ಹುಣಸೂರು: ವರ್ಷದ ಪೂರ್ತಿ ಬಹು ಬೇಡಿಕೆಯ ತರಕಾರಿ ಬೇಸಾಯ ಮಾಡಿ ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಂಡ ಡಿಪ್ಲೊಮಾ ಪದವೀಧರ, ಪ್ರಗತಿಪರ ರೈತ ಕೃಷ್ಣಪುರದ ಕೃಷ್ಣ ಇತರರಿಗೆ ಮಾದರಿಯಾಗಿದ್ದಾರೆ.
ತಾಲ್ಲೂಕಿನ ಕೃಷ್ಣಪುರದಲ್ಲಿ ತಾಯಿಯ 3 ಎಕರೆ ಭೂಮಿಯಲ್ಲಿ 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಏಳು–ಬೀಳುಗಳನ್ನು ಕಂಡು ಇತ್ತೀಚಿಗೆ ತರಕಾರಿ ಬೇಸಾಯಕ್ಕೆ ಸೀಮಿತಗೊಂಡು, ಆರ್ಥಿಕ ಸುಸ್ಥಿರತೆ ಕಂಡುಕೊಳ್ಳಲು ಸಫಲರಾಗಿದ್ದಾರೆ. ಮೂರು ಎಕರೆ ಪ್ರದೇಶದಲ್ಲಿ ಅರ್ಧ ಎಕರೆಯಂತೆ ವಿಂಗಡಿಸಿ ಪ್ರತಿಯೊಂದು ಭಾಗದಲ್ಲೂ 45 ರಿಂದ 60 ದಿನಳಲ್ಲಿ ಫಸಲು ಸಿಗುವ ತರಕಾರಿ ಬೇಸಾಯ ಮಾಡಿದ್ದಾರೆ. ಇದರೊಂದಿಗೆ ಕುರಿ ಸಾಕಣೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.
ಕೊಳವೆ ಬಾವಿ ಹೊಂದಿದ್ದು, ಪ್ರತಿ ಅರ್ಧ ಎಕರೆಯಲ್ಲಿ ಒಂದು ತಿಂಗಳು ಅಂತರದಲ್ಲಿ ತರಕಾರಿ ಬೇಸಾಯ ಮಾಡುವ ಪದ್ಧತಿ ಅನುಸರಿಸಿ ಒಂದರ ನಂತರದಲ್ಲಿ ಒಂದು ತರಕಾರಿ ನಿರಂತರವಾಗಿ ಫಸಲು ಸಿಗುವಂತೆ ಕ್ರಮ ವಹಿಸಿದ್ದಾರೆ. ಬದನೆಕಾಯಿ, ಸೌತೆಕಾಯಿ, ಹೂ ಕೋಸು, ಎಲೆ ಕೋಸು ಬೆಳೆಯೊಂದಿಗೆ ವರ್ಷದ ಎಲ್ಲಾ ಕಾಲದಲ್ಲೂ ಟೊಮೆಟೊ ಒಂದು ಭಾಗದಲ್ಲಿ ಕಾಯಂಇರುತ್ತದೆ. ಭತ್ತ ಮತ್ತು ರಾಗಿ ಬೆಳೆಯಲು ಅರ್ಧ ಎಕರೆಯಲ್ಲಿ ಮೀಸಲಿಟ್ಟಿದ್ದಾರೆ.
ಮಾರುಕಟ್ಟೆ: ಬೆಳೆದ ತರಕಾರಿಯನ್ನು ಕೆ.ಆರ್.ನಗರ ಮತ್ತು ಹುಣಸೂರು ಎಪಿಎಂಸಿ ಮಾರುಕಟ್ಟೆಯಲ್ಲಿ ನೇರವಾಗಿ ಮಾರಾಟ ಮಾಡುವ ಇವರು, ಬದನೆಕಾಯಿಂದ 15 ದಿನಕ್ಕೆ ₹ 35 ರಿಂದ 40 ಸಾವಿರ, ಸೌತೆಕಾಯಿಂದ ನಿತ್ಯ ₹ 2 ಸಾವಿರ ಆದಾಯವಿದೆ. ಕೇರಳದ ವ್ಯಾಪಾರಿಗಳು ಟೊಮೆಟೊ ಹೊಲದಲ್ಲೇ ನೇರ ಖರೀದಿಸುವರು. ಸಮಗ್ರ ಕೃಷಿಯಿಂದ ವಾರ್ಷಿಕ ₹ 2 ರಿಂದ 2.50 ಲಕ್ಷ ಉಳಿತಾಯವಾಗುತ್ತಿದೆ ಎಂದು ಕೃಷ್ಣ ತಿಳಿಸಿದರು.
ಆರ್ಥಿಕ ಸ್ವಾವಲಂಬನೆಗೆ ತಂಬಾಕು ಬೇಸಾಯ ಒಂದೇ ಅಲ್ಲ. ತರಕಾರಿ ಕೃಷಿಯಿಂದಲೂ ನಿತ್ಯವೂ ಹಣ ಗಳಿಸಬಹುದು. ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದು ಪದವಿ ಮುಗಿದೊಡನೆ ಮಗಳನ್ನು ಕೆಎಎಸ್ ಪರೀಕ್ಷೆಗೆ ಸಿದ್ದಗೊಳಿಸುವ ಇಚ್ಛೆ.ಕೃಷ್ಣ ಕೃಷ್ಣಪುರಪ್ರಗತಿಪರ ರೈತ
ಕುರಿ ಸಾಕಣೆ ಸಮಗ್ರ ಕೃಷಿ ಬೇಸಾಯಕ್ಕೆ ಒಡ್ಡಿಕೊಂಡಿರುವ ಇವರು ಬೇಸಾಯದೊಂದಿಗೆ ಬನ್ನೂರು ಕುರಿ ಸಾಕಣಿಕೆಯಲ್ಲೂ ಮುಂಚೂಣಿ. ನರೇಗಾ ಯೋಜನೆಯಲ್ಲಿ ₹ 75 ಸಾವಿರ ಸಹಾಯ ಧನ ಪಡೆದು ಕುರಿ ಶೆಡ್ ನಿರ್ಮಿಸಿ 30 ಕುರಿ ಸಾಕುತ್ತಿದ್ದಾರೆ. ಕುರಿ ಮರಿಗಳನ್ನು ಖರೀದಿಸಿ 8 ರಿಂದ 10 ತಿಂಗಳು ಸಾಕಣೆ ನಡೆಸಿ ಮಾರಾಟ ಮಾಡುತ್ತಿದ್ದಾರೆ. ಕುರಿ ಸಾಕಣೆಯಿಂದ ವಾರ್ಷಿಕ ₹4 ಲಕ್ಷ ವಹಿವಾಟು ನಡೆಸುತ್ತಿದ್ದಾರೆ.
ಸಾವಯವ ಕೃಷ್ಣ ಸಾವಯವ ಗೊಬ್ಬರ ಸಿದ್ದಪಡಿಸುವ ತರಬೇತಿಹೊಂದಿದ್ದಾರೆ. ಕುರಿ ಮತ್ತು ಹಸುಗಳ ಜೈವಿಕತ್ಯಾಜ್ಯ( ಬಯೋ ವೇಸ್ಟ್) ಬಳಸಿ ಉತ್ಪಾದಿಸಿದ ಸಾವಯವ ಗೊಬ್ಬರವನ್ನುಇವರು ತಮ್ಮ ಬೇಸಾಯಕ್ಕೆ ಬಳಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.