ಮೈಸೂರು: ‘ಸಾಮ್ರಾಜ್ಯಶಾಹಿ ದೇಶಗಳ ಮಾರುಕಟ್ಟೆ ದಾಹಕ್ಕಾಗಿ ಯುದ್ಧಗಳನ್ನು ನಡೆಸಲಾಗುತ್ತಿದೆ’ ಎಂದು ಎಸ್‌ಯುಸಿಐಸಿ ಪಕ್ಷದ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಕೆ.ಸೋಮಶೇಖರ್ ಆರೋಪಿಸಿದರು.
ಜಿಲ್ಲಾ ಸಮಿತಿಯಿಂದ ಇಲ್ಲಿನ ಡಿ.ಸುಬ್ಬಯ್ಯ ರಸ್ತೆಯ ಕಚೇರಿಯಲ್ಲಿ, ಕಾರ್ಮಿಕ ನಾಯಕ, ಪಕ್ಷದ ಸಂಸ್ಥಾಪಕ ಶಿವದಾಸ್ ಘೋಷ್ ಅವರ ಸ್ಮರಣ ವರ್ಷಾಚರಣೆ ಅಂಗವಾಗಿ ಭಾನುವಾರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವ ತೆತ್ತ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮೊದಲಾದ ಕ್ರಾಂತಿಕಾರಿಗಳು ಸೋವಿಯತ್ ರಷ್ಯಾದ ಮಾದರಿಯಲ್ಲಿ ಹೊಸ ಸಮಾಜವಾದಿ ಸಮಾಜವನ್ನು ಕಟ್ಟಬೇಕೆಂದು ಬಯಸಿದ್ದರು. ಆದರೆ, ಸ್ವಾತಂತ್ರ್ಯದ ಮೂಲಕ ರಾಜಕೀಯ ಅಧಿಕಾರವು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಹಿಡಿತದಿಂದ ಭಾರತೀಯ ಬಂಡವಾಳಶಾಹಿಗಳ ಕೈಗೆ ಹಸ್ತಾಂತರಗೊಂಡಿತು. ಇದರಿಂದಾಗಿಯೇ ಬಂಡವಾಳಶಾಹಿಗಳ ಲಾಭದಾಸೆಗಾಗಿ ರೈತರು– ಕಾರ್ಮಿಕರು ತೀವ್ರ ಶೋಷಣೆಗೆ ಗುರಿಯಾಗುತ್ತಿದ್ದಾರೆ’ ಎಂದು ದೂರಿದರು.
ಕಾಯ್ದೆಗಳನ್ನು ಕಿತ್ತೆಸೆಯುತ್ತಿದ್ದಾರೆ: ‘ದೇಶಕ್ಕಾಗಿ ದಿನಕ್ಕೆ 12 ಗಂಟೆ ದುಡಿಯಬೇಕು ಎಂದು ಇನ್ಫೊಸಿಸ್ ಕಂಪನಿಯ ನಾರಾಯಣಮೂರ್ತಿ ಕರೆ ನೀಡುತ್ತಾರೆ. ಆದರೆ ಇದು ದೇಶದ ಹಿತಕ್ಕಲ್ಲ. ಬದಲಿಗೆ, ಬಡವರ ಬೆವರಿನಲ್ಲಿ ಅವರ ಖಜಾನೆಯನ್ನು ತುಂಬಿಸುವ ಸಲುವಾಗಿಯೇ ಆಗಿದೆ. ಇದಕ್ಕಾಗಿಯೇ ಕಾರ್ಮಿಕರು ಜೀವತೆತ್ತು ಗಳಿಸಿಕೊಂಡ ಕಾರ್ಮಿಕ ಕಾಯ್ದೆ–ಕಾನೂನುಗಳನ್ನು ಕಿತ್ತೆಸೆಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜಾಗತಿಕ ವಲಯದಲ್ಲಿ ಇಸ್ರೇಲ್- ಪ್ಯಾಲೆಸ್ಟೀನ್, ರಷ್ಯಾ-ಉಕ್ರೇನ್, ಇರಾನ್-ಇಸ್ರೇಲ್ ಸೇರಿದಂತೆ ಅನೇಕ ಯುದ್ಧಗಳು ನಡೆಯುತ್ತಿರುವುದೇ ತೈಲ, ಖನಿಜ ಸೇರಿದಂತೆ ಸಂಪನ್ಮೂಲಗಳ, ಮಾರುಕಟ್ಟೆಯ ನಿಯಂತ್ರಣಕ್ಕೇ ಹೊರತು ದೇಶಭಕ್ತಿಯ ಪ್ರದರ್ಶನಕ್ಕಲ್ಲ. ಇದಕ್ಕಾಗಿಯೇ ಎಲ್ಲಾ ದೇಶಗಳು ಬಜೆಟ್‌ನ ಬಹುಪಾಲು ಮೊತ್ತವನ್ನು ಖರ್ಚು ಮಾಡುತ್ತಿವೆ. ಆದರೆ, ಖಾಲಿ ಹುದ್ದೆಗಳನ್ನು ತುಂಬುತ್ತಿಲ್ಲ’ ಎಂದು ದೂರಿದರು.
ಕೃಷಿಕರು ಕಂಗಾಲಾಗುತ್ತಿದ್ದಾರೆ: ‘ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸಾರಿಗೆ, ವಿದ್ಯುತ್, ವಸತಿಗೆ ವೆಚ್ಚ ಕಡಿತಗೊಳಿಸಿ, ಖಾಸಗೀಕರಣದ ಮೂಲಕ ಬಂಡವಾಳಶಾಹಿಗಳಿಗೆ ಮಾರುಕಟ್ಟೆ ಸೃಷ್ಟಿಸಲಾಗುತ್ತಿದೆ. ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರವೇ ಮುಂದೆ ನಿಂತು ರೈತರಿಂದ ಕಿತ್ತುಕೊಳ್ಳುತ್ತಿದೆ. ಇನ್ನೊಂದೆಡೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಕೃಷಿಕರು ಕಂಗಾಲಾಗುತ್ತಿದ್ದಾರೆ’ ಎಂದರು.
ಪಕ್ಷದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ.ರವಿ ಮಾತನಾಡಿ, ‘ಸಮಾಜವಾದಿ ಕ್ರಾಂತಿ ಯಶಸ್ಸಿಗೆ ಶಿವದಾಸ್ ಘೋಷ್ ಚಿಂತನೆಗಳು ಅನಿವಾರ್ಯ’ ಎಂದು ಪ್ರತಿಪಾದಿಸಿದರು.
ಪಕ್ಷದ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯೆ ಎಂ. ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಚಂದ್ರಶೇಖರ್ ಮೇಟಿ, ಜಿಲ್ಲಾ ಸಮಿತಿ ಸದಸ್ಯರಾದ ಸಂಧ್ಯಾ ಪಿ.ಎಸ್., ಸೀಮಾ ಜಿ.ಎಸ್., ಹರೀಶ್, ಸುನಿಲ್ ಪಾಲ್ಗೊಂಡಿದ್ದರು.
ವಿದ್ಯಾರ್ಥಿ–ಯುವಜನರನ್ನು ಮದ್ಯ ಮಾದಕವಸ್ತು ಆಶ್ಲೀಲ ಸಿನಿಮಾ ಕೋಮು ದ್ವೇಷಕ್ಕೆ ಬಲಿಯಾಗಿಸುವ ಷಡ್ಯಂತ್ರವನ್ನು ಸರ್ಕಾರಗಳೇ ಮಾಡುತ್ತಿವೆಕೆ.ಸೋಮಶೇಖರ್ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಎಸ್‌ಯುಸಿಐಸಿ
‘ಸರ್ಕಾರಗಳನ್ನು ಬದಲಾಯಿಸುವುದರಿಂದ ಈ ಸಮಸ್ಯೆಗಳು ಬಗೆಹರಿಯುವುದಿಲ್ಲ. ಬದಲಿಗೆ ನೈತಿಕ ಮೌಲ್ಯಗಳ ಅಧಃಪತನದ ವ್ಯಕ್ತಿವಾದ ಸ್ವಾರ್ಥ ಲಾಭಕೋರತನದ ಸಮ್ಮಿಶ್ರಣವಾದ ಈ ಕೊಳೆತ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆದು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಉನ್ನತ ನೀತಿ– ನೈತಿಕತೆಯ ಆಧಾರದಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಬೇಕು’ ಎಂದು ಸೋಮಶೇಖರ್ ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.