ADVERTISEMENT

ಹುಣಸೂರು: ಬೆಂಬಲ ಬೆಲೆ ಕೇಂದ್ರದಲ್ಲಿ ರೈತರಿಗೆ ‌ಶೋಷಣೆ

ರಾಗಿ ಬೆಳೆದು ತಂದ ತಾಲ್ಲೂಕಿನ ರೈತರ ಆರೋಪ

ಎಚ್.ಎಸ್.ಸಚ್ಚಿತ್
Published 13 ಮೇ 2025, 4:18 IST
Last Updated 13 ಮೇ 2025, 4:18 IST
ಹುಣಸೂರು ನಗರದ ಎಪಿಎಂಸಿ ಬಳಿ ರಾಗಿ ಮೂಟೆಗಳುಳ್ಳ ವಾಹನಗಳ ಸಾಲು
ಹುಣಸೂರು ನಗರದ ಎಪಿಎಂಸಿ ಬಳಿ ರಾಗಿ ಮೂಟೆಗಳುಳ್ಳ ವಾಹನಗಳ ಸಾಲು   

ಹುಣಸೂರು: ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ರಾಗಿ ಬೆಳೆಯನ್ನು ಬೆಂಬಲ ಬೆಲೆಗೆ ಮಾರಾಟ ಮಾಡುವ ಸಂದರ್ಭದಲ್ಲಿ ಖರೀದಿ ಕೇಂದ್ರದಲ್ಲಿ ರೈತರನ್ನು ಶೋಷಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ನಗರದ ಎಪಿಎಂಸಿ ಕೇಂದ್ರದಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿಯು ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿದೆ. ಮಂಡಳಿಯ ಸೂಚನೆಯಂತೆ ಮಾರುಕಟ್ಟೆಗೆ  ತರುವ ರೈತರನ್ನು ಸಿಬ್ಬಂದಿ ಶೋಷಿಸುತ್ತಿದ್ದಾರೆ. ‘ಲೋಡರ್‌ನಿಂದ ಅಧಿಕಾರಿವರೆಗೆ ಲಂಚದ ಹಾವಳಿ ಹೆಚ್ಚಿದೆ’ ಎಂದು ರೈತರು ಆರೋಪಿಸಿದ್ದಾರೆ. 

ನಗರದ ಎಪಿಎಂಸಿ ಆವರಣದಲ್ಲಿರುವ ಖರೀದಿ ಕೇಂದ್ರಕ್ಕೆ ‘ಪ್ರಜಾವಾಣಿ’ ಭೇಟಿ ನೀಡುವ ಸಂದರ್ಭದಲ್ಲಿ ರೈತರು ಸಮಸ್ಯೆಗಳತ್ತ ಗಮನ ಸೆಳೆದರು.

ADVERTISEMENT

‘ರೈತರು ತರುವ ರಾಗಿ ಕುರಿತು ತಕರಾರು ಮಾಡುವ ಅಧಿಕಾರಿಗಳು, ದಲ್ಲಾಳಿಗಳು ತರುವ ರಾಗಿಯನ್ನು ಚಕಾರವೆತ್ತದೆ ಖರೀದಿಸುತ್ತಿದ್ದಾರೆ. ಲೋಡರ್‌ಗಳಿಗೆ ಪ್ರತಿ ಚೀಲಕ್ಕೆ ರೈತರು ₹ 15 ನೀಡಬೇಕು. ಇದಲ್ಲದೆ ಹೆಚ್ಚುವರಿ ಬೆಳೆದ ರಾಗಿ ಹಣ ನೀಡಿದರಷ್ಟೇ ಖರೀದಿಸುತ್ತಾರೆ’ ಎಂದು ಹಳ್ಳಿಕೆರೆ ಗ್ರಾಮದ ರೈತ ವೀರೇಂದ್ರ ದೂರಿದರು.‌

ಕಟ್ಟೆಮಳಲವಾಡಿ ಗ್ರಾಮದ ರೈತ ಬಸವ ಮಾತನಾಡಿ, ‘ಕೃಷಿ ಇಲಾಖೆಯಿಂದ ನಡೆದ ಬೆಳೆ ಸಮೀಕ್ಷೆಯಲ್ಲಿ ಲೋಪವಾಗಿದೆ. ರಾಗಿ ಬೆಳೆಯದವರ ಪಹಣಿಯಲ್ಲೂ ಅಧಿಕಾರಿಗಳು ರಾಗಿ ಎಂದು ನಮೂದಿಸಿದ್ದು, ಇದರಿಂದ ದಲ್ಲಾಳಿಗಳಿಗೆ ಪರೋಕ್ಷವಾಗಿ ಅಧಿಕಾರಿಗಳು ಸಹಕರಿಸಿದ್ದಾರೆ. ನಿಜವಾದ ಬೆಳೆಗಾರರಿಗೆ ಮಾನ್ಯತೆ ಇಲ್ಲವಾಗಿದೆ’ ಎಂದರು.

