ಮೈಸೂರು: ‘ಇತಿಹಾಸವನ್ನು ಮರೆತ ಸಮುದಾಯವು ತನ್ನ ಸಮಾಧಿಯನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ನಾಗಪುರದ ಕಾರ್ಯಾಲಯವು ನಮ್ಮನ್ನು ಸಂಪೂರ್ಣ ನಾಶ ಮಾಡುತ್ತದೆ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ನಗರದ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಶನಿವಾರ ನಡೆದ ಮಹಿಷ ಮಂಡಲೋತ್ಸವ ಪ್ರಯುಕ್ತ ‘ಮಹಿಷಮಂಡಲ ಒಂದು ಅಧ್ಯಯನ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಈ ದೇಶದ ದೊಡ್ಡ ಸುಳ್ಳಿನ ಕಾರ್ಖಾನೆ ನಾಗಪುರದ ಕಾರ್ಯಾಲಯವಾಗಿದ್ದು, ಇತಿಹಾಸವನ್ನು ಮುಚ್ಚಿಹಾಕಲು ಅದು ಸೃಷ್ಟಿಸಿದ ವಿಚಾರಗಳ ಪರಿಣಾಮ ಮೊದಲು ತಟ್ಟಿದ್ದು ದಲಿತರನ್ನು. ಇದಕ್ಕೆ ಪ್ರತಿರೋಧವಾಗಿಯೇ ಅಂಬೇಡ್ಕರ್ ನಾಗಪುರದಲ್ಲಿ ಬುದ್ಧ ಧಮ್ಮವನ್ನು ಅಪ್ಪಿಕೊಂಡರು’ ಎಂದರು.
‘ಮಾತೆತ್ತಿದ್ದರೆ ಧರ್ಮಸ್ಥಳ ನಮ್ಮದು, ಬಾಲಾಜಿ ನಮ್ಮವ, ಅಯ್ಯಪ್ಪ ನಮ್ಮವ ಎಂದು ಹೇಳುತ್ತಾರೆ. ಅದು ಸತ್ಯ ಕೂಡ. ಈ ದೇಶದಲ್ಲಿ ಎಲ್ಲಿ ಭೂಮಿ ಅಗೆದರೂ ಸಿಗುವುದು ಬುದ್ಧನೇ, ಧಮ್ಮಚಕ್ರವೇ. ಆದರೆ, ಇಂದು ನಮ್ಮ ಆರಾಧನಾ ಸ್ಥಳಗಳು ನಮ್ಮವಾಗಿ ಉಳಿದಿಲ್ಲ. ಗಣೇಶನ ಮೂರ್ತಿ ಕೂರಿಸಿ ಪೂಜೆ ಮಾಡುತ್ತಿರುವ ನಮ್ಮವರು ಅಂಬೇಡ್ಕರ್ ಅವರು ಕೈಗಿತ್ತ ಪೆನ್ ಅನ್ನು ಮರೆತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಚಾರಿತ್ರಿಕ ಹಿನ್ನೆಲೆಯ ಮಹಿಷಾಸುರನ ಬಿಟ್ಟು ದಸರಾ ಮಾಡಲು ಸಾಧ್ಯವೇ? ಈ ಮುಚ್ಚಿಟ್ಟ ಇತಿಹಾಸ, ಸಾಹಿತ್ಯವನ್ನು ಹೊರತರಬೇಕು. ಮನುಷ್ಯನ ತಲೆಗೆ ಆನೆಯನ್ನು ಜೋಡಿಸಿದರೆ ಗಣಪ ಎನ್ನುತ್ತೀರಾ, ಹಂದಿ ತಲೆಯನ್ನು ಜೋಡಿಸಿದರೆ ವರಹಾ ಎಂದು ನಂಬುತ್ತೀರಾ. ಆದರೆ, ಬುದ್ಧ ಧಮ್ಮದ ತ್ರಿಪಿಟಕಗಳಲ್ಲಿ ಮಹಿಷ ಪದದ ಉಲ್ಲೇಖವಿದೆ ಎಂದು ಹೇಳಿದರೂ ಪ್ರಶ್ನಿಸುತ್ತೀರಾ. ಸುಳ್ಳಿನ ಪರದೆಯಿಂದ ಹೊರಬನ್ನಿ. ಮನುವಾದಿಗಳ ಹಬ್ಬವನ್ನು ಮಾಡುತ್ತಾ ಅಂಬೇಡ್ಕರ್‌ವಾದಿಯಾಗಲು ಸಾಧ್ಯವಿಲ್ಲ’ ಎಂದರು.
