ADVERTISEMENT

ಎಲ್ಲ ಧರ್ಮಕ್ಕಿಂತ ಮನುಷ್ಯ ಧರ್ಮ ದೊಡ್ಡದು: ನಂಜಾವಧೂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 13:25 IST
Last Updated 18 ಜನವರಿ 2026, 13:25 IST
   

ಮೈಸೂರು: ‘ಜಗತ್ತಿನಲ್ಲಿ ಎಲ್ಲ ಧರ್ಮಕ್ಕಿಂತ ಮನುಷ್ಯ ಧರ್ಮ ಬಹಳ ದೊಡ್ಡದು’ ಎಂದು ತುಮಕೂರು ಜಿಲ್ಲೆಯ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ಇಲ್ಲಿನ ನ್ಯೂ ಸಯ್ಯಾಜಿರಾವ್‌ ರಸ್ತೆಯ ಶಾಂತಿನಾಥ ಬಸದಿಯಲ್ಲಿ ನಡೆದ ಭಗವಾನ್ 1008ನೇ ಶಾಂತಿನಾಥ ತೀರ್ಥಂಕರರ ಮಾನಸ್ತಂಭೋಪದಿ ಜಿನ ಬಿಂಬಗಳ ಪಂಚಕಲ್ಯಾಣ, ಮಂಡಲಪೂಜಾ ಮಹೋತ್ಸವದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನೀತಿ, ಸದಾಚಾರ ಮತ್ತು ಸಾರ್ವತ್ರಿಕ ಸತ್ಯಗಳನ್ನು ಒಳಗೊಳ್ಳಬೇಕು. ಯಾರಿಗೂ ಕೇಡು ಬಯಸದೆ, ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿದಾಗ ಮಾತ್ರ ನಿಜವಾದ ಮನುಷ್ಯ ಧರ್ಮ ಮೂಡಲಿದೆ’ ಎಂದರು.

ADVERTISEMENT

ಅಹಿಂಸಾ ಮಾರ್ಗ ದಾರಿದೀಪ

‘ಜೈನ ಧರ್ಮ ಜಗತ್ತಿನಲ್ಲಿ ಯಾರಿಗೂ ಕೇಡು ಬಯಸದ ಶ್ರೇಷ್ಠ ಧರ್ಮ. ಅಹಿಂಸೆಯೇ ಈ ಧರ್ಮದ ಮೂಲ ತತ್ವ. ಅಹಿಂಸಾ ಮಾರ್ಗದಲ್ಲಿ ನಡೆಯಬೇಕೆನ್ನುವ ಸಮುದಾಯದ ಮೌಲ್ಯವು ಸಮಾಜಕ್ಕೆ ದಾರಿದೀಪ. ಸಮುದಾಯವು ಸಮಾಜದಲ್ಲಿ ಸಾಮರಸ್ಯದಿಂದ ಬದುಕುವುದನ್ನು ಕಲಿಸಿದೆ, ಶಾಂತಿ ಬೋಧನೆ ಮಾಡಿದೆ’ ಎಂದರು.

‘ಪೂರ್ವಜರು ಹಾಕಿಕೊಟ್ಟ ಧಾರ್ಮಿಕ ಪರಂಪರೆ, ಆಚರಣೆ ಮುಂದುವರೆಸಿ, ಉಳಿಸಿಕೊಂಡು ಧರ್ಮ ಯಾವುದಾದರೂ ಇದ್ದರೆ ಅದು ಜೈನ ಧರ್ಮ ಮಾತ್ರ. ಈ ಧರ್ಮದ ಆಚರಣೆ ಕಠಿಣ. ತಮ್ಮನ್ನು ತಾವು ದಂಡಿಸಿಕೊಂಡು, ಯೋಗಿಗಳಾಗಿ ಸಕಲ ಜೀವರಾಶಿಗಳ ಒಳಿತಿಗೆ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ. ಸಮಾಜದಲ್ಲಿ ಏಕತೆ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

‘ಈ ನಾಡಿನ ಒಕ್ಕಲಿಗರು ಹಾಗೂ ಜೈನ ಸಮುದಾಯದ ನಡುವೆ ಬಾಂಧವ್ಯ ಹೆಚ್ಚಿದೆ’ ಎಂದರು.

ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಸಮಾಜವನ್ನು ಸಂಯಮ, ಅನುಶಾಸನದಲ್ಲಿ ತೆಗೆದುಕೊಂಡು ಹೋಗಬೇಕಿದೆ. ಇವೆರಡೂ ಇದ್ದಲ್ಲಿ ಮಾತ್ರ ಆ ಸಮಾಜಕ್ಕೆ ಗೌರವ ಸ್ಥಾನಮಾನಗಳು ಲಭಿಸುತ್ತದೆ’ ಎಂದು ತಿಳಿಸಿದರು.

‘ನಂಜಾವಧೂತ ಸ್ವಾಮೀಜಿ ಅವರದ್ದು ಜಾಗೃತಿ ಮೂಡಿಸುವ ವ್ಯಕ್ತಿತ್ವ. ರಾಷ್ಟ್ರಕ್ಕೆ ಇಂತಹ ಸ್ವಾಮೀಜಿಗಳು ಅಗತ್ಯವಿದೆ. ಅಪಾರ ಶಿಷ್ಯ ವರ್ಗ ಹೊಂದಿದ್ದಾರೆ. ತಮ್ಮದೇ ಪರಂಪರೆ ಶಕ್ತಿ, ಮಾರ್ಗದರ್ಶನದಲ್ಲಿ ಸಮಾಜ ಮುನ್ನಡೆಸುವಲ್ಲಿ ತೊಡಗಿದ್ದಾರೆ. ಇದು ಎಲ್ಲರಿಗೂ ಆದರ್ಶ, ಅನುಕರಣೀಯವಾಗಿದೆ’ ಎಂದರು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್‌ ಕುಮಾರ್, ಶಾಂತಿನಾಥ ಸೇವಾ ಸಮಿತಿ ಅಧ್ಯಕ್ಷ ಎಸ್‌.ಬಿ.ಸುರೇಶ್‌ ಜೈನ್, ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಜೆ.ಎನ್‌.ನಂದಿನಿ ಸಂಜಯ್‌, ಸುರೇಶ್‌ಕುಮಾರ್‌ ಜೈನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.