ADVERTISEMENT

ಮಳೆಯಲ್ಲಿ ನಿಂತ ಆದಿವಾಸಿಗಳು!

ಎಚ್‌.ಡಿ.ಕೋಟೆ: ಆರ್ಥಿಕ ನೆರವು, ಮನೆ ನೀಡುವಂತೆ ಸಂತ್ರಸ್ತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 8:26 IST
Last Updated 1 ಆಗಸ್ಟ್ 2020, 8:26 IST
ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಸಮೀಪದಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಬೇಡಿ ಬಂದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೊರಹಾಕಿರುವುದು
ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಸಮೀಪದಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಬೇಡಿ ಬಂದವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೊರಹಾಕಿರುವುದು   

ಎಚ್.ಡಿ.ಕೋಟೆ: ತಾಲ್ಲೂಕಿನ ಭೀಮನಹಳ್ಳಿ ಸಮೀಪದ ಮಾಸ್ತಿಗುಡಿ ಪುನರ್ವಸತಿ ಕೇಂದ್ರದ ಬಳಿಯ ಅಂಗನವಾಡಿ ಕೇಂದ್ರ ಮತ್ತು ಆಶ್ರಯ ಮನೆಗಳಲ್ಲಿ ನಾಲ್ಕು ದಿನಗಳಿಂದ ವಾಸವಿದ್ದ 12 ಆದಿವಾಸಿ ಕುಟುಂಬವನ್ನು ಹೊರ ಹಾಕಲಾಗಿದೆ. ಇದರಿಂದ ಇವರು ಶುಕ್ರವಾರ ದಿನವಿಡಿ ಬಯಲಿನಲ್ಲೇ ಕಾಲ ಕಳೆದರು.

‘ನಮಗೆ ಬೇರೆಲ್ಲೂ ಜಾಗವಿಲ್ಲ. 8 ವರ್ಷಗಳ ಹಿಂದೆ ಸುಂಕದಕಟ್ಟೆ ಅರಣ್ಯದಿಂದ ನಮ್ಮನ್ನು ಹೊರದಬ್ಬಿದ ಮೇಲೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರ, ಮನೆ ನೀಡಿಲ್ಲ. ಇಲ್ಲಿವರೆಗೂ ಅಲೆಮಾರಿಗಳಾಗಿ ಬದುಕು ಸವೆಸಿದ್ದು, ಕೋವಿಡ್‌ ಕಾರಣದಿಂದ ಇಲ್ಲಿಗೆ ವಾಪಸ್‌ ಬಂದಿದ್ದೇವೆ. ನಮಗೆ ನ್ಯಾಯಯುತವಾಗಿ ಆಶ್ರಯ ಮನೆಯನ್ನು ಕೊಡಿ’ ಎಂದು ಸಂತ್ರಸ್ತರ ಪೈಕಿ ನೀಲಮ್ಮ ಎಂಬುವವರು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವೀರನಹೊಸಹಳ್ಳಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ರವೀಂದ್ರ, ‘ಮೇಲಧಿಕಾರಿಗಳ ಆದೇಶದಂತೆ ಖಾಲಿ ಮಾಡಿಸಲಾಗಿದೆ. ಈಗಾಗಲೇ ಇವರನ್ನು ಖಾಲಿ ಮಾಡಿಸುವಂತೆ ಪೊಲೀಸ್‌ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ನಾಗರಹೊಳೆಯ ಹುಲಿ ರಕ್ಷಿತಾರಣ್ಯದ ಡಿಸಿಎಫ್ ಮಹೇಶ್‌ಕುಮಾರ್ ಪ್ರತಿಕ್ರಿಯಿಸಿ ‘ಅಂಗನಾಡಿ ಕೇಂದ್ರ, ಮನೆಗಳಿಗೆ ಬೀಗ ಹಾಕಲಾಗಿದ್ದು ನಾವು ಯಾರನ್ನು ಹೊರ ಕಳುಹಿಸಿಲ್ಲ, ಒಳಗೂ ಸೇರಿಸಿಲ್ಲ. ಹೊರಗೆ ಮಳೆ ಇದೆ ಎಂದರೇ ಅದಕ್ಕೆ ನಾವು ಜವಾಬ್ದಾರರಲ್ಲ. ಕಾನೂನು ವ್ಯಾಪ್ತಿಯಲ್ಲಿ ಮಾತ್ರ ಕ್ರಮ ಕೈಗೊಳ್ಳಲು ಅವಕಾಶವಿದ್ದು, ಬಂದವರಿಗೆಲ್ಲ ಆಶ್ರಯ ಕಲ್ಪಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪ್ರಕರಣ ಕುರಿತಂತೆ ತಹಶೀಲ್ದಾರ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.