ADVERTISEMENT

ಹುಣಸೂರು: 59 ಕುಟುಂಬಕ್ಕೆ ನಿವೇಶನ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:38 IST
Last Updated 29 ಜನವರಿ 2026, 6:38 IST
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರಿಗೆ ಬುಧವಾರ ದಸಂಸ ಮುಖಂಡ ನಿಂಗರಾಜ್‌ ಮಲ್ಲಾಡಿ ಮತ್ತು ಫಲಾನುಭವಿಗಳು ಚುಂಚನಕಟ್ಟೆ ಗ್ರಾಮದಲ್ಲಿ ನಿವೇಶನ ನೀಡುವಂತೆ ಮನವಿ ಪತ್ರ ನೀಡಿದರು
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರಿಗೆ ಬುಧವಾರ ದಸಂಸ ಮುಖಂಡ ನಿಂಗರಾಜ್‌ ಮಲ್ಲಾಡಿ ಮತ್ತು ಫಲಾನುಭವಿಗಳು ಚುಂಚನಕಟ್ಟೆ ಗ್ರಾಮದಲ್ಲಿ ನಿವೇಶನ ನೀಡುವಂತೆ ಮನವಿ ಪತ್ರ ನೀಡಿದರು   

ಹುಣಸೂರು: ‘ಚುಂಚನಕಟ್ಟೆ ಗ್ರಾಮದಲ್ಲಿ ವಾಸಿಸುತ್ತಿರುವ 59 ನಿರ್ಗತಿಕ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡುವಂತೆ ಹಲವು ವರ್ಷದಿಂದ ಕಂದಾಯ ಇಲಾಖೆಗೆ ಮನವಿ ಮಾಡಿದ್ದರೂ ಸಬೂಬು ಹೇಳಿ ನಿವೇಶನ ಮಂಜೂರು ಮಾಡದೆ ಮುಂದೂಡುತ್ತಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ(ದಸಂಸ) ಮುಖಂಡ ನಿಂಗರಾಜ್‌ ಮಲ್ಲಾಡಿ ದೂರಿದರು.

ನಗರದ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಅವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ‘30 ವರ್ಷದಿಂದ ಗ್ರಾಮದ ಕುಪ್ಪೆ ಸರ್ವೆ ನಂ. 69ರಲ್ಲಿ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿರುವ ಈ ಕುಟುಂಬಗಳಿಗೆ 64 ಸಿಸಿ ಯೋಜನೆ ಅಡಿಯಲ್ಲಿ ನಿವೇಶನದ ಹಕ್ಕು ಪತ್ರ ನೀಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ನೀಡುತ್ತಿದ್ದೇವೆ. ಜಿಲ್ಲಾ ಮತ್ತು ಉಪವಿಭಾಗ ಮಟ್ಟದ ಎಸ್‌ಸಿ, ಎಸ್‌ಟಿ ಸಭೆಯಲ್ಲೂ ಪ್ರಸ್ತಾಪಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

‘ಕೆಲವು ರಾಜಕಾರಣಿ ಹಾಗೂ ಜಾತಿ ಮನಸ್ಥಿತಿಯುಳ್ಳವರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಈ ಸಮುದಾಯದವರ ಕುರಿತು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಈ ನಡವಳಿಕೆಯನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ’ ಎಂದರು.

ADVERTISEMENT

‘ಈ ಬಗ್ಗೆ ಸಂಬಂಧಿಸಿದಂತೆ ಸಾಲಿಗ್ರಾಮ ಪೊಲೀಸ್‌ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನವೀಯ ನೆಲಗಟ್ಟಿನಲ್ಲಿ ಅಧಿಕಾರಿಗಳು ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ’ ಎಂದು ದೂರಿದರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಕಾವ್ಯಾ ರಾಣಿ ಮಾತನಾಡಿ, ಮನವಿ ಸಂಬಂಧ ಸಾಲಿಗ್ರಾಮ ತಹಶೀಲ್ದಾರ್‌ ಅವರೊಂದಿಗೆ ಚರ್ಚಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕಾನೂನು ಚೌಕಟ್ಟಿನಲ್ಲಿ ಕ್ರಮವಹಿಸುವುದಾಗಿ ತಿಳಿಸಿದರು.

ದಸಂಸ ಮುಖಂಡ ಬಲ್ಲೇನಹಳ್ಳಿ ಕೆಂಪರಾಜ್‌, ಗಜೇಂದ್ರ, ನಿವೇಶನದ ಅರ್ಜಿದಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.