ADVERTISEMENT

46 ದಿನ ಜೈಲಿನಲ್ಲಿದ್ದೆ: ಸ್ವಾತಂತ್ರ್ಯ ಹೋರಾಟಗಾರ ಸಿ.ಆರ್‌.ರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 19:30 IST
Last Updated 5 ಆಗಸ್ಟ್ 2022, 19:30 IST
ಸಿ.ಆರ್‌.ರಂಗಶೆಟ್ಟಿ
ಸಿ.ಆರ್‌.ರಂಗಶೆಟ್ಟಿ   

ಮೈಸೂರು: ಚಾಮರಾಜನಗರದ ಚಿಕ್ಕಂಗಡಿ ಬೀದಿಯಲ್ಲಿ ನಾಲ್ವರು ಸೋದರಿಯರು, ಮೂವರು ಸೋದರರಿದ್ದ ಕಷ್ಟಗಳೇ ಹೊದ್ದಿದ್ದ ವ್ಯಾಪಾರಿ ಕುಟುಂಬದಲ್ಲಿ 1926ರ ಅ.20ರಂದು ಜನಿಸಿದೆ. ನನಗೀಗ 96 ವರ್ಷ.

ಪಟ್ಟಣದ ಮುನ್ಸಿಪಲ್‌ ಶಾಲೆಯಲ್ಲಿ ಓದುತ್ತಿದ್ದಾಗಿನ ದಿನಗಳಲ್ಲಿ ಮಹಾತ್ಮ ಗಾಂಧಿ ಮುನ್ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟದ ಪರಿಚಯವಾಯಿತು. ಓದಿನ ಜೊತೆಗೆ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೆ. ಪೊಲೀಸರು ನಮ್ಮನ್ನು ಗೋಳಾಡಿಸುತ್ತಿದ್ದರು. ಬೂಟುಗಾಲಿನ ಒದೆಗಳು ಮಾಮೂಲಿ ಎನ್ನುವಂತಾಗಿದ್ದವು. ಮಕ್ಕಳನ್ನು ಠಾಣೆಯಲ್ಲಿಟ್ಟುಕೊಳ್ಳುವಂತಿಲ್ಲ. ಎಚ್.ಡಿ.ಕೋಟೆಯ ಗವ್ವೆನಿಸುವ ಕಾಡಿನಲ್ಲಿ ಬಿಟ್ಟು ಬರುತ್ತಿದ್ದರು. ಕಾಡು ಪ್ರಾಣಿಗಳ ಭಯದಿಂದ ಮತ್ತಿನ್ನೆಂದು ಚಳುವಳಿಗೆ ಬರುವುದಿಲ್ಲವೆಂಬುದು ಅವರ ಲೆಕ್ಕಾಚಾರ.

ಆಗೆಲ್ಲ ಸೋಲಿಗರು, ಕಾಡುಕುರುಬರು ನಮ್ಮನ್ನು ರಕ್ಷಿಸಿ ಅನ್ನ, ಗೆಣಸು ನೀಡಿ ಊರ ರಸ್ತೆಗೆ ಬಿಡುತ್ತಿದ್ದರು. ಮತ್ತೆ ನಗರಕ್ಕೆ ಬಂದರೆ ಚಳವಳಿ. ಕ್ವಿಟ್‌ ಇಂಡಿಯಾ ಚಳವಳಿ ಆರಂಭವಾದಾಗ ನಗರದಲ್ಲಿ ದೇವಶೆಟ್ಟರು, ಮಾದಾಪುರ ಪುಟ್ಟನಂಜಪ್ಪ ನಮ್ಮನ್ನು ಮುನ್ನಡೆಸುತ್ತಿದ್ದರು. ನಗರದ ಮಾರಿಗುಡಿಯ ಬಳಿ ಧ್ವಜ ಹಾರಿಸುವುದು ಪೊಲೀಸರಿಂದ ನಿತ್ಯ ಛಡಿಯೇಟು ತಿನ್ನುವುದು ಮುಂದುವರಿದಿತ್ತು.

