ಹುಣಸೂರು: ‘ಇಲ್ಲಿನ ಕಾವೇರಿ ಆಸ್ಪತ್ರೆ ಕಟ್ಟಡ ನಗರಸಭೆ ಕಾನೂನು ಉಲ್ಲಂಘಿಸಿ ನಿರ್ಮಿಸಿದ್ದು, ಈ ಸಂಬಂಧ ವಿಶೇಷ ಸಾಮಾನ್ಯ ಸಭೆಯಲ್ಲಿ ಅಕ್ರಮ ಕಟ್ಟಡಕ್ಕೆ ಸಾಥ್ ನೀಡಿದ ಸದಸ್ಯರನ್ನೇ ಏಕ ಸದಸ್ಯ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹಾಸ್ಯಾಸ್ಪದ’ ಎಂದು ನಗರಸಭೆ ಸದಸ್ಯ ಸ್ವಾಮಿಗೌಡ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ನಗರ ಪ್ರಾಧಿಕಾರದಿಂದ ನಕಾಶೆಗೆ ಅನುಮತಿ ಪಡೆದಿಲ್ಲ. ಇದಲ್ಲದೆ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ನಿವೇಶನದಲ್ಲಿ ತ್ಯಾಜ್ಯ ಸಂಗ್ರಹ ಘಟಕ ನಿರ್ಮಿಸಿದ್ದಾರೆ. ಈ ಎಲ್ಲವನ್ನು ತಿಳಿದ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಅಕ್ರಮ ಕಟ್ಟಡ ನಿರ್ಮಿಸಿದವರ ಪರವಾಗಿರುವುದು ದುರಂತ’ ಎಂದರು.
‘ಈ ಸಂಬಂಧ ನಗರಸಭೆ ನ್ಯಾಯಾಲಯ ಮೆಟ್ಟಿಲೇರಿ, ತೆರವುಗೊಳಿಸಿ ಇಲ್ಲವೇ ನಿಗದಿತ ಸಮಯದೊಳಗೆ ದಾಖಲೆ ನೀಡುವಂತೆ ಸೂಚಿಸಿದರು ಕ್ರಮವಹಿಸದೆ ಆಸ್ಪತ್ರೆ ಆಡಳಿತ ಮಂಡಳಿ ನಗರಸಭೆಗೆ ನ್ಯಾಯಾಲಯದಿಂದ ನೋಟಿಸ್ ಜಾರಿಗೊಳಿಸಿದೆ. ಈ ಎಲ್ಲವನ್ನು ತಿಳಿದ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಸಭೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಬದಲು ಅಕ್ರಮ ಕಟ್ಟಡ ನಿರ್ಮಿಸಲು ಬೆಂಬಲ ನೀಡಿದ ವ್ಯಕ್ತಿಯನ್ನೇ ಏಕ ಸದಸ್ಯ ಸಮಿತಿ ಅಧ್ಯಕ್ಷರನ್ನಾಗಿಸಿರುವುದು ಶೋಚನೀಯ ಸಂಗತಿ’ ಎಂದರು.
ವಿಶ್ವಾಸವಿಲ್ಲ: ವಿಶೇಷ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕಾಂಗ್ರೆಸ್ ಪಕ್ಷದ 12 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಏಕ ಸದಸ್ಯ ಸಮಿತಿ ಅಧ್ಯಕ್ಷರಿಂದ ಸತ್ಯಾಂಶ ಹೊರ ಬರುವ ವಿಶ್ವಾಸವಿಲ್ಲ. ನಗರಸಭೆಯಲ್ಲಿ ಪ್ರಜಾಪ್ರಭುತ್ವ ಆಡಳಿತ ನಡೆಯದೆ ತೊಘಲಕ್ ದರ್ಬಾರ್ ನಡೆಸಿದ್ದಾರೆ ಎಂದರು.
ಸೂಪರ್ ಸೀಡ್‌ಗೆ ಆಗ್ರಹ: ಹುಣಸೂರು ನಗರಸಭೆಯಲ್ಲಿ ಯಾವುದೂ ಕೌನ್ಸಿಲ್ ಸಭೆ ತೀರ್ಮಾನದಂತೆ ನಡೆಯುತ್ತಿಲ್ಲ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು, ಸ್ಥಳದಲ್ಲಿಯೇ ನಡಾವಳಿ ದಾಖಲಿಸದೆ ಅಧ್ಯಕ್ಷರು ಅವರ ವಿವೇಚನೆ ಬಂದಂತೆ ಬರೆದುಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಈ ಎಲ್ಲವನ್ನು ಪರಿಗಣಿಸಿ ಪೌರಾಡಳಿತ ಕಾನೂನು ಮಿತಿಯೊಳಗೆ ನಗರಸಭೆಯನ್ನು ಸೂಪರ್ ಸೀಡ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ನಗರಸಭೆ ಸದಸ್ಯರಾದ ಸೌರಭ ಸಿದ್ದರಾಜು, ಸಮೀನಾ ಪರ್ವಿನ್, ಪರ್ವಿನ್ ತಾಜ್, ರಮೇಶ್, ರಂಜಿತಾ.ಪಿ, ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.