ADVERTISEMENT

ಹುಣಸೂರು | ಶಾಸಕ ಅನಿಲ್ ಚಿಕ್ಕಮಾದು-ಪೊಲೀಸರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:46 IST
Last Updated 5 ಡಿಸೆಂಬರ್ 2019, 9:46 IST
ಹುಣಸೂರು ತಾಲ್ಲೂಕು ಹೊಸ ರಾಮೇನಹಳ್ಳಿಯಲ್ಲಿ ಪ್ರತಿಭಟನಕಾರರ ಜತೆ ಎಎಸ್ಪಿ ಸ್ನೇಹಾ ಮಾತುಕತೆ ನಡೆಸಿದರು
ಹುಣಸೂರು ತಾಲ್ಲೂಕು ಹೊಸ ರಾಮೇನಹಳ್ಳಿಯಲ್ಲಿ ಪ್ರತಿಭಟನಕಾರರ ಜತೆ ಎಎಸ್ಪಿ ಸ್ನೇಹಾ ಮಾತುಕತೆ ನಡೆಸಿದರು   

ಹುಣಸೂರು (ಮೈಸೂರು): ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮತ ಚಲಾಯಿಸಲು ಬಂದ ಹೆಚ್.ಡಿ ಕೋಟೆ ಶಾಸಕ ಕಾಂಗ್ರೆಸ್‌ನ ಅನಿಲ್ ಚಿಕ್ಕಮಾದು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಹುಟ್ಟೂರು ಹೊಸ ರಾಮೇನಹಳ್ಳಿಯ ಮತಗಟ್ಟೆಗೆ ಮತ ಚಲಾಯಿಸಲು ಬಂದ ಅನಿಲ್ ಅವರ ಜತೆ ಹೆಚ್ಚಿನ ಬೆಂಬಲಿಗರು ಇರುವುದನ್ನು ಕಂಡ ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.

ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಅವರು‌ ಶಾಸಕರನ್ನು ಏಕವಚನದಲ್ಲಿ ಪ್ರಶ್ನೆ ಮಾಡಿದ್ದು, ಲಾಠಿ ತೋರಿಸಿ ಅವಾಜ್ ಹಾಕಿದ್ದಾರೆ ಎಂದು ಆರೋಪಿಸಿ ಬೆಂಬಲಿಗರು ಕೆಲಹೊತ್ತು ಮೈಸೂರು ಹಾಸನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ADVERTISEMENT

ಶಾಸಕರಿಗೆ ಅವಮಾನ ಮಾಡಿದ ಇನ್‌ಸ್ಪೆಕ್ಟರ್ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ತಡೆಯಲು ಪೊಲೀಸರ ಹರಸಾಹಸಪಟ್ಟರು. ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.

ಪೊಲೀಸರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಅನಿಲ್ ಹಾಗೂ ಬೆಂಬಲಿಗರು ಸಮೀಪದ ದೇವಸ್ಥಾನದ ಆವರಣದಲ್ಲಿ ಧರಣಿ ಕುಳಿತರು. ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಅವರು ಧರಣಿಗೆ ಸಾಥ್ ನೀಡಿದರು. ಸ್ಥಳಕ್ಕೆ ಬಂದ ಮೈಸೂರು ಜಿಲ್ಲಾ ಎಎಸ್ಪಿ ಪಿ.ವಿ.ಸ್ನೇಹಾ ಅವರು ಧರಣಿ ಕೈಬಿಡುವಂತೆ ಮನವಿ ಮಾಡಿದರು.

ಈ ವೇಳೆ ಹುಣಸೂರು ಡಿವೈಎಸ್ಪಿ ಕೆಎಸ್‌ ಸುಂದರ್ ರಾಜ್ ಹಾಗೂ ವಿಜಯ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು. 'ಪೊಲೀಸರ ವಿರುದ್ಧ ದೂರು ಸಲ್ಲಿಸಿ. ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ' ಎಂದು ಎಎಸ್ಪಿ ಅವರು ಪ್ರತಿಭಟನಾನಿರತರಿಗೆ ಭರವಸೆ ನೀಡಿದರು.

ಆ ಬಳಿಕ ಅನಿಲ್ ಹಾಗೂ ಬೆಂಬಲಿಗರು ಪ್ರತಿಭಟನೆ ಕೈಬಿಟ್ಟು ಸ್ಥಳದಿಂದ ತೆರಳಿದರು.

‘ಶಾಸಕನಾಗಿರುವ ನನಗೆ ಪೊಲೀಸರು ಅವಮಾನ ಮಾಡಿದ್ದಾರೆ. ಏಕವಚನದಲ್ಲಿ ಬೈಯ್ದಿದ್ದಾರೆ. ಇನ್‌ಸ್ಪೆಕ್ಟರ್ವಿರುದ್ಧ ದೂರು ಸಲ್ಲಿಸುತ್ತೇನೆ’ಎಂದು ಅನಿಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.