ADVERTISEMENT

ಸಿ.ಗೋಪಾಲರಾವ್‌, ಸುಬ್ಬರಾವ್‌, ಕೊಚ್ಚಿ ಕಿಟ್ಟಪ್ಪ ನಿತ್ಯ ದಿನಪತ್ರಿಕೆ ಓದಿ ಎಲ್ಲೆಲ್ಲೆ ಚಳವಳಿ ನಡೆಯುತ್ತಿದೆ ಎಂದು ತಿಳಿಸುತ್ತಿದ್ದರು. ಮದ್ದೂರಿನ ಶಿವಪುರದ ಧ್ವಜ ಸತ್ಯಾಗ್ರಹಕ್ಕೆ ನಡೆದುಕೊಂಡೇ ಹೋಗಿದ್ದೆವು. ದಾರಿಯುದ್ದಕ್ಕೂ ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸುತ್ತಿದ್ದೆವು. ಬಸ್‌ಗಳಲ್ಲಿ ಸತ್ಯಾಗ್ರಹಿಗಳಿಗೆ ಟಿಕೆಟ್‌ ಚಾರ್ಜ್‌ ಮಾಡುತ್ತಿರಲಿಲ್ಲ. ಜನರೇ ಅನ್ನ ಹಾಕುತ್ತಿದ್ದರು. ಜನರೂ ಒಂದಿಲ್ಲೊಂದು ರೀತಿಯಲ್ಲಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಗಾಂಧಿ ನಂಜನಗೂಡು, ಬದನವಾಳಿಗೆ ಬಂದಾಗ ನಾವಿನ್ನು ಚಿಕ್ಕವರು. ಗಾಂಧಿ ತತ್ವವನ್ನು ನಮಗೆಲ್ಲ ತಲುಪಿಸಿದವರು ಎಸ್‌.ನಿಜಲಿಂಗಪ್ಪ, ಎಸ್‌.ಚನ್ನಯ್ಯ, ಕೆಂಗಲ್‌ ಹನುಮಂತಯ್ಯ, ಟಿ.ಮರಿಯಪ್ಪ, ಕೆ.ಪುಟ್ಟಸ್ವಾಮಿ, ಮಲೆಯೂರು ಚಿಕ್ಕಲಿಂಗಪ್ಪ, ಎಂ.ಸಿ.ಬಸಪ್ಪ. ಸ್ವಾತಂತ್ರ್ಯ ಬಂದಾಗ ಊರಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರತಿ ಮನೆಯಲ್ಲೂ ಹಬ್ಬದೂಟ.

ಮೈಸೂರು ಚಲೋ ನಡೆದಾಗ ಚಾಮರಾಜನಗರದಲ್ಲಿ ಮೆರವಣಿಗೆ ಮಾಡಿದ್ದೆವು. ಆಗ ಬದನಗುಪ್ಪೆಯ ಮಾರ್ಗವಾಗಿ ತೆರಳುವಾಗ ಕವಲಂದೆಯಲ್ಲಿ ಪೊಲೀಸರು ಬಂಧಿಸಿ ಮೈಸೂರಿನ ಕೋರ್ಟ್‌ಗೆ ತಂದರು. 46 ದಿನ ಜೈಲಿನಲ್ಲಿದ್ದೆ. ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರಿದಾಗ ಬಿಡುಗಡೆಯಾದೆ.

ಊರಿನಲ್ಲಿ ತಂದೆ ನಡೆಸುತ್ತಿದ್ದ ಕಿರಾಣಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಗುಮಾಸ್ತ ಹುದ್ದೆಗೆ ಅರ್ಜಿ ಹಾಕಿದ್ದೆ. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ 7 ವರ್ಷ ಕೆಲಸ ಮಾಡಿದೆ. ಮೈಸೂರಿನ ಮಹಾರಾಜ ಕಾಲೇಜು, ಯುವರಾಜ, ಕ್ರಾಫರ್ಡ್‌ ಭವನ, ಗಂಗೋತ್ರಿಯಲ್ಲಿ ಕೆಲಸ ಮಾಡಿ, ಸೂಪರಿಟೆಂಡೆಂಟ್‌ ಆಗಿ 1981ರಲ್ಲಿ ನಿವೃತ್ತನಾದೆ.

ಮೈಸೂರಿನ ದೇವಾಂಬ ಅಗ್ರಹಾರದಲ್ಲಿ ಕಳೆದ 40 ವರ್ಷಗಳಿಂದ ಇದೇ ಮನೆಯಲ್ಲಿದ್ದೇನೆ. ಜೊತೆಗಾರೆರೆಲ್ಲ ಈಗಿಲ್ಲ. 150ಕ್ಕೂ ಹೆಚ್ಚು ಜನರಿದ್ದ ಸ್ವಾತಂತ್ರ್ಯ ಹೋರಾಟಗಾರರ ಸಂಘದಲ್ಲಿ ಈಗಿರುವುದು ಬೆರಳೆಣಿಕೆಯಷ್ಟೇ.

ನಿರೂಪಣೆ: ಮೋಹನ್ ಕುಮಾರ ಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.