ADVERTISEMENT

‘ದೇಶ ಸದೃಢವಾಗಿಸುವ ಅಗತ್ಯ’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 13:36 IST
Last Updated 15 ಆಗಸ್ಟ್ 2022, 13:36 IST
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ರಂಗಕರ್ಮಿ ಎಚ್.ಜನಾರ್ದನ ಮಾತನಾಡಿದರು
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ರಂಗಕರ್ಮಿ ಎಚ್.ಜನಾರ್ದನ ಮಾತನಾಡಿದರು   

ಮೈಸೂರು: ‘ಸ್ವಾತಂತ್ರೋತ್ತರ ಭಾರತವನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸದೃಢವಾಗಿ ನಿರ್ಮಿಸುವ ಅಗತ್ಯವಿದೆ’ ಎಂದು ರಂಗಕರ್ಮಿ ಎಚ್.ಜನಾರ್ದನ (ಜನ್ನಿ) ಅಭಿಪ್ರಾಯಪಟ್ಟರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಪರಕೀಯರಿಂದ ಬಿಡುಗಡೆ ಹೊಂದಿ ಸ್ವಾತಂತ್ರ್ಯ ಗಳಿಸಿದ ನಂತರ ದೇಶವನ್ನು ಪುನರ್ನಿರ್ಮಾಣ ಮಾಡಲು ಸಂವಿಧಾನ ನೆರವಿಗೆ ಬಂದಿತು. ಇದು ಸರ್ವ ಜನಾಂಗವನ್ನು ಒಗ್ಗೂಡಿಸಲು ಸಹಕಾರಿಯಾಯಿತು. ಆದರೆ, ಈಗ ಜಾತಿ–ಧರ್ಮದ ಹೆಸರಿನಲ್ಲಿ ಸಮುದಾಯವನ್ನು ಒಡೆಯುವ ಕೆಲಸ ಆರಂಭವಾಗಿದೆ. ಹಾಗಾಗಿ ರಾಷ್ಟ್ರ ಕವಿ ಕುವೆಂಪು ಅವರ ಆಶಯದಂತೆ ಎಲ್ಲರನ್ನೂ ವಿಶ್ವಮಾನವರನ್ನಾಗಿಸುವ ಅನಿವಾರ್ಯ ಸೃಷ್ಟಿಯಾಗಿದೆ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಡಿ.ರವಿ ‘ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಸ್ತುತತೆ’ ಕುರಿತು ಮಾತನಾಡಿದರು.

‘ಈ ಇಬ್ಬರು ಮಹಾನ್‌ ವ್ಯಕ್ತಿಗಳನ್ನು ಗೌಣ ಮಾಡುವ ವ್ಯವಸ್ಥಿತ ಕಾರ್ಯಾ ನಡೆಯುತ್ತಿದೆ. ಆದು ಸಲ್ಲದು. ಏಕೆಂದರೆ, ಅವರ ಮೌಲ್ಯಗಳು ಸಮಾಜದ ಸ್ವಾಸ್ಥ್ಯಕ್ಕೆ ಇಂದು ಅತ್ಯಗತ್ಯ. ಗಾಂಧಿ, ಮಮತೆ ಮತ್ತು ಕರುಣೆಯ ಮಾತೃ ಹೃದಯಿಯಾದರೆ, ಜವಾಬ್ದಾರಿ ಹೊತ್ತ ತಂದೆಯಂತೆ ಅಂಬೇಡ್ಕರ್ ಇದ್ದಾರೆ. ಹಾಗಾಗಿ ನಮ್ಮ ಎದೆಯಲ್ಲಿ ಅವರು ಸದಾ ಜಾಗೃತಿ ಸೃಜಿಸುವ ಮಹಾನ್ ಚೇತನಗಳು’ ಎಂದು ಬಣ್ಣಿಸಿದರು.

‘ದೇಶ ಎಂದರೆ ಎಲ್ಲ ಜಾತಿ, ಸಮುದಾಯ ಮತ್ತು ಧರ್ಮವನ್ನೂ ಒಳಗೊಳ್ಳುವ ಬಗೆ’ ಎಂದ ಅವರು, ‘ಯುವ ಸಮುದಾಯ ಎಚ್ಚೆತ್ತುಕೊಂಡು ಜಾತಿ, ಮತ, ಹಣದ ಆಮಿಷಕ್ಕೆ ಒಳಗಾಗದೆ ಮತದಾನದ ಹಕ್ಕು ಚಲಾಯಿಸಿ ಶಾಸಕಾಂಗವನ್ನು ಹೆಚ್ಚು ಗಟ್ಟಿಗೊಳಿಸಬೇಕು’ ಎಂದರು.

ವಿದ್ಯಾರ್ಥಿನಿಯರು ನೃತ್ಯ ಹಾಗೂ ಗಾಯನ ನಡೆಸಿಕೊಟ್ಟರು. ಜನ್ನಿ ಅವರು ಶಿಶುನಾಳ ಶರೀಫರ, ಬಿದಿರಮ್ಮ ನೀನಾರಿಗಲ್ಲದವಳು ಹಾಗೂ ಕುವೆಂಪು ಅವರ ಅನಿಕೇತನ ಹಾಡನ್ನು ಹಾಡಿದರು.

ವಿದ್ಯಾರ್ಥಿನಿ ಸೂಫಿಯಾ ‘ನಾ ಕಂಡ ಭಾರತ’ ಎನ್ನುವ ವಿಷಯದ ಕುರಿತು ಮಾತನಾಡಿದರು. ನಿವೇದಿತಾ ನಿರೂಪಿಸಿದರು.

ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಪರಶುರಾಮಮೂರ್ತಿ, ಖಜಾಂಚಿ ಡಾ.ರಾಘವೇಂದ್ರ ಎಂ.ಪಿ. ಹಿರಿಯ ಅಧ್ಯಾಪಕ ಡಾ.ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.