ADVERTISEMENT

ಸಾಂಸ್ಕೃತಿಕ ನಗರಿಯಲ್ಲಿ ಸ್ವಾತಂತ್ರ್ಯೋತ್ಸವದ ಸಡಗರ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 14:33 IST
Last Updated 15 ಆಗಸ್ಟ್ 2019, 14:33 IST
ಮೈಸೂರಿನ ರೈಲ್ವೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ಬೃಹತ್ ರಾಷ್ಟ್ರ ಧ್ವಜ ಹಾರಿಸಲಾಯಿತು
ಮೈಸೂರಿನ ರೈಲ್ವೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ಬೃಹತ್ ರಾಷ್ಟ್ರ ಧ್ವಜ ಹಾರಿಸಲಾಯಿತು   

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಗುರುವಾರ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಪ್ರಮುಖ ವೃತ್ತಗಳಲ್ಲಿ ಹಾರಾಡಿದ ತಿರಂಗಾ. ಎಲ್ಲೆಡೆ ಮೊಳಗಿದ ಸಾರೇ ಜಹಾಂಸೇ ಅಚ್ಛಾ...

ನಸುಕಿನಲ್ಲೇ ತಿರಂಗಾದ ಹಾರಾಟ... ಬಹುತೇಕರ ಕೆನ್ನೆಗಳಲ್ಲೂ ರಾರಾಜಿಸಿದ ಬಾವುಟದ ಸ್ಟಿಕ್ಕರ್‌... ಸರ್ಕಾರಿ–ಖಾಸಗಿ ಬಸ್ ಸೇರಿದಂತೆ ಕಾರು, ಜೀಪುಗಳ ಮುಂಭಾಗ, ಮೇಲ್ಭಾಗವೂ ಪುಟ್ಟ ಪುಟ್ಟ ರಾಷ್ಟ್ರಧ್ವಜ ಹಾರಾಡಿದವು. ಆಟೊ, ಬೈಕ್‌ಗಳು ಸಹ ಇದರಿಂದ ಹೊರತಾಗಿರಲಿಲ್ಲ. ವಂದೇ ಮಾತರಂ... ಸೇರಿದಂತೆ ದೇಶ ಭಕ್ತಿ ಬಿಂಬಿಸುವ ಹಲವು ಗೀತೆಗಳು ಮುಂಜಾನೆಯಿಂದ ಮುಸ್ಸಂಜೆಯವರೆಗೂ ಮೊಳಗಿದವು.

ಪ್ರತಿಷ್ಠಿತ ಹೋಟೆಲ್‌ಗಳು ಸೇರಿದಂತೆ ಕೆಲ ಪೆಟ್ರೋಲ್‌ ಬಂಕ್‌ಗಳಲ್ಲೂ ಸ್ವಾತಂತ್ರ್ಯೋತ್ಸವವನ್ನು ಸಡಗರ–ಸಂಭ್ರಮದಿಂದ ಆಚರಿಸಿದ್ದು ಗೋಚರಿಸಿತು. ಖಾಸಗಿ ಕಂಪನಿಗಳಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಬಹುತೇಕ ಕಡೆ ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನ್‌ಗಳಿಂದ ಅಲಂಕಾರ ನಡೆಸಿದ್ದು ಗಮನ ಸೆಳೆಯಿತು. ನಗರದ ಪ್ರಮುಖ ವೃತ್ತಗಳು, ರಾಷ್ಟ್ರ ನಾಯಕರ ಪ್ರತಿಮೆಗಳು ಸಹ ವಿದ್ಯುತ್‌ ದೀಪಾಲಂಕಾರದಿಂದ ಝಗಮಗ ಕಂಗೊಳಿಸಿದವು.

ADVERTISEMENT

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆ ಪ್ರಾತಃ ಕಾಲದಲ್ಲೇ ವಿವಿಧ ಶಾಲಾ, ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿತು. ಚಿಕ್ಕಮಕ್ಕಳಂತೂ ಅತ್ಯುತ್ಸಾಹದಿಂದ ಸ್ವಾತಂತ್ರ್ಯ ಸಂಭ್ರಮದಲ್ಲಿ ಮಿಂದೆದ್ದರು. ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಘಟನಾವಳಿಗಳನ್ನು ತಮ್ಮ ಪುಟ್ಟ ಭಾಷಣದಲ್ಲಿ ಪ್ರಸ್ತುತಪಡಿಸಿದರು.

ನಗರದ ಬನ್ನಿಮಂಟಪ ರಸ್ತೆಯ ಪಂಜಿನ ಕವಾಯತು ಮೈದಾನದಲ್ಲೂ ‘ಸ್ವಾತಂತ್ರ್ಯೋತ್ಸವ’ ವರ್ಣರಂಜಿತವಾಗಿ ನಡೆಯಿತು. ಬಹು ವರ್ಷಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲೂ ಸ್ವಾತಂತ್ರ್ಯೋತ್ಸವದ ಮೆರುಗು ಹೆಚ್ಚಿತ್ತು. ದೇಶಾಭಿಮಾನ ಹೆಚ್ಚಿಸುವ ದೇಶಭಕ್ತಿ ಗೀತೆಗಳಿಗೆ ವಿವಿಧ ಶಾಲೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಮನಸೂರೆಗೊಂಡರು.

1450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಧ ತಾಸು ಪ್ರತ್ಯೇಕವಾಗಿ ಪ್ರದರ್ಶಿಸಿದ ಸಾಮಾಜಿಕ ಪಿಡುಗಿಗೆ ಸಂಬಂಧಿಸಿದ ನೃತ್ಯ, ವಿವಿಧತೆಯಲ್ಲಿ ಏಕತೆ ಸಾರುವ ಗೀತೆಗೆ ನೃತ್ಯ, ಭಾವೈಕ್ಯತೆ ಗೀತೆಗೆ ನೃತ್ಯ ಪ್ರದರ್ಶಿಸಿದ್ದು ಮೆಚ್ಚುಗೆಗೆ ಪಾತ್ರವಾಯ್ತು. ಪಥ ಸಂಚಲನಾ ತಂಡಗಳಿಂದ ನಡೆದ ಆಕರ್ಷಕ ಪಥ ಸಂಚಲನ ಸಹ ನೋಡುಗರ ಗಮನ ಸೆಳೆಯಿತು. ಪೊಲೀಸ್ ವಾದ್ಯವೃಂದ ಹಿಮ್ಮೇಳದಲ್ಲಿ ಅನುರಣಿಸಿದ ದೇಶಭಕ್