ADVERTISEMENT

ಹದವಾದ ಮಳೆ: ಬಿತ್ತನೆಗೆ ಸಕಾಲ

9,710 ಕ್ವಿಂಟಲ್‌ನಷ್ಟು ಬಿತ್ತನೆ ಬೀಜ, 34,610 ಮೆಟ್ರಿಕ್‌ ಟನ್‌ನಷ್ಟು ರಸಗೊಬ್ಬರ ಲಭ್ಯ

ಕೆ.ಎಸ್.ಗಿರೀಶ್
Published 16 ಏಪ್ರಿಲ್ 2021, 19:30 IST
Last Updated 16 ಏಪ್ರಿಲ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮೈಸೂರು: ಜಿಲ್ಲೆಯಲ್ಲಿ ಯುಗಾದಿಯ ಮರುದಿನ ಹಲವೆಡೆ ಸುರಿದ ಧಾರಾಕಾರ ಮಳೆಯು ಮುಂಗಾರು ಪೂರ್ವ ಬಿತ್ತನೆಗೆ ಸಹಕಾರಿ ಎನಿಸಿದೆ. ಬಿರುಬಿಸಿಲಿನ ವಾತಾವರಣವನ್ನು ತಂಪಾಗಿಸಿರುವ ಮಳೆಯಿಂದ ಬಿತ್ತನೆಗೂ ಕಾಲಕೂಡಿ ಬಂದಂತಾಗಿದೆ.

ಈಗಾಗಲೇ ಹಲವೆಡೆ ಭೂಮಿಯನ್ನು ಹಸನು ಮಾಡಿಕೊಂಡಿರುವ ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಜತೆಗೆ, ರಸಗೊಬ್ಬರವನ್ನೂ ಖರೀದಿಸುತ್ತಿದ್ದಾರೆ.

ಸದ್ಯ, ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕಾಗಲಿ, ರಸಗೊಬ್ಬರಕ್ಕಾಗಲಿ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿರುವ 33 ರೈತ ಸಂಪರ್ಕ ಕೇಂದ್ರಗಳಲ್ಲಿ ಆಯಾ ಭಾಗದ ರೈತರಿಗೆ ಬೇಕಾಗುವಂತಹ ಬಿತ್ತನೆ ಬೀಜಗಳ ದಾಸ್ತಾನು ಸಾಕಷ್ಟಿದೆ. ಮಣ್ಣು ಪರೀಕ್ಷೆಯ ವರದಿಯ ಆಧಾರದ ಮೇಲೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಸೂಕ್ತವಾದ ತಳಿಯ ಬೀಜಗಳನ್ನು ಬಿತ್ತನೆ ಮಾಡಲು ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ ಈ ಅವಧಿಯಲ್ಲಿ ಹೆಸರುಕಾಳು, ಉದ್ದು, ಅಲಸಂದೆ, ಹೈಬ್ರಿಡ್ ಜೋಳಗಳನ್ನು ಬಿತ್ತನೆ ಮಾಡಲಾಗುತ್ತದೆ. ಇದಕ್ಕೆ ಬೇಕಾಗುವಷ್ಟು ದಾಸ್ತಾನು ಇದೆ ಎಂದು ಅವರು ಹೇಳುತ್ತಾರೆ.

9,710 ಕ್ವಿಂಟಲ್‌ ಲಭ್ಯ

ಜಿಲ್ಲೆಯಲ್ಲಿ ಸದ್ಯ ಲಭ್ಯವಿರುವ 9,710 ಬಿತ್ತನೆ ಬೀಜಗಳ ಪೈಕಿ ನೆಲಗಡಲೆಯೇ ಅತ್ಯಧಿಕ ಪ್ರಮಾಣದಲ್ಲಿ ಇದೆ. 4 ಸಾವಿರ ಕ್ವಿಂಟಲ್‌ನಷ್ಟು ನೆಲಗಡಲೆ ಇದ್ದರೆ, ನಂತರದ ಸ್ಥಾನದಲ್ಲಿ ಅಲಸಂದೆ 2,200 ಕ್ವಿಂಟಲ್‌ನಷ್ಟಿದೆ. ಇದರ ಜತೆಗೆ, ರಾಗಿ, ಉದ್ದು, ಹೆಸರುಕಾಳು, ಸೂರ್ಯಕಾಂತಿ, ಹೈಬ್ರಿಡ್ ಜೋಳ, ತೊಗರಿ ಬಿತ್ತನೆಬೀಜಗಳೂ ಸಾಕಾಗುಷ್ಟು ಲಭ್ಯವಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ರಸಗೊಬ್ಬರಕ್ಕಿಲ್ಲ ಕೊರತೆ

ಜಿಲ್ಲೆಯಲ್ಲಿ ರಸಗೊಬ್ಬರಗಳಿಗೂ ಯಾವುದೇ ಕೊರತೆ ಇಲ್ಲ. 34,610 ಮೆಟ್ರಿಕ್‌ ಟನ್‌ನಷ್ಟು ವಿವಿಧ ಬಗೆಯ ರಸಗೊಬ್ಬರಗಳ ದಾಸ್ತಾನು ಇದೆ. ಎನ್‌ಪಿಕೆ ಕಾಂಪ್ಲೆಕ್ಸ್‌ ಪ್ರಮಾಣವೇ 18,310ರಷ್ಟಿದೆ. ಇನ್ನುಳಿದಂತೆ, ಎಲ್ಲ ರಸಗೊಬ್ಬರಗಳೂ ಲಭ್ಯವಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.