ADVERTISEMENT

ಸೌಲಭ್ಯ ಕೊರತೆ: ‘ಸೇವೆ’ಗೆ ತೊಡಕು

ಮೈಸೂರಿನ ‘ಜಿಲ್ಲಾಸ್ಪತ್ರೆ’ಗೆ ಬೇಕಾಗಿದೆ ’ಸುಧಾರಣೆಯ ಚಿಕಿತ್ಸೆ‘

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:21 IST
Last Updated 26 ನವೆಂಬರ್ 2025, 4:21 IST
ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯ ಹೊರ ನೋಟ
ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯ ಹೊರ ನೋಟ   

ಮೈಸೂರು: ಬಡವರು, ಮದ್ಯಮ ವರ್ಗದವರಿಗೆ ವೈದ್ಯಕೀಯ ಸೇವೆ ಒದಗಿಸುವ ಪ್ರಮುಖ ಉದ್ದೇಶದೊಂದಿಗೆ ಇಲ್ಲಿನ ಕೆಆರ್‌ಎಸ್‌ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ‘ಜಿಲ್ಲಾಸ್ಪತ್ರೆ’ಗೆ ಅಗತ್ಯವಾಗಿ ಮಾನವ ಸಂಪನ್ಮೂಲ ಸೇರಿದಂತೆ ‘ಹೆಚ್ಚಿನ ಸೌಲಭ್ಯ’ಗಳನ್ನು ತುರ್ತಾಗಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

‘ಸಾಂಕ್ರಾಮಿಕ ರೋಗಗಳ ಆಸ್ಪತ್ರೆ’ಯೂ ಆಗಿರುವ ಇಲ್ಲಿ, ಸದ್ಯ ಹಲವು ಹುದ್ದೆಗಳು ಖಾಲಿ ಇರುವುದು ಹಾಗೂ ಸೌಲಭ್ಯಗಳ ಕೊರತೆ ಕಾರಣದಿಂದಾಗಿ ರೋಗಿಗಳಿಗೆ ‘ವೈದ್ಯಕೀಯ ಸೇವೆ’ ದೊರೆಯುವುದರಲ್ಲಿ ತೊಡಕಾಗಿ ಪರಿಣಮಿಸಿದೆ. ಇದರೊಂದಿಗೆ, ಅಸಹಾಯಕ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು ಎಂಬ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದ್ದು, ಸೌಲಭ್ಯಗಳ ಬೆಂಬಲವನ್ನು ಈ ಆಸ್ಪತ್ರೆಯು ಎದುರು ನೋಡುತ್ತಿದೆ!

ಡಿಎಸ್‌ ಕೂಡ ಪ್ರಭಾರ!: ಸದ್ಯ ಈ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಜಿಲ್ಲಾ ಶಸ್ತ್ರಚಿಕಿತ್ಸಕ (ಡಿಎಸ್‌) ಹುದ್ದೆಯೇ ‘ಪ್ರಭಾರ’ದಲ್ಲಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ಡಾ.ಅಮರನಾಥ್‌ ಅವರು ನಿವೃತ್ತರಾಗಿ ನಾಲ್ಕು ತಿಂಗಳುಗಳು ಕಳೆದಿವೆ. ಪೂರ್ಣಕಾಲಿಕ ‘ಡಿಎಸ್’ ನೇಮಕಾತಿ ಇನ್ನೂ ನಡೆದಿಲ್ಲದಿರುವುದು ಪ್ರಮುಖ ‘ಆಡಳಿತಾತ್ಮಕ ಕ್ರಮ’ಗಳನ್ನು ಕೈಗೊಳ್ಳುವುದಕ್ಕೆ ತೊಡಕಾಗಿ ಪರಿಣಮಿಸಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 

ADVERTISEMENT

ಈ ಆಸ್ಪತ್ರೆಗೆ ತುರ್ತಾಗಿ ಬೇಕಾಗಿರುವ ಸೌಲಭ್ಯಗಳ ಕುರಿತು ಜಿಲ್ಲಾಡಳಿತದಿಂದ ಈಚೆಗೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೈಸೂರಿನವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ವೈದ್ಯಕೀಯ ಪದವೀಧರರೂ ಆಗಿರುವ ಜಿಲ್ಲಾ ಉಸ್ತುವಾರಿ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೂ ತಿಳಿಸಲಾಗಿದೆ.

ಮಾನವ ಸಂಪನ್ಮೂಲ ದ್ವಿಗುಣಗೊಳ್ಳಬೇಕು: ಅಲ್ಲಿ ಈಗಿರುವ ಮಾನವ ಸಂಪನ್ಮೂಲವು ರೋಗಿಗಳ ನಿರ್ವಹಣೆಗೆ ಸಾಲದಾಗಿದೆ. ಈ ಸಂಖ್ಯೆ ದ್ವಿಗುಣಗೊಳ್ಳಬೇಕು. ಅಂತೆಯೇ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು, ಉಪಕರಣಗಳನ್ನು ಒದಗಿಸಬೇಕು. ಇದು ತುರ್ತಾಗಿ ಆಗಬೇಕಾಗಿದೆ ಎಂಬ ಬೇಡಿಕೆಯನ್ನು ಮಂಡಿಸಲಾಗಿದೆ. ಐಪಿಎಚ್‌ಎಸ್‌ (ಇಂಡಿಯನ್‌ ಪಬ್ಲಿಕ್‌ ಹೆಲ್ತ್‌ ಸ್ಟಾಂಡರ್ಡ್‌) ಪ್ರಕಾರ ಸೌಲಭ್ಯಗಳನ್ನು ಹೊಂದಬೇಕಾದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ.

