ADVERTISEMENT

ಕೆ.ಆರ್‌.ಆಸ್ಪತ್ರೆಗೆ ಭದ್ರತಾ ಸಿಬ್ಬಂದಿ ಹೆಚ್ಚಳಕ್ಕೆ ಕ್ರಮ

ದುಷ್ಕರ್ಮಿಯಿಂದ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 15:59 IST
Last Updated 10 ಜುಲೈ 2021, 15:59 IST
ಎಲ್‌.ನಾಗೇಂದ್ರ
ಎಲ್‌.ನಾಗೇಂದ್ರ   

ಮೈಸೂರು: ಬುದ್ಧಿಮಾಂದ್ಯ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಎಲ್‌.ನಾಗೇಂದ್ರ ಅವರು ಕೆ.ಆರ್‌.ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಪ್ರಕರಣದ ಕುರಿತು ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ‘ದುಷ್ಕರ್ಮಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಜೋರಾಗಿ ಕೂಗಿದ್ದಾರೆ. ಈ ವೇಳೆ ಗುಡಿಸಿಲಿನಲ್ಲಿ ಮಲಗಿದ್ದವರು ನೆರವಿಗೆ ಬಂದಿದ್ದಾರೆ. ಹೀಗಾಗಿ, ಆತ ಓಡಿ ಹೋಗಿದ್ದಾನೆ. ಆಸ್ಪತ್ರೆಯಲ್ಲಿ ಭದ್ರತಾ ವ್ಯವಸ್ಥೆ ಸ್ವಲ್ಪ ಕಡಿಮೆ ಇದೆ. ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಲು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ಗೆ ಸೂಚಿಸಲಾಗಿದೆ. ಈ ಸಂಬಂಧ ಸೋಮವಾರ ಸಭೆ ನಡೆಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೂ ತರಲಾಗುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಜಯದೇವ ಆಸ್ಪತ್ರೆಯಲ್ಲಿ ಬುದ್ಧಿಮಾಂದ್ಯರಿಗಾಗಿ ವಾರ್ಡ್‌ ತೆರೆಯಲಾಗಿತ್ತು. ಇಲ್ಲಿ 8 ಮಂದಿ ಇದ್ದರು. ಜಯದೇವ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ ಬಳಿಕ ಅಲ್ಲಿದ್ದ ಬುದ್ಧಿಮಾಂದ್ಯರನ್ನು ಹಳೇ ವಿಶೇಷ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಈ ಮಹಿಳೆ 4 ವರ್ಷಗಳಿಂದ ಇಲ್ಲಿದ್ದಾರೆ.ಜುಲೈ 3ರಂದು ರಾತ್ರಿ ವ್ಯಕ್ತಿಯೊಬ್ಬ ಕಿಟಕಿ ಮುರಿದು ಒಳನುಗ್ಗಿದ್ದಾನೆ. ಆದರೆ, ಅತ್ಯಾಚಾರ ನಡೆದಿದೆಯೇ ಎಂಬ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ ಡಾ.ಸಿ.ಪಿ.ನಂಜರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.