ಹುಣಸೂರು: ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿ ವಾಸಿಸುತ್ತಿರುವ 29ನೇ ವಾರ್ಡ್‌ನ ನಿವಾಸಿಗಳಿಗೆ ವೈಜ್ಞಾನಿಕವಾಗಿ ಕಾಲೊನಿ ನಿರ್ಮಿಸಿ ನೆಮ್ಮದಿಯ ಜೀವನ ನಡೆಸಲು ಪ್ರಯತ್ನ ಮಾಡುವುದಾಗಿ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಹೇಳಿದರು.
ನಗರದ ವಾರ್ಡ್ 29ರಕ್ಕೆ ವಾರ್ಡ್ ಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ಮಾದ್ಯಮಗಳಿಗೆ ಮಾತನಾಡಿ, ಈ ವಾರ್ಡ್ ನಲ್ಲಿ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿ ನೆಲೆ ಕಟ್ಟಿಕೊಂಡಿದ್ದು, ವಿವಿಧ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡಲಾಗಿದೆ. ಕೆಲವರಿಗೆ ಮನೆ ಇಲ್ಲದೆ ಗುಡಿಸಿಲಿನಲ್ಲಿ ವಾಸಿಸುತ್ತಿದ್ದು, ಮೂಲಭೂತ ಸವಲತ್ತು ಕಲ್ಪಿಸಬೇಕಾಗಿದೆ ಎಂದರು.
ಕೆಲವು ಮನೆಯಲ್ಲಿ 10-12 ಕ್ಕು ಹೆಚ್ಚು ಜನರು ವಾಸಿಸುತ್ತಿದ್ದು, ಈ ರೀತಿ ಕುಟುಂಬಗಳ ಪಟ್ಟಿ ಮಾಡಿ ಆಶ್ರಯ ಯೋಜನೆಯಲ್ಲಿ ಮನೆ ನೀಡಲು ಆಯುಕ್ತರಿಗೆ ಸೂಚಿಸಲಾಗಿದೆ ಎಂದರು. ಕೊಳೆಗೇರಿ ಸೇರಿದಂತೆ ವಾರ್ಡ್ ನಲ್ಲಿ ನೀರಿನ ಸಮಸ್ಯೆ, ವಿದ್ಯುತ್ ಇಲ್ಲದ ಬಗ್ಗೆ ಅರ್ಜಿಗಳು ಬಂದಿದ್ದು, ಈ ಸಂಬಂಧ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮವಹಿಸಲಿದ್ದೇನೆ ಎಂದರು.
ಬಡಾವಣೆಯಲ್ಲಿ ಕೆಲವು ಭಾಗದಲ್ಲಿ ತ್ಯಾಜ್ಯ ತೆರವುಗೊಳಿಸದೆ ದುರ್ವಾಸನೆ ಎದುರಾಗಿತ್ತು. ಭೇಟಿ ಸಮಯದಲ್ಲಿ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿ ತೆರವುಗೊಳಿಸಿದ್ದೇವೆ. ಕೆಲವು ಸಮಸ್ಯೆಗಳು ಶಾಸಕ ಜಿ.ಡಿ.ಹರೀಶ್ ಗೌಡ ಗಮನಕ್ಕೆ ತಂದು ಬಗೆಹರಿಸುವ ಬಗ್ಗೆ ವಿಶ್ವಾಸವಿದೆ ಎಂದರು.
ಭೇಟಿಯಲ್ಲಿ ವಾರ್ಡ್ ಸದಸ್ಯೆ ಪ್ರಿಯಾಂಕ ಥಾಮಸ್, ಕಾಂಗ್ರೆಸ್ ಮುಖಂಡ ವೆನ್ನಿ, ಆಯುಕ್ತೆ ಮಾನಸ, ಎಇಇ ಶರ್ಮಿಳಾ, ಪರಿಸರ ಎಂಜಿನಿಯರ್ ಸೌಮ್ಯ,ಕಂದಾಯ ಅಧಿಕಾರಿ ಸಿದ್ದರಾಜು ಸೇರಿದಂತೆ ಇತರೆ ಅಧಿಕಾರಿಗಳಿದ್ದರು.
ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿ ಬಹುತೇಕ ಆರ್ಥಿಕವಾಗಿ ಸೊರಗಿದವರು ನೆಲೆಕಟ್ಟಿಕೊಂಡಿದ್ದು, ಈ ಸಮುದಾಯದವರಿಗೆ ಶಾಶ್ವತ ಸೂರು ಕಲ್ಪಿಸುವ ದಿಕ್ಕಿನಲ್ಲಿ ನಗರಸಭೆ ಯೋಜನೆ ರೂಪಿಸಿ ಶಾಸಕರ ಗಮನಕ್ಕೆ ತಂದು ಕಾರ್ಯರೂಪಗೊಳಿಸಲು ಪ್ರಸ್ತಾವನೆ ಸಲ್ಲಿಸುವೆ.ಗಣೇಶ್ ಕುಮಾರಸ್ವಾಮಿ ನಗರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.