ADVERTISEMENT

ಮೊಬೈಲ್‌ ಫೋನ್‌ ಬಳಸದ ದರೋಡೆಕೋರರು

ನಕಲಿ ದಾಖಲೆ ಬಳಸಿ ಪಿರಿಯಾಪಟ್ಟಣ, ಹುಣಸೂರಿನಲ್ಲಿ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:39 IST
Last Updated 20 ಜನವರಿ 2026, 4:39 IST
ಮೈಸೂರಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ದರೋಡೆ ಪ್ರಕರಣ ಕುರಿತು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು. ಎಎಸ್‌ಪಿ ಎಂ.ನಾಗೇಶ್‌ ಹಾಜರಿದ್ದರು
ಮೈಸೂರಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ದರೋಡೆ ಪ್ರಕರಣ ಕುರಿತು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು. ಎಎಸ್‌ಪಿ ಎಂ.ನಾಗೇಶ್‌ ಹಾಜರಿದ್ದರು   

ಮೈಸೂರು: ‘ಈಚೆಗೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಹುಣಸೂರಿನ ದರೋಡೆ ಪ್ರಕರಣದಲ್ಲಿ ಆರೋಪಿಗಳು ಕೃತ್ಯ ನಡೆಸುವಾಗ ಮೊಬೈಲ್‌ ಬಳಸದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಮುಖಚರ್ಯೆ ಗುರುತಿಸಿ ಬಿಹಾರದಲ್ಲಿ ಇಬ್ಬರನ್ನು ಬಂಧಿಸಲಾಯಿತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತನಿಖೆ ಆರಂಭಿಸಿದಾಗ ಐವರು ದರೋಡೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮೊಬೈಲ್‌ ಬಳಸದೇ ಇದ್ದ ಕಾರಣ ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು. 10ಕ್ಕೂ ಹೆಚ್ಚು ಆರೋಪಿಗಳಿದ್ದು, ತನಿಖೆ ಮುಂದುವರಿಸಿದ್ದೇವೆ’ ಎಂದರು.

‘ವಿಡಿಯೊ ದೃಶ್ಯಗಳಲ್ಲಿ ಮೂವರ ಮುಖಗಳಷ್ಟೇ ಕಾಣಿಸುತ್ತಿದ್ದವು. ಅವರ ಮುಖಚಹರೆ ಹಾಗೂ ತಂತ್ರಜ್ಞಾನ ಬಳಸಿದಾಗ ಬಿಹಾರ ರಾಜ್ಯದವರೆಂದು ತಿಳಿಯಿತು. ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ, ಆರೋಪಿಗಳ ಗುರುತು ಪತ್ತೆಹಚ್ಚಿದರು. ಎಎಸ್‌ಪಿ ಎಲ್‌.ನಾಗೇಶ್‌ ನೇತೃತ್ವದಲ್ಲಿ ಐದು ತಂಡ ರಚಿಸಿ ವಿವಿಧ ಜಿಲ್ಲೆಗಳಿಗೆ ಕಳಿಸಿಕೊಡಲಾಯಿತು’ ಎಂದು ಮಾಹಿತಿ ನೀಡಿದರು.

ADVERTISEMENT

‘ಬಿಹಾರಕ್ಕೆ ತೆರಳಿದ್ದ ಇನ್‌ಸ್ಪೆಕ್ಟರ್‌ ಸಂತೋಷ್‌ ಕಶ್ಯಪ್‌, ಡಿ.ಎಂ.ಪುನೀತ್‌, ಪಿಎಸ್‌ಐ ಅಜಯ್‌ ಕುಮಾರ್‌ ನೇತೃತ್ವದ ತಂಡವು ಅಲ್ಲಿನ ಪೊಲೀಸರ ನೆರವಿನೊಂದಿಗೆ ದರ್ಬಾಂಗ್‌ ಜಿಲ್ಲೆಯಲ್ಲಿದ್ದ, ದೆಹಲಿ ಮೂಲದ ರಿಷಿಕೇಶ್‌ ಕುಮಾರ್‌ ಸಿಂಗ್‌ ಹಾಗೂ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಬಾಗಲ್‌ಪುರ್‌ ಜಿಲ್ಲೆಯ ಪಂಕಜ್‌ನನ್ನು ಬಂಧಿಸಲಾಯಿತು. ನಮ್ಮ ವಶಕ್ಕೆ ಪಡೆದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದರು.

ನಟೋರಿಯಸ್‌ ತಂಡ: 

‘ಪಂಕಜ್‌ 27 ಪ್ರಕರಣಗಳಲ್ಲಿ ಹಾಗೂ ರಿಷಿಕೇಶ್‌ ಅಲಿಯಾಸ್‌ ಚೋಟು 4 ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ದರೋಡೆಗೆ ಪಂಕಜ್‌ ಯುವಕರನ್ನು ಒಟ್ಟುಗೂಡಿಸಿ, ಲಾಜಿಸ್ಟಿಕ್‌ ಬೆಂಬಲ ಒದಗಿಸಿರುವುದು ಗೊತ್ತಾಗಿದೆ. ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳ ದರೋಡೆ ಪ್ರಕರಣದಲ್ಲೂ ಭಾಗಿಗಳಾಗಿದ್ದಾರೆ. ಇತರೆ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾಗ ಅಲ್ಲಿ ಸ್ನೇಹಿತರಾಗಿ ಬಳಿಕ ಗುಂಪಾಗಿ ದುಷ್ಕೃತ್ಯ ಎಸಗುತ್ತಿರುವ ಬಗ್ಗೆ ಮಾಹಿತಿ ಇದೆ. ಇವರು ವಿವಿಧ ರಾಜ್ಯಗಳಿಗೆ ಸೇರಿದವರು. ಸ್ಥಳೀಯರು ಯಾರೂ ಭಾಗಿಯಾಗಿಲ್ಲ’ ಎಂದರು.

