ADVERTISEMENT

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:49 IST
Last Updated 27 ಡಿಸೆಂಬರ್ 2025, 4:49 IST
ಹುಣಸೂರಿನ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ನಡೆದ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ಡಿ.ಬಿ.ಕುಪ್ಪೆ ವ್ಯಾಪ್ತಿಯ 26 ಗ್ರಾಮ ಮತ್ತು ಹಾಡಿಯ ಸಾರ್ವಜನಿಕರು ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು
ಹುಣಸೂರಿನ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ನಡೆದ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ಡಿ.ಬಿ.ಕುಪ್ಪೆ ವ್ಯಾಪ್ತಿಯ 26 ಗ್ರಾಮ ಮತ್ತು ಹಾಡಿಯ ಸಾರ್ವಜನಿಕರು ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟಿಸಿದರು   

ಹುಣಸೂರು: ‘ಆರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಿ ಈಗಾಗಲೇ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಯೋಜನೆ ಲಾಭ ನೀಡಬೇಕು’ ಎಂದು ಆಗ್ರಹಿಸಿ ಆದಿವಾಸಿಗರು ಇಲ್ಲಿನ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ಪ್ರತಿಭಟಿಸಿದರು.

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಗೆ ಸೇರಿದ 26 ಗ್ರಾಮ ಹಾಗೂ ಹಾಡಿಗಳಿದ್ದು, ಈ ಭಾಗದ ಆದಿವಾಸಿಗರಿಗೆ ಸೇರಿದಂತೆ ಸ್ಥಳೀಯರು ಅರಣ್ಯ ಕಾಯ್ದೆ ಯೋಜನೆ ಅಡಿಯಲ್ಲಿ 371 ಕುಟುಂಬಗಳು ಅರ್ಜಿ ಸಲ್ಲಿಸಿ ಅರಣ್ಯ ಹಕ್ಕು ಕಾಯ್ದೆ ಪುರಸ್ಕರಿಸಿ ಕಾಯ್ದೆ ಅನ್ವಯ ಅರ್ಜಿದಾರರಿಗೆ ಸವಲತ್ತು ಕಲ್ಪಿಸಬೇಕು ಎಂದು ಆಗ್ರಹಿಸಿದರು.

‘ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಕುರಿತಂತೆ ಈಗಾಗಲೇ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಯೊಂದಿಗೆ ಜಿಲ್ಲಾಡಳಿತ ಎರಡು ಬಾರಿ ಸಭೆ ನಡೆಸಿ ಯೋಜನೆ ಅನುಷ್ಠಾನ ಮತ್ತು ಆಗುಹೋಗುಗಳನ್ನು ಚರ್ಚಿಸಲಾಗಿತ್ತು. ಆ ಸಭೆ ಅಧ್ಯಕ್ಷತೆಯನ್ನು ಎಚ್.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ವಹಿಸಿದ್ದರು. ಅವರಿಗೂ ಕಾಯ್ದೆ ಕುರಿತು ಮನವರಿಕೆ ಮಾಡಿದ್ದೇವೆ’ ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ಹೇಳಿದರು.

ADVERTISEMENT

‘ಅರಣ್ಯ ಇಲಾಖೆ ಅಧಿಕಾರಿಗಳು ಆದಿವಾಸಿಗರಿಗೆ ಯೋಜನೆ ಲಾಭ ತಲುಪಿಸಲು ಇಲಾಖೆ ವಂಶವೃಕ್ಷ ನೆಪವೊಡ್ಡಿ ಹಕ್ಕು ಪತ್ರ ನೀಡುವುದನ್ನು ವಿಳಂಬಗೊಳಿಸುತ್ತಿದೆ. ಅವರ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ವಂಶವೃಕ್ಷ ಪದ್ಧತಿ ಇಲ್ಲದೆ ಅವರಿಗೆ ಬೇಕಾದ ರೀತಿ ಬದುಕು ಕಟ್ಟಿಕೊಂಡು ಬಂದವರು. ಈ ಸಮಾಜ ತಮ್ಮದೇ ಸಂಪ್ರದಾಯ ಹೊಂದಿದ್ದು, ಅವರ ಸಂಸ್ಕೃತಿಯಂತೆ ಇಲಾಖೆ ಕುಟುಂಬ ಸದಸ್ಯರ ಪರಿಚಯ ದಾಖಲಿಸಿಕೊಳ್ಳಬೇಕು. ಅದನ್ನು ಬಿಟ್ಟು ಕಂದಾಯ ಇಲಾಖೆ ಮಾದರಿಯಲ್ಲಿ ವಂಶವೃಕ್ಷ ಮತ್ತು ಇತರೆ ದಾಖಲೆ ಕೇಳಿ ಯೋಜನೆ ಅನುಷ್ಠಾನ ಮುಂದೂಡುವ ನೆಪವೊಡ್ಡಿದೆ’ ಎಂದು ದೂರಿದರು.

ಅರಣ್ಯ ಹಕ್ಕು ಯೋಜನೆ ಅಡಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ 371 ಮತ್ತು ಈ ಹಿಂದೆ ತಿರಸ್ಕರಿಸಿದ 80 ಫಲಾನುಭವಿಗಳ ಅರ್ಜಿಗಳನ್ನು ಇಲಾಖೆ ಮಾನ್ಯಗೊಳಿಸಿ ಅನುಷ್ಠಾನಗೊಳಿಸಬೇಕು ಎಂದರು.

ಅಂತರಸಂತೆ ವಲಯಕ್ಕೆ ಸೇರಿದ ಡಿ.ಬಿ.ಕುಪ್ಪೆ ಗ್ರಾ.ಪಂ ವ್ಯಾಪ್ತಿಯ ಮುಖಂಡರಾದ ಪುಟ್ಟಬಸವ, ಸಿದ್ದರಾಜು, ಐಯಪ್ಪ, ದಾಸಪ್ಪ, ವೆಂಕಟೇಶ್‌, ಭಾಗ್ಯ, ಶಾರದಾ, ರತ್ನಮ್ಮ ಸೇರಿದಂತೆ 200ಕ್ಕೂ ಹೆಚ್ಚು ಆದಿವಾಸಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.