‘ಸಂತಸದ ಸಂಗತಿಯೆಂದರೆ ದೇಶದ ಒಡಿಶಾ, ಬಿಹಾರ, ರಾಜಸ್ಥಾನಗಳಲ್ಲೂ ಮಹಿಷನ ಆಚರಣೆ ನಡೆದಿದೆ. ವಿಶ್ವವಿದ್ಯಾಲಯದಲ್ಲಿ ಮಹಿಷ ಪಡೆ ರಚನೆಗೂ ಯುವಜನರು ಮುಂದಾಗುತ್ತಿದ್ದಾರೆ. ಇಲ್ಲಿ, ಮಹಿಷ ದಸರಾ ಬದಲು ಮಹಿಷ ಮಂಡಲೋತ್ಸವ ಎಂದು ಹೆಸರಿಡಲು ಕಾರಣ ಸಾಂಸ್ಕೃತಿಕ ನಗರಿಯಲ್ಲಿ ಸಂಘರ್ಷ ಬೇಡ ಎನ್ನುವುದು. ಇದು ಬುದ್ಧನ ಮಧ್ಯಮ ಮಾರ್ಗವೂ ಹೌದು. ಎಲ್ಲರೂ ಸತ್ಯವನ್ನು ಅನುಸರಿಸಿ ಪ್ರಬುದ್ಧ ಭಾರತವನ್ನು ನಿರ್ಮಿಸಿ’ ಎಂದು ಕೋರಿದರು.
ಚಿಂತಕ ಕೃಷ್ಣಮೂರ್ತಿ ಚಮರಂ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಅಧ್ಯಾಪಕ ಸಿ.ಜಿ.ಲಕ್ಷ್ಮೀಪತಿ ಮಾತನಾಡಿ, ‘ಬ್ರಾಹ್ಮಣವಾದ ಹಾಗೂ ವೈದಿಕ ಮನಸ್ಥಿತಿಯಿಂದ ನಾವು ದೂರ ಸರಿಯದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮ ಉಳಿವಿಗೆ ನಮ್ಮ ಸಂಸ್ಕೃತಿಯ ಬೇರನ್ನು ಅರಿತುಕೊಳ್ಳುವುದೇ ಮದ್ದು’ ಎಂದರು.
ಲೇಖಕ ಸಿದ್ದಸ್ವಾಮಿ ಅವರು ಮಹಿಷ ಮಂಡಲ ಇತಿಹಾಸದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್, ಚಿಂತಕರಾದ ಪ್ರೊ.ಪಿ.ವಿ.ನಂಜರಾಜ ಅರಸ್, ದಿಲೀಪ್ ನರಸಯ್ಯ ಇದ್ದರು.
ಈ ಮಣ್ಣಿನ ಸಂಸ್ಕೃತಿಯುಳ್ಳ ಮಹಿಷ ದಸರಾವನ್ನು ಸರ್ಕಾರವೇ ನಡೆಸಬೇಕು. ಬೇರೆಯವರಿಗೆ ನೋವಾಗುತ್ತದೆ ಎಂದು ಅಡ್ಡಿಪಡಿಸುವುದನ್ನು ಸಹಿಸಲಾಗದುಜಯಲಕ್ಷ್ಮಿ ಮಹಿಳಾ ಹೋರಾಟಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.