ADVERTISEMENT

ರಥಸಪ್ತಮಿ: ವಿದ್ಯಾರ್ಥಿಗಳಿಂದ ಸೂರ್ಯ ನಮಸ್ಕಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 14:27 IST
Last Updated 5 ಫೆಬ್ರುವರಿ 2025, 14:27 IST
ಹುಣಸೂರು ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ರಥಸಪ್ತಮಿ ಮತ್ತು ವಸಂತ ಪಂಚಮಿ ಅಂಗವಾಗಿ 1,800 ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶಿಸಿದರು
ಹುಣಸೂರು ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ರಥಸಪ್ತಮಿ ಮತ್ತು ವಸಂತ ಪಂಚಮಿ ಅಂಗವಾಗಿ 1,800 ವಿದ್ಯಾರ್ಥಿಗಳು ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶಿಸಿದರು   

ಪ್ರಜಾವಾಣಿ ವಾರ್ತೆ

ಹುಣಸೂರು: ‘ವಿದ್ಯಾರ್ಥಿ ಜೀವನದಲ್ಲಿ ಅಂಕ ಗಳಿಕೆಯ ಜೊತೆಗೆ ಸಂಸ್ಕೃತಿ ಹಾಗೂ ಸಂಪ್ರದಾಯ ಕಲಿಯುವುದರಿಂದ ಭವಿಷ್ಯದಲ್ಲಿ ಸಮಾಜ ನಿಮ್ಮನ್ನು ಗುರುತಿಸಲಿದೆ’ ಎಂದು ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕ ಡಾ.ಲೋಹಿತ್ ಹೇಳಿದರು.

ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ರಥಸಪ್ತಮಿ ಮತ್ತು ವಸಂತ ಪಂಚಮಿ ಅಂಗವಾಗಿ ನಡೆದ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘‌ವ್ಯಕ್ತಿತ್ವ ರೂಪಿಸಿಕೊಳ್ಳದ ಹೊರತು ಪರೀಕ್ಷೆಯಲ್ಲಿ ಗಳಿಸಿದ ಅಂಕಕ್ಕೆ ಮೌಲ್ಯ ಸಿಗುವುದಿಲ್ಲ. ಸಂಸ್ಕಾರ ಮತ್ತು ಸಂಸ್ಕೃತಿಯೊಂದಿಗೆ ಸಮಯ ನಿರ್ವಹಣೆ ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

‘ಮೌಲ್ಯಭರಿತ ಜೀವನ ನಡೆಸುವುದರಿಂದ ನಿಮ್ಮ ಜೀವನದಲ್ಲಿ ಸಮಗ್ರ ಬದಲಾವಣೆ ಕಾಣಬಹುದು. ಅಲ್ಲದೆ ಸಮಯ ಪ್ರಜ್ಞೆ ಹೊಂದಿರಬೇಕು. ಸತತ ಪ್ರಯತ್ನ ಇದ್ದಲ್ಲಿ ಗುರಿ ಮುಟ್ಟಲು ಸಹಕಾರಿ ಆಗಲಿದೆ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಮಾತನಾಡಿ, ‘ಕಲಿಕೆ ಒಂದಿದ್ದರೆ ಸಾಲದು ಓದಿನೊಂದಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರವಿಶಂಕರ್, ನಿರ್ದೇಶಕ ಸಚ್ಚಿತ್ ಮಾತನಾಡಿದರು. ಯೋಗ ಶಿಕ್ಷಕ ಪ್ರಮೋದ್ ಮಾರ್ಗದರ್ಶನದಲ್ಲಿ 1,800 ವಿದ್ಯಾರ್ಥಿಗಳು ಏಕಕಾಲಕ್ಕೆ ಸೂರ್ಯನಮಸ್ಕಾರ ಸೇರಿದಂತೆ ವಿವಿಧ ಆಸನ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.