ADVERTISEMENT

ವಿಧಾನಸಭೆ ಚುನಾವಣೆ: ಹೈಕಮಾಂಡ್‌ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 11:41 IST
Last Updated 26 ಸೆಪ್ಟೆಂಬರ್ 2022, 11:41 IST
   

ಮೈಸೂರು: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್‌ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಸೋಮವಾರ ಪ್ರವಾಸ ಕೈಗೊಂಡ ಅವರು ಚಿಕ್ಕಹೊಮ್ಮ ಕೆರೆಗೆ ಬಾಗಿನ ಸಮರ್ಪಿಸಿದ ಬಳಿಕ ಅವರು ಮಾತನಾಡಿದರು.

ವರುಣಾದಲ್ಲಿ ಸ್ಪರ್ಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಯತೀಂದ್ರ ಈಗ ಶಾಸಕರಿದ್ದಾರಲ್ಲಾ, ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆಮೇಲೆ ನೋಡೋಣ. ಅವರು ಮತ್ತೆ ಶಾಸಕರಾಗಬೇಕೋ, ಬೇಡವೋ?’ ಎಂದು ಕೇಳಿದರು.

ADVERTISEMENT

‘ಇಲ್ಲಿ ಸ್ಪರ್ಧಿಸುವಂತೆ ನೀವು ಕೇಳುತ್ತಿದ್ದಾರೆ. ಬಾದಾಮಿ ಕ್ಷೇತ್ರದವರು ಅಲ್ಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಕೋಲಾರ, ಚಾಮರಾಜಪೇಟೆಯವರೂ ಕೇಳುತ್ತಿದ್ದಾರೆ. ಹೈಕಮಾಂಡ್‌ನವರು ವರುಣಾದಲ್ಲಿ ನಿಲ್ಲಿ ಎಂದರೂ ನಿಲ್ಲುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ಬಹಳ ದಿನಗಳಿಂದ ವರುಣಾ ಕ್ಷೇತ್ರಕ್ಕೆ ಬಂದಿರಲಿಲ್ಲ. 4 ವರ್ಷ ಅಂತರವಾದ್ದರಿಂದ ಬಹಳ ಮಂದಿಯ ಹೆಸರು ಮರೆತು ಹೋಗಿದೆ. ಆದರೆ, ನಾನು ಮಾಡಿರುವ ಕೆಲಸಗಳು ಜನರ ಮನಸ್ಸಿನಲ್ಲಿವೆ. ಎರಡು ಬಾರಿ ಶಾಸಕನನ್ನಾಗಿ ಮಾಡಿದ್ದು, ಮುಖ್ಯಮಂತ್ರಿ ಮಾಡಿದ್ದು ಇದೇ ಕ್ಷೇತ್ರ. ನಿಮ್ಮನ್ನು ಮರೆಯಲಾಗದು’ ಎಂದರು.

‘ಹೋದ ಬಾರಿ ಕೊನೆ ಚುನಾವಣೆಯಾದ್ದರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲೋಣ ಎಂದು ಅಲ್ಲಿಗೆ ಹೋಗಿದ್ದೆ. ಆದರೆ, ನನ್ನನ್ನು ಸೋಲಿಸಲು ಬಿಜೆಪಿಯವರು ಸೇರಿದಂತೆ ಎಲ್ಲರೂ ಒಂದಾದರು. ಆದ್ದರಿಂದ, ಬಾದಾಮಿಯಲ್ಲೂ ಸ್ಪರ್ಧಿಸಿದೆ. ದೂರದ ಬಾಗಲಕೋಟೆಯ ಜನರು ನನ್ನ ಕೈಹಿಡಿದರು. ಆದರೆ, ಬಹಳ ಕೆಲಸ ಮಾಡಿಕೊಟ್ಟರೂ ಚಾಮುಂಡೇಶ್ವರಿಯವರು ಕೈಹಿಡಿಯಲಿಲ್ಲ. ಒಂದು ವೇಳೆ ವರುಣಾದಲ್ಲೇ ನಿಂತಿದ್ದರೆ ನೀವು ಮತ್ತೆ ಗೆಲ್ಲಿಸಿಯೇ ಗೆಲ್ಲಿಸುತ್ತಿದ್ದಿರಿ’ ಎಂದು ಹೇಳಿದರು.

‘ನಾನು ಎಲ್ಲೇ ಶಾಸಕನಾಗಿದ್ದರೂ, ಏನೇ ಆಗಿದ್ದರೂ ವರುಣಾದ ಜನರು ನನ್ನ ಮನಸ್ಸಿನಲ್ಲಿರುತ್ತಾರೆ’ ಎಂದು ಹೇಳಿದರು.

‘2023ರಲ್ಲಿ ಚುನಾವಣೆಯಲ್ಲಿ ಆಶೀರ್ವದಿಸಿದರೆ, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಹಿಂದೆ ಬೀಳುವುದಿಲ್ಲ’ ಎಂದು ಭರವಸೆ ನೀಡಿದರು.

‘ಬಿಜೆಪಿಯವರು ಲೂಟಿ ಮಾಡುತ್ತಾ ಜನರಿಗೆ ಟೋಪಿ ಹಾಕುತ್ತಿದ್ದಾರೆ’ ಎಂದು ದೂರಿದರು. ‘ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಬೇಕಾದ ವಾತಾವರಣ ರಾಜ್ಯದಾದ್ಯಂತ ನಿರ್ಮಾಣವಾಗಿದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.