ಕಳೆದ 5 ತಿಂಗಳಲ್ಲಿ ₹1.69 ಕೋಟಿ ಪಾವತಿ ಪ್ರಚಾರ
ಅರಿವು ಮೂಡಿಸಬೇಕು
ಸಲಹೆ ಚಿಲ್ಲರೆ ಸಮಸ್ಯೆಗೆ ಕೊಂಚ ಪರಿಹಾರ
ಮೈಸೂರು: ‘ಕಂಡಕ್ಟರ್ರೇ ಟಿಕೇಟ್‌ಗೆ ಮೊಬೈಲ್ ಪೇಮೇಂಟ್ ಮಾಡಬಹುದಾ’, ‘ಸಾರ್.. ಚಿಲ್ಲರೆ ಇಲ್ಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡ್ಬಿಡಿ..’ ಇತ್ತೀಚಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನೊಳಗೆ ಕೇಳಿಬರುವ ಮಾತುಗಳಿವು. ಬಸ್ ಟಿಕೆಟ್‌ಗಾಗಿ ಜನರು ಡಿಜಿಟಲ್ ಪಾವತಿಯ ಮೊರೆ ಹೋಗುತ್ತಿದ್ದು, ದಿನದಿಂದ ದಿನಕ್ಕೆ ಈ ಸಂಖ್ಯೆಯೂ ಹೆಚ್ಚುತ್ತಿದೆ.
2024ರ ನವೆಂಬರ್‌ನಲ್ಲಿ ಕೆಎಸ್‌ಆರ್‌ಟಿಸಿಯು ಯುಪಿಐ ಪಾವತಿಗೆ ಅವಕಾಶ ನೀಡಿದ್ದು, ಆ ತಿಂಗಳು ನಗರ ವಿಭಾಗದ ಒಟ್ಟು ಪಾವತಿಯಲ್ಲಿ ಶೇ 1ಕ್ಕೂ ಕಡಿಮೆಯಿದ್ದ ಬಳಕೆ ಪ್ರಮಾಣವು ಇಂದು ಶೇ 10ಕ್ಕೆ ಏರಿದೆ.
ಯುಪಿಐ ಬಳಕೆಗೆ ಮುಂದಾಗುವ ಪ್ರಯಾಣಿಕರು ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿರ್ವಾಹಕರೂ ಉತ್ಸಾಹದಿಂದ ಸ್ಪಂದಿಸುತ್ತಿದ್ದಾರೆ. ನಗರ ಮತ್ತು ಗ್ರಾಮಾಂತರ ವಿಭಾಗಗಳಲ್ಲಿ ದಿನವೂ ಲಕ್ಷಾಂತರ ರೂಪಾಯಿ ವಹಿವಾಟು ಡಿಜಿಟಲ್ ಪೇ ಮೂಲಕ ನಡೆಯುತ್ತಿದ್ದು, ಕಳೆದ 5 ತಿಂಗಳಲ್ಲಿ ₹1.69 ಕೋಟಿ ಪಾವತಿಯಾಗಿದೆ.
ಮೊದಲ ಬಾರಿಗೆ ಡಿಜಿಟಲ್ ಮಷೀನ್ ಬಳಸಿದಾಗ ಕೆಲ ತಾಂತ್ರಿಕ ದೋಷಗಳಿದ್ದವು. ಇದರಿಂದ ಸಿಬ್ಬಂದಿಯೂ ಬೇಸರ ವ್ಯಕ್ತಪಡಿಸುತ್ತಿದ್ದರು. ಇಂದು ಬಹುತೇಕ ಸುಧಾರಣೆ ಕಂಡಿದ್ದು, ಸಿಬ್ಬಂದಿ ಹಾಗೂ ಗ್ರಾಹಕರು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ.
ಚಿಲ್ಲರೆ ಸಮಸ್ಯೆ ದೂರ: ಡಿಜಿಟಲ್ ಪಾವತಿಯು ಟಿಕೆಟ್ ಖರೀದಿ ವೇಳೆ ಉಂಟಾಗುವ ಚಿಲ್ಲರೆ ಸಮಸ್ಯೆಗೆ ಭಾಗಶಃ ಪರಿಹಾರ ನೀಡಿದೆ. ಟಿಕೆಟ್ ಹಿಂದೆ ಬರೆದ ಚಿಲ್ಲರೆ ಹಣ ಪಡೆಯಲು ಮರೆಯುವುದು, ಹತ್ತಿಪ್ಪತ್ತು ರೂಪಾಯಿ ಟಿಕೆಟ್‌ಗೆ ಐನೂರರ ನೋಟು ನೀಡುವುದು, ಇಬ್ಬರು-ಮೂವರು ಪ್ರಯಾಣಿಕರನ್ನು ಸೇರಿಸಿ ಚಿಲ್ಲರೆ ಕೊಡುವುದು. ಬೇರೆಡೆ ಚಿಲ್ಲರೆ ತನ್ನಿ ಎನ್ನುವುದು ತಪ್ಪಿದೆ. ಈ ನಡುವೆ, ಬಹುತೇಕರು ಡಿಜಿಟಲ್ ಪಾವತಿ ಮಾಡಿ ಕೆಲವರು ನಗದು ನೀಡಲು ಬರುವುದು ಸವಾಲಾಗುತ್ತಿದ್ದು, ಗ್ರಾಹಕರು ಆದಷ್ಟು ಚಿಲ್ಲರೆಯನ್ನು ತಮ್ಮಲ್ಲಿ ಇರಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ನಿರ್ವಾಹಕರು.