ನಕಲಿ ದಾಖಲೆ ಬಳಸಿ ವಾಸ್ತವ್ಯ: 

‘ವೃತ್ತಿಪರ ದರೋಡೆಕೋರರಾದ ಇವರು ಕರ್ನಾಟಕದಲ್ಲಿ ಮೊದಲ ಬಾರಿಗೆ ದರೋಡೆ ನಡೆಸಿದ್ದಾರೆ. ಕೊಡಗು, ಹಾಸನ, ಮೈಸೂರು ಭಾಗಗಳಲ್ಲಿ ಸಂಚರಿಸಿ ಕೊನೆಗೆ ಹುಣಸೂರಿನ ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ ಚಿನ್ನಾಭರಣ ಮಳಿಗೆಯನ್ನು ಗುರಿಯಾಗಿಸಿಕೊಂಡಿದ್ದರು’ ಎಂದು ಮಾಹಿತಿ ನೀಡಿದರು.

‘ಕೃತ್ಯಕ್ಕೆ ಮೊದಲು ಹುಣಸೂರು, ಪಿರಿಯಾಪಟ್ಟಣದ ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡಿದ್ದು, ಅಲ್ಲಿ ನಕಲಿ ಆಧಾರ್‌ ಕಾರ್ಡ್‌ ಹಾಗೂ ಬೇರೆಯವರ ಮೊಬೈಲ್‌ ಸಂಖ್ಯೆ ನಮೂದಿಸಿದ್ದರು. ಕೃತ್ಯ ನಡೆಸಿದ ಬಳಿಕ ಒಟ್ಟಿಗೇ ತೆರಳದೆ, ವಿವಿಧ ಕಡೆಗಳಿಗೆ ತೆರಳಿದ್ದರು. ಹುಣಸೂರನ್ನೇ ಯಾಕೆ ಆಯ್ಕೆ ಮಾಡಿದರು? ಅವರ ಯೋಜನೆ ಹೇಗಿತ್ತು ಎಂಬುದು, ಇಡೀ ತಂಡವನ್ನು ಪತ್ತೆ ಹಚ್ಚಿದ ಬಳಿಕ ಗೊತ್ತಾಗಲಿದೆ’ ಎಂದರು. 

‘ಆರೋಪಿಗಳ ಬಂಧನದ ಜೊತೆಗೆ, ದರೋಡೆ ಮಾಡಿದ 8 ಕೆ.ಜಿ ಆಭರಣ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗುವುದು’ ಎಂದು ತಿಳಿಸಿದರು.

ಎಎಸ್‌ಪಿ ಎಂ.ನಾಗೇಶ್‌ ಇದ್ದರು.

‘ಎರಡು ವಾರ ಐವತ್ತು ಪೊಲೀಸರಿಂದ ಹುಡುಕಾಟ’

‘ಸ್ಕೈ ಗೋಲ್ಡ್‌ ಆಂಡ್‌ ಡೈಮಂಡ್‌ ಮಳಿಗೆಯ ಸಿಬ್ಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಸಿ 450 ವಿವಿಧ ಮಾದರಿಯ ₹10 ಕೋಟಿ ಮೌಲ್ಯದ 8.34 ಕೆಜಿ ಚಿನ್ನಾಭರಣ ದೋಚಿರುವ ಆರೋಪಿಗಳನ್ನು ಪತ್ತೆಹಚ್ಚಲು ಐವತ್ತು ಪೊಲೀಸರು ಎರಡು ವಾರದಿಂದ ಸತತವಾಗಿ ಹುಡುಕಾಟ ನಡೆಸಿದ್ದಾರೆ’ ಎಂದು ಎಸ್‌ಪಿ ತಿಳಿಸಿದರು. ‘ಆರೋಪಿಗಳಿಂದ 12.5 ಗ್ರಾಂ ಚಿನ್ನಾಭರಣ ಹಾಗೂ ₹92 ಸಾವಿರ ನಗದು ಸ್ಕೈ ಗೋಲ್ಡ್‌ ಚಿಹ್ನೆ ಇರುವ ಒಂದು ಬಾಕ್ಸ್‌ ರಾಯಲ್ ಎನ್‌ಫೀಲ್ಡ್‌ ಬೈಕ್‌ ಅಮಾನತುಗೊಳಿಸಲಾಗಿದೆ’ ಎಂದು ಹೇಳಿದರು.

Cut-off box - ಆರೋಪಿಗಳ ಐಷಾರಾಮಿ ಜೀವನ..! ಆರೋಪಿಗಳು ಬಿಹಾರ ರಾಜ್ಯದ ದರ್ಬಾಂಗ್‌ ಜಿಲ್ಲೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿ ರಿಷಿಕೇಶ್‌ಗೆ ಒಂದು ಎಕರೆ ಜಾಗದಲ್ಲಿ ಕೋಟ್ಯಂತರ ಮೌಲ್ಯದ ಮನೆಯಿದೆ. ಇತರರಿಂದ ದರೋಡೆ ಮಾಡಿಸುವ ಕೆಲಸ ಮಾಡಿಕೊಂಡಿದ್ದ. ಹುಣಸೂರಿನ ಕೃತ್ಯದ ಬಳಿಕ ಹೊಸ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಖರೀದಿಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.