ADVERTISEMENT

ಹೋಟೆಲ್‌ ಉದ್ಯಮದಿಂದ ಉದ್ಯೋಗ

ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಶೆಟ್ಟಿ ಸನ್ಮಾನಿಸಿ ಸಾ.ರಾ.ಮಹೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2018, 13:35 IST
Last Updated 15 ಜುಲೈ 2018, 13:35 IST

ಮೈಸೂರು: ‘ನಿರುದ್ಯೋಗ ನೀಗಿಸುವ ಉದ್ಯಮವಾಗಿ ಹೋಟೆಲ್‌ ಉದ್ಯಮ ಬೆಳೆದಿದೆ. ಒಂದು ಕೊಠಡಿ ಕಟ್ಟಿದರೆ 15 ಜನಕ್ಕೆ ಕೆಲಸ ಸಿಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

ಮೈಸೂರು ಹೋಟೆಲ್‌ ಮಾಲೀಕರ ಸಂಘ ಭಾನುವಾರ ಏರ್ಪಡಿಸಿದ್ದ ಎಫ್‌ಕೆಸಿಸಿಐ ನೂತನ ಅಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಹೋಟೆಲ್‌ ಉದ್ಯಮದ ಕೊಡುಗೆ ದೊಡ್ಡದಿದೆ. ಮೈಸೂರು ನಗರಿಯನ್ನು ಪ್ರವಾಸೋದ್ಯಮ ನಗರಿಯಾಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕೆಆರ್‌ಎಸ್‌ ಅನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು, ಕೆಆರ್‌ಎಸ್‌–ಮೈಸೂರು ನಡುವೆ ಜೋಡಿ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ. ಮಡಿಕೇರಿ ಹಾಗೂ ಮೈಸೂರು ಪ್ರವಾಸೋದ್ಯಮ ಸರ್ಕಿಟ್‌ ಮಾಡುವ ಪ್ರಸ್ತಾವವಿದೆ’ ಎಂದು ನುಡಿದರು.

ADVERTISEMENT

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾಲುಗುಣ ಚೆನ್ನಾಗಿದೆ. ಹಲವು ವರ್ಷಗಳ ಬಳಿಕ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಸುಧಾಕರ್‌ ಶೆಟ್ಟಿ ಅವರು ಶ್ರಮ ಜೀವಿ. ಕಷ್ಟದಿಂದ ಮೇಲೆ ಬಂದವರು. ಶೂನ್ಯದಿಂದ ಬಹು ಎತ್ತರಕ್ಕೆ ಬೆಳೆಯುವುದು ದೊಡ್ಡ ವಿಚಾರ’ ಎಂದು ಬಣ್ಣಿಸಿದರು.

‘ಸ್ವಾರ್ಥವಿಲ್ಲದೆ ಯಾರೂ ಏನನ್ನೂ ಮಾಡಲ್ಲ. ಸ್ವಾಮೀಜಿಗಳಿಗೂ ಸ್ವಾರ್ಥವಿರುತ್ತದೆ. ತಾವು ಬದುಕಲು ಅದು ಅಗತ್ಯ ಕೂಡ. ಆದರೆ, ಸ್ವಾರ್ಥ ಭಾವನೆ ಕಡಿಮೆ ಇದ್ದು, ಪರರ ಬಗ್ಗೆ ಹೆಚ್ಚು ಕಾಳಜಿ ಹೆಚ್ಚಿರಬೇಕು’ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಹೋಟೆಲ್‌ ಉದ್ಯಮಿಗಳಾದ ಎಂ.ರಾಜೇಂದ್ರ, ರವಿಶಾಸ್ತ್ರಿ, ಉಗ್ರಯ್ಯ, ಎ.ಆರ್‌.ರವೀಂದ್ರ ಭಟ್‌, ಪಾಲಿಕೆ ಸದಸ್ಯ ಜಗದೀಶ್‌, ಸುಧಾಕರ್‌ ಶೆಟ್ಟಿ ಪತ್ನಿ ಸುಕಲತಾ ಶೆಟ್ಟಿ, ಪುತ್ರ ಪವನ್‌ ಶೆಟ್ಟಿ ಇದ್ದರು.

ದಸರಾ ಪ್ರಾಧಿಕಾರ ನಿರ್ಮಿಸಿ

ಮೈಸೂರು: ‘ಪ್ರವಾಸಿಗರ ನೆಚ್ಚಿನ ನಗರಿಯಾಗಿ ಮೈಸೂರು ಬೆಳೆಯುತ್ತಿದೆ. ಆದರೆ, ತುಂಬಾ ಇಕ್ಕಟ್ಟಿನಿಂದ ಕೂಡಿದೆ. ಹೀಗಾಗಿ, ಐದು ಕಡೆ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ನಿರ್ಮಿಸಬೇಕು. ಅಂತರರಾಷ್ಟ್ರೀಯ ಕನ್ವೆನ್ಷನ್‌ ಸೆಂಟರ್‌ ನಿರ್ಮಿಸಬೇಕು. ದಸರಾ ಪ್ರಾಧಿಕಾರ ನಿರ್ಮಿಸಿ ಹೊರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಸುಧಾಕರ್‌ ಎಸ್‌.ಶೆಟ್ಟಿ ಸಲಹೆ ನೀಡಿದರು.

‘ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ವತಿಯಿಂದ ಬೆಂಗಳೂರಿನಲ್ಲಿ ಅಸಿಯಾನ್‌ ಸಮ್ಮೇಳನ ಆಯೋಜಿಸುವ ಗುರಿ ಹೊಂದಲಾಗಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಯೋಜನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.