವಿಶ್ವಕ್ಕೆ ಪರಿಚಿತಗೊಂಡಿದೆ. ಇದನ್ನು ಯುವ ಪೀಳಿಗೆಗೆ ಪರಿಚಯಿಸುವ ಜೊತೆಗೆ, ಭವಿಷ್ಯದ ಪೀಳಿಗೆಗೂ ಕಾಪಿಡಬೇಕಿದೆ’ ಎಂದು ಮಂಜುನಾಥ್ ತಿಳಿಸಿದರು.

‘ಬೊಂಬೆ ಕೂರಿಸುವಿಕೆ, ಕುಸ್ತಿ ಸೇರಿದಂತೆ ಇನ್ನಿತರೆ ದೇಸಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ದೇಸಿಯತೆಗೆ ವೈಜ್ಞಾನಿಕತೆಯ ಸ್ಪರ್ಶವಿದೆ. ಇದನ್ನು ಆಧುನಿಕತೆಗೂ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.