‘ರಾಗಿಯಲ್ಲಿ ಹೊಟ್ಟು (ಧೂಳು) ಇದೆ ಎಂದು ಸಿಬ್ಬಂದಿ ತಿರಸ್ಕರಿಸುವ ಭೀತಿಯೂ ಮೂಡಿದೆ. ರಾಗಿ ಕಟಾವು ಮುಗಿದು 7 ತಿಂಗಳಾಗಿದೆ. ಮನೆಯಲ್ಲೇ ಸಂಗ್ರಹಿಸಿದ ರಾಗಿಯನ್ನು ಖರೀದಿಸಲು ತಕರಾರು ಮಾಡುತ್ತಾರೆ’ ಎಂದು ಕಳ್ಳಿಕೊಪ್ಪಲು ಗ್ರಾಮದ ಪ್ರಗತಿಪರ ರೈತ ಚಂದ್ರೇಗೌಡ ಆತಂಕ ವ್ಯಕ್ತಪಡಿಸುವರು.

ತಟ್ಟೆಕೆರೆ ರಾಮಕೃಷ್ಣ ಮಾತನಾಡಿ, ‘ಹನಗೊಡು ಹೋಬಳಿ ಭಾಗದಲ್ಲಿ ಪೋಡು ಮಾಡದ ಕಾರಣ ಒಂದೇ ಸರ್ವೆ ನಂಬರ್‌ನಲ್ಲಿ ನೂರಾರು ಎಕರೆ ಇದ್ದು, ದಲ್ಲಾಳಿಗಳು ಲಾಭಕ್ಕೆ ಬಳಸಿಕೊಂಡಿದ್ದಾರೆ. ಈ ಲೋಪ ಸರಿಯಾಗದ ಹೊರತು ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣ ಸಾಧ್ಯವಿಲ್ಲ’ ಎಂದು ವಿವರಿಸಿದರು.

‘ರೈತರು ಫಸಲನ್ನು ನೆಮ್ಮದಿಯಿಂದ ಮಾರಾಟ ಮಾಡುವ ವಾತಾವರಣವನ್ನು ಮಂಡಳಿ ಸೃಷ್ಟಿಸಬೇಕು’ ಎಂಬುದು ಈ ರೈತರ ಆಗ್ರಹ.

ರಾಗಿ ಬೆಳೆದ ರೈತರಿಗೆ ಆಧಾರ್ ಕಾರ್ಡ್ ಮಾದರಿಯಲ್ಲಿ ಕೃಷಿ ಇಲಾಖೆಯು ಗುರುತಿನ ಕಾರ್ಡ್ ನೀಡುವುದರಿಂದ ಖರೀದಿ ಕೇಂದ್ರದಲ್ಲಿ ನಡೆಯುವ ಅನ್ಯಾಯ, ದಲ್ಲಾಳಿಗಳ ನಿಯಂತ್ರಣದಿಂದ ಶೋಷಣೆ ತಗ್ಗಿಸಬಹುದು.
ಗೋವಿಂದೇಗೌಡ , ನಿಲುವಾಗಿಲು ಪ್ರಗತಿಪರ ರೈತ
ಕೇಂದ್ರದಲ್ಲಿ ರೈತರನ್ನು ಶೋಷಿಸುವ ಪ್ರಶ್ನೆಯೇ ಇಲ್ಲ, ಎಪಿಎಂಸಿ ನಿಯಮಾನುಸಾರ ಖರೀದಿ ನಡೆಯುತ್ತಿದೆ. ಲೋಡಿಂಗ್ ಟೆಂಡರ್ ಪಡೆದಿರುವವರಿಂದ ಶೋಷಣೆ ನಡೆದಿದ್ದರೆ ನಮ್ಮ ವ್ಯಾಪ್ತಿಗೆ ಬಾರದು.
ಸುರೇಶ್ ಬಾಬು, ರಾಗಿ ಖರೀದಿ ಕೇಂದ್ರದ ಅಧಿಕಾರಿ.
ಹುಣಸೂರು ಎಪಿಎಂಸಿ ಗೋದಾಮಿನ ಬಳಿ ರಾಗಿ ಮಾರಾಟಕ್ಕೆ ಕಾದು ನಿಂತ ರೈತರು.

ರಾಗಿ ಬೆಳೆ ಅಂಕಿ ಅಂಶ

5337 ರೈತರು

16100 ಹೆಕ್ಟೇರ್‌

87631 ಕ್ವಿಂಟಲ್ ಉತ್ಪಾದನೆ

40 ಸಾವಿರ ಕ್ವಿಂಟಲ್ ಖರೀದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.