ಪ್ರಚಾರ ಬೇಕು: ‘ಡಿಜಿಟಲ್ ಪಾವತಿಯ ಲಭ್ಯತೆ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯವಿದೆ. ಕೆಲ ನಿರ್ವಾಹಕರು ಡಿಜಿಟಲ್ ಪಾವತಿ ಸೌಲಭ್ಯ ಇರುವ ಬಗ್ಗೆ ಗ್ರಾಹಕರಿಗೆ ತಿಳಿ ಹೇಳುತ್ತಿಲ್ಲ. ಕೆಲ ಬಸ್‌ಗಳಲ್ಲಿ ಅಂಟಿಸಲಾದ ಕ್ಯೂಆರ್ ಕೋಡ್‌ಗಳನ್ನು ಕೀಳಲಾಗಿರುತ್ತದೆ. ನೆಟ್‌ವರ್ಕ್ ಸಮಸ್ಯೆ ಎಂದು ಟಿಕೆಟ್ ನೀಡಲು ನಿರಾಕರಿಸುವುದೂ ಇದೆ. ನೆಟ್‌ವರ್ಕ್ ಸುಧಾರಣೆಯ ಅಗತ್ಯವಿದೆ’ ಎಂದು ಪ್ರಯಾಣಿಕ ರಮೇಶ್ ತಿಳಿಸಿದರು.
ಒಂದು ದಿನದಲ್ಲಿ ಹಣ ವಾಪಾಸ್: ‘ನೆಟ್‌ವರ್ಕ್, ಸರ್ವರ್ ಡೌನ್ ಸಮಸ್ಯೆಯಿಂದ ಟಿಕೆಟ್ ಮುದ್ರಣವಾಗದ ಸಮಸ್ಯೆ ಕೆಲವೆಡೆ ಕಂಡುಬರುವುದು ಸಾಮಾನ್ಯ, ಈ ಬಗ್ಗೆ ಪ್ರಯಾಣಿಕರು ಗಾಬರಿಯಾಗುವ ಅಗತ್ಯವಿಲ್ಲ. ಹಣವೂ ಅದೇ ಮೊಬೈಲ್ ಸಂಖ್ಯೆಗೆ ವಾಪಾಸ್ ಆಗುತ್ತದೆ. ಮೊದಲೆಲ್ಲಾ 3 ದಿನಗಳಾಗುತ್ತಿತ್ತು, ಈಗ ಒಂದೇ ದಿನದಲ್ಲಿ ಹಣ ಮರು ಪಾವತಿಯಾಗುವಂತೆ ಕ್ರಮಕೈಗೊಂಡಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ನಿಯಂತ್ರಣಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜನ ಸಂದಣಿಯಲ್ಲಿ ಹಣದ ಸುರಕ್ಷತೆ ಆನ್‌ಲೈನ್ ವ್ಯವಸ್ಥೆಯ ಸದ್ಬಳಕೆಗೆ ಯುಪಿಐ ಮೂಲಕ ಟಿಕೆಟ್ ಪಾವತಿಯೂ ಸಹಕಾರಿಎಚ್.ಟಿ.ವೀರೇಶ್, ಕೆಎಸ್ಆರ್‌ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ
ಗ್ರಾಮಾಂತರದಲ್ಲೂ ಹೆಚ್ಚಳ
‘ಸಾಮಾನ್ಯ ಬಸ್‌ಗಳಲ್ಲಿ ಪ್ರತಿದಿನವೂ ಶೇ 7ರಿಂದ 8ರಷ್ಟು ಆದಾಯವೂ ಯುಪಿಐ ಮೂಲಕ ಬರುತ್ತಿದೆ. ವೋಲ್ವೊ ಮುಂತಾದ ಐಷಾರಾಮಿ ಬಸ್‌ಗಳಲ್ಲಿ ಈ ಪ್ರಮಾಣ ಶೇ 30ರಷ್ಟಿದೆ’ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು. ‘ತಡೆರಹಿತ ಬಸ್‌ಗಳಲ್ಲಿ ಶೇ10ಕ್ಕೂ ಅಧಿಕ ಪಾವತಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ಡಿಜಿಟಲ್ ವಹಿವಾಟು ಹೆಚ್ಚುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.