ಮೈಸೂರಿನ ಕೆಎಸ್‌ಒಯು ಕ್ಯಾಂಪಸ್‌ನಲ್ಲಿ ಆರಂಭಿಸಿರುವ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಚರ್ ಸ್ಕಿಲ್ಸ್’ ಕೇಂದ್ರವನ್ನು ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಲ್ಲಿನ ಕೌಶಲ ತರಬೇತಿಯ ಕ್ರಮವನ್ನು ವೀಕ್ಷಿಸಿದರು.
-ಪ್ರಜಾವಾಣಿ ಚಿತ್ರ
ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆರಂಭಗೊಂಡಿರುವ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಚರ್ ಸ್ಕಿಲ್ಸ್’ (ಭಾರತೀಯ ಭವಿಷ್ಯದ ಕೌಶಲಗಳ ಸಂಸ್ಥೆ) ಉದ್ಘಾಟನೆಗೊಂಡಿತು.
ಕೆಎಸ್‌ಒಯು, ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಹಾಗೂ ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯ ಸಹಯೋಗದಲ್ಲಿ ಪ್ರಾರಂಭಗೊಂಡಿರುವ ಈ ಕೇಂದ್ರವು ಗ್ರಾಮೀಣ ಯುವಜನರಿಗೆ ಭವಿಷ್ಯದಲ್ಲಿ ಬೇಡಿಕೆ ಇರುವ ಕೌಶಲಗಳ ತರಬೇತಿ ನೀಡುವ ಆಶಯ ಹೊಂದಿದೆ.
‘ಕೃತಕ ಬುದ್ಧಿಮತ್ತೆ(ಎಐ)ಯಂತಹ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವ ಈ ಕಾಲದ ಅಗತ್ಯಗಳಿಗೆ ತಕ್ಕಂತೆ, ಯುವಜನರಿಗೆ ಕೈಗಾರಿಕಾ ಕೇಂದ್ರಿತ ಕೌಶಲವನ್ನು ಒದಗಿಸುವ ಕೆಲಸವನ್ನು ಕೇಂದ್ರವು ಮಾಡಲಿದೆ. ಹಲವು ಬಗೆಯ ತರಬೇತಿಗಳು ಒಂದೇ ವೇದಿಕೆಯಲ್ಲಿ ಸಿಗಲಿದೆ. 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೌಶಲ ಶಿಕ್ಷಣ ಒದಗಿಸುವ ಗುರಿ ಇದೆ’ ಎಂದು ಎಥ್ನೋಟೆಕ್ ಗ್ರೂಪ್‌ನ ಸಿಇಒ ಕಿರಣ್ ರಾಜಣ್ಣ ತಿಳಿಸಿದರು.
ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮಾತನಾಡಿ, ‘ದೇಶವು ಶೇ 65ರಷ್ಟು ಯುವಜನರನ್ನು ಹೊಂದಿದ್ದು, 2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣದ ಗುರಿ ತಲುಪಲು ಇವರಿಗೆಲ್ಲ ಉತ್ತಮ ಕೌಶಲ ತರಬೇತಿ ನೀಡುವ ಅಗತ್ಯವಿದೆ. ಈ ಆಶಯಕ್ಕೆ ಪೂರಕವಾಗಿ ಈ ಕೇಂದ್ರವು ಕಾರ್ಯನಿರ್ವಹಿಸಲಿ’ ಎಂದು ಆಶಿಸಿದರು.
‘ನಾನು ರಾಜಕಾರಣಕ್ಕೆ ಬರುವ ಮುನ್ನ ಬಿರ್ಲಾ ಕಂಪನಿಯಲ್ಲಿ ಕಾರ್ಮಿಕನಾಗಿದ್ದೆ. ಫಿಲ್ಟರ್, ವೆಲ್ಡಿಂಗ್ ಸೇರಿದಂತೆ ಹಲವು ತಳಮಟ್ಟದ ಕೆಲಸಗಳನ್ನು ನಿರ್ವಹಿಸುವ ಮೂಲಕ ನನ್ನ ಕೌಶಲ ಹೆಚ್ಚಿಸಿಕೊಂಡೆ. ಇದು ಮುಂದೆ ಉಪಯೋಗಕ್ಕೆ ಬಂದಿತು’ ಎಂದು ನೆನೆದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಬಿಜಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ. ನಾಗರಾಜ, ಕೆಎಸ್‌ಒಯು ಕುಲಪತಿ ಪ್ರೊ.ವಿ. ಶರಣಪ್ಪ ಹಲಸೆ, ಕುಲಸಚಿವ ಎಸ್.ಕೆ. ನವೀನ್‌ಕುಮಾರ್ ಪಾಲ್ಗೊಂಡಿದ್ದರು.
ಲಿಫ್ಟ್ ಒಳಗೆ ಸಿಲುಕಿದ ರಾಜ್ಯಪಾಲರು
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಶನಿವಾರ ಕೆಎಸ್‌ಒಯು ಕ್ಯಾಂಪಸ್‌ನಲ್ಲಿ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಚರ್ ಸ್ಕಿಲ್ಸ್’ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಕೆಲ ನಿಮಿಷ ಲಿಫ್ಟ್ ಒಳಗೆ ಸಿಲುಕಿದ್ದರು. ಅವರು ಕೇಂದ್ರದ ಉದ್ಘಾಟನೆಗೆಂದು ಮೊದಲ ಮಹಡಿಗೆ ತೆರಳಲು ಇತರ ಗಣ್ಯರೊಂದಿಗೆ ಲಿಫ್ಟ್‌ಗೆ ಹೋದರು. ಆರೇಳು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯದ ಲಿಫ್ಟ್‌ನಲ್ಲಿ ಒಮ್ಮೆಲೆ ಹತ್ತಕ್ಕೂ ಹೆಚ್ಚು ಮಂದಿ ಸೇರಿದ್ದರಿಂದ ಭಾರ ತಾಳಲಾರದೆ ಲಿಫ್ಟ್ ಮೇಲೇರುವ ಬದಲು ಬೇಸ್‌ಮೆಂಟ್‌ಗೆ ಇಳಿಯಿತು. ಆತಂಕಗೊಂಡ ರಾಜ್ಯಪಾಲರ ಭದ್ರತಾ ಸಿಬ್ಬಂದಿ ಕೂಡಲೇ ಬೇಸ್‌ಮೆಂಟ್‌ಗೆ ತೆರಳಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರಾದರೂ ಬಾಗಿಲು ತೆರೆದುಕೊಳ್ಳಲಿಲ್ಲ. ಅಲ್ಲಿನ ತಾಂತ್ರಿಕ ಸಿಬ್ಬಂದಿ ಕೂಡಲೇ ಎಚ್ಚೆತ್ತು ಕೆಲವು ನಿಮಿಷಗಳಲ್ಲಿ ಲಿಫ್ಟ್ ಸರಿಪಡಿಸಿದರು. ಬೇಸ್‌ಮೆಂಟ್‌ನಲ್ಲಿ ಲಿಫ್ಟ್‌ನಿಂದ ಹೊರಬಂದ ರಾಜ್ಯಪಾಲರು ಮೆಟ್ಟಿಲು ಏರಿ ಮೊದಲ ಮಹಡಿಗೆ ತೆರಳಿದರು. ಉದ್ಘಾಟನೆ ಮುಗಿಸಿ ಅದೇ ಲಿಫ್ಟ್‌ನಲ್ಲಿ ಕೆಳಗಿಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.