ಹುಣಸೂರು: ರೈತರು ಸಾಗುವಳಿ ಮಾಡುತ್ತಿರುವ ದರಖಾಸ್ತು ಭೂಮಿಗೆ ಸಂಬಂಧಿಸಿದ 137 ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಸಭೆಯಲ್ಲಿ ಅನುಮೋದಿಸಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಮಿತಿ ಸಭೆಯ ಬಳಿಕ ಅವರು ಮಾತನಾಡಿ, ಸಮಿತಿ ಚಾಲ್ತಿಗೆ ಬಂದ ಬಳಿಕ ತಾಲ್ಲೂಕಿನಲ್ಲಿ ಸಾಗುವಳಿ ಕೋರಿ 3,588 ಅರ್ಜಿಗಳು ಪರಿಶೀಲಿಸಿದೆ. ಈ ಪೈಕಿ 2,858 ಅರ್ಜಿದಾರರು ಗೋಮಾಳದಲ್ಲಿ ಸಾಗುವಳಿ ಮಾಡುತ್ತಿದ್ದು, ವಜಾಗೊಳಿಸಿದೆ ಎಂದರು.
ಅಂತಿಮವಾಗಿ 450 ಅರ್ಜಿಗಳಿದ್ದು, ಅವುಗಳಲ್ಲಿ 137 ಅರ್ಜಿಗಳನ್ನು ಪರಾಮರ್ಶಿಸಿ ಮಂಜೂರು ಮಾಡಿದೆ. ಸರ್ವೆ, ಅರಣ್ಯದಂಚಿನಲ್ಲಿ ಭೂಮಿ ಜಂಟಿ ಸರ್ವೆ ಸೇರಿದಂತೆ ವಿವಿಧ ಹಂತದಲ್ಲಿದ್ದು, 4 ತಿಂಗಳಲ್ಲಿ ಪ್ರಕ್ರಿಯೆ ಮುಗಿದ ಬಳಿಕ ಫಲಾನುಭವಿಗೆ ಸಾಗುವಳಿ ಪತ್ರ ವಿತರಿಸಲಿದ್ದೇವೆ ಎಂದರು. ಸಾಗುವಳಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದ ವೀರನಹೊಸಹಳ್ಳಿ ಗ್ರಾಮದ ಕೆರೆ ಹಾಡಿಯ ಗಿರಿಜನ ಮಹಿಳೆ ಜೆ.ಕೆ. ನಾಗಮ್ಮ ಅವರಿಗೆ 1 .9 ಎಕರೆ ಭೂಮಿ ಮಂಜೂರಾತಿ ನೀಡಿ ಸ್ವಾವಲಂಬಿ ಬದುಕಿಗೆ ಸಮಿತಿ ಸ್ಪಂದಿಸಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಸಭೆಯಲ್ಲಿ 20 ಅರ್ಜಿಗಳನ್ನು ಅನುಮೋದಿಸಿ ಸಾಗುವಳಿ ಮಂಜೂರಾತಿ ಮಾಡಲಾಗಿದೆ ಎಂದರು. ಸಮಿತಿ ಸದಸ್ಯರಾದ ಕುಮಾರ್, ಗುಣಶೇಖರ್, ಲತಾ ಮತ್ತು ನಾಲ್ಕು ಹೋಬಳಿ ರಾಜಸ್ವ ನಿರೀಕ್ಷಣಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.