‘ದಿನದಿಂದ ದಿನಕ್ಕೆ ಇಲ್ಲಿಗೆ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ನಗರದೊಂದಿಗೆ ಜಿಲ್ಲೆಯ ವಿವಿಧೆಡೆಯಿಂದ ಹಾಗೂ ನೆರೆಯ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಾರೆ. ಇದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಹೆಚ್ಚಿಸುವ ಕೆಲಸ ನಡೆದಿಲ್ಲ. ಸದ್ಯ ಇಲ್ಲಿ ಸರ್ಜನ್‌ ಕೊರತೆಯೂ ಇದೆ. ಅವಶ್ಯ ತಂತ್ರಜ್ಞರನ್ನು ನೇಮಸದ ಕಾರಣ, ಸಂಜೆ 4ರ ನಂತರ ರಕ್ತಪರೀಕ್ಷೆಗಳು, ಸ್ಕ್ಯಾನಿಂಗ್‌ ಮೊದಲಾದವು ನಡೆಯುವುದಕ್ಕೆ ತೊಂದರೆಯಾಗಿದೆ. ಹೊರಗಡೆ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಂಡೊಸ್ಕೋಪಿ ಸೇರಿದಂತೆ ಕೆಲವು ಯಂತ್ರಗಳಿದ್ದರೂ ಅವುಗಳನ್ನು ಉಪಯೋಗಿಸಲು ತಜ್ಞರು ಇಲ್ಲ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಸಂಪೂರ್ಣ ಬಳಸುವುದಕ್ಕೆ... ‘

300 ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಸದ್ಯ 200 ಹಾಸಿಗೆಗಳನ್ನು ಬಳಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮುನ್ನಡೆಸಲು ಸಿಬ್ಬಂದಿಯ ಕೊರತೆಯು ಅಡ್ಡಿ ಉಂಟು ಮಾಡುತ್ತಿದೆ. ಸದ್ಯ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ನಿರ್ವಹಿಸಲಾಗುತ್ತಿದೆ’ ಎಂದು ತಿಳಿಸುತ್ತಾರೆ ಅಲ್ಲಿನ ಸಿಬ್ಬಂದಿ. ಈ ನಡುವೆ ಇಲ್ಲಿ ಅರೆವೈದ್ಯಕೀಯ ಕೋರ್ಸ್‌ ಮತ್ತು ಬಿ ಎಸ್ಸಿ. ನರ್ಸಿಂಗ್‌ ಕಾಲೇಜು ಪ್ರಾರಂಭಿಸಲು ಅನುಮತಿ ಕೋರಲಾಗಿದೆ. ವೈದ್ಯಕೀಯ ಕಾಲೇಜುಗಳಿಂದ ಪಿಜಿ ವೈದ್ಯರನ್ನು ಹೆಚ್ಚಾಗಿ ಮೆಡಿಸನ್‌ ಸರ್ಜರಿ ಒಬಿಜಿ ಆರ್ಥೋ ವಿಭಾಗಕ್ಕೆ ನೇಮಿಸಲು ಕ್ರಮ ಕೈಗೊಳ್ಳುವಂತೆಯೂ ಕೋರಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. 

- ಏನೇನು ಬೇಕೆಂದು ಕೇಳಲಾಗಿದೆ? 

* ಸಿಟಿ/ಎಂಆರ್‌ಐ ಸ್ಕ್ಕಾನಿಂಗ್ ಯಂತ್ರಗಳು

* ಶಸ್ತ್ರಚಿಕಿತ್ಸಕರು– 2 (ಸುಟ್ಟಗಾಯಗಳ ವಿಭಾಗಕ್ಕೆ) 

* ಸ್ತ್ರೀರೋಗ ತಜ್ಞರು–2

* ವೈದ್ಯಕೀಯತಜ್ಞರು– 2

* ತುರ್ತು ನಿಗಾ ಘಟಕ ವೈದ್ಯರು–2

* ಎಸ್‌ಎನ್‌ಸಿಯು/ಪಿಐಸಿಯು ನಡೆಸಲು ಶಶ್ರೂಷಾಧಿಕಾರಿಗಳು ಮತ್ತು ಪೀಡಿಯಾಟ್ರಿಕ್‌ ಇನ್‌ಟೆನ್‌ಸಿವಿಸ್ಟ್‌ * ಎಂಡೊಸ್ಕೋಪಿ ಲಭ್ಯವಿದ್ದು ಅದನ್ನು ಉಪಯೋಗಿಸಲು ನುರಿತ ತಜ್ಞರು ಬೇಕು

* ಶುಶ್ರೂಷಾಧಿಕಾರಿಗಳು–50

* ಪ‍್ರಯೋಗಶಾಲಾ ತಂತ್ರಜ್ಞ/ಕ್ಷಕಿರಣ ತಂತ್ರಜ್ಞ– 5

* ಡೇಟಾ ಎಂಟ್ರಿ ಆಪರೇಟರ್‌ಗಳು– 10

* ಭದ್ರತಾ ಸಿಬ್ಬಂದಿ–10

* ಗ್ರೂಪ್‌ ‘ಡಿ’ ನೌಕರರು–30

* ಒಟಿ ತಂತ್ರಜ್ಞ–2

* ಇಸಿಜಿ ತಂತ್ರಜ್ಞ–1 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.