ADVERTISEMENT

ಹನಗೋಡು ಹೋಬಳಿಯಲ್ಲಿ ಶುದ್ಧ ನೀರಿಗೆ ಬರ

ಬಳಕೆಗೆ ಬಾರದ ಶುದ್ಧ ಕುಡಿಯುವ ನೀರಿನ ಘಟಕಗಳು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 9:00 IST
Last Updated 5 ಸೆಪ್ಟೆಂಬರ್ 2020, 9:00 IST
ದುರಸ್ತಿ ಕಾಣದೆ ಹನಗೋಡು ಸಾರ್ವಜನಿಕ ಆಸ್ಪತ್ರೆ ಬಳಿಯಿರುವ ಶುದ್ಧ ನೀರಿನ ಘಟಕವು ಪಾಳು ಬಿದ್ದಿರುವುದು
ದುರಸ್ತಿ ಕಾಣದೆ ಹನಗೋಡು ಸಾರ್ವಜನಿಕ ಆಸ್ಪತ್ರೆ ಬಳಿಯಿರುವ ಶುದ್ಧ ನೀರಿನ ಘಟಕವು ಪಾಳು ಬಿದ್ದಿರುವುದು   

ಹನಗೋಡು: ಹೋಬಳಿಯಾದ್ಯಂತ ಶುದ್ಧ ನೀರಿನ ಘಟಕಗಳು ಅವ್ಯವಸ್ಥೆಯಿಂದ ಕೂಡಿದೆ.

ಹನಗೋಡು ಹೋಬಳಿ ಕೇಂದ್ರದಲ್ಲಿ 2 ಶುದ್ಧ ನೀರಿನ ಘಟಕಗಳು ಇದ್ದು, ಒಂದು ಘಟಕವು ಒಂದು ವರ್ಷದಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದೆ, ದುರಸ್ತಿ ಗೊಳ್ಳದೆ ಪಾಳು ಬಿದ್ದಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಮಾಡಿಸಲು ಮುಂದಾಗದಿರುವುದು ಗ್ರಾಮಸ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೋಬಳಿಯ ಅಬ್ಬೂರು, ಸಿಂಡೇನಹಳ್ಳಿ, ನೆರಳಕುಪ್ಪೆ ಹೊನ್ನೇನಹಳ್ಳಿ, ಬೀರನಹಳ್ಳಿ ಕಳಬೂಚನಹಳ್ಳಿ, ಕಚುವಿನಹಳ್ಳಿ, ಉಮ್ಮತ್ತೂರು, ವಡ್ಡಂಬಾಳು ಗ್ರಾಮಗಳು ಮತ್ತು ಆದಿವಾಸಿ ಜನಾಂಗ ವಾಸಿಸುವಂತಹ ಶೆಟ್ಟಳ್ಳಿ ಹಾಡಿ ಮತ್ತು ವೀರನಹೊಸಳ್ಳಿ ಹಾಡಿಗಳಲ್ಲಿ ಸಹ ಶುದ್ಧನೀರಿನ ಘಟಕಗಳು ದುರಸ್ತಿಯಾಗಿಲ್ಲ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು
ದುರಸ್ತಿಗೊಳಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಮುದನೂರು ಸುಭಾಷ್ ಮನವಿ ಮಾಡಿದ್ದಾರೆ.

ADVERTISEMENT

ಹನಗೋಡು ಗ್ರಾಮ ಸೇರಿದಂತೆ ಹೋಬಳಿಯ ಕೆಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಚಾಲ್ತಿಯಲ್ಲಿ ಇದ್ದು ಸರ್ಕಾರದ ನಿಯಮದ ಪ್ರಕಾರ 20 ಲೀಟರ್ ನೀರಿಗೆ ₹ 2 ಕ್ಕಿಂತ ಹೆಚ್ಚಿಗೆ ಹಣ ತೆಗೆದುಕೊಳ್ಳುವಂತಿಲ್ಲ. ಆದರೆ, ನೀರಿನ ಘಟಕಗಳ ನಿರ್ವಹಣೆ ಮಾಡುವವರು 10 ಲೀಟರ್ ನೀರಿಗೆ ₹ 5 ದರವನ್ನು ನಿಗದಿ ಮಾಡಿದ್ದಾರೆ. ₹ 5ರ ನಾಣ್ಯ ಹಾಕಿದರೆ ಮಾತ್ರವೇ ನೀರು ಬರುವಂತೆ ಕಾಯಿನ್ ಬಾಕ್ಸ್ ಅಳವಡಿಸಿ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಎಸ್ಸಿಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಆರೋಪಿಸಿದ್ದಾರೆ.

ಶುದ್ಧನೀರಿನ ಘಟಕಗಳೆ ಇಲ್ಲದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು

ಹನಗೋಡು ಹೋಬಳಿಯ ಕಿರಂಗೂರು ಮತ್ತು ಕಡೆ ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಹ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲದಿರುವುದರಿಂದ ಪಂಚಾಯಿತಿ ವ್ಯಾಪ್ತಿಯ ಜನರು ಸುಮಾರು ಐದರಿಂದ ಹತ್ತು ಕಿಲೋಮೀಟರ್ ದೂರ ಹೋಗಿ ಶುದ್ಧ ನೀರನ್ನು ತರುತ್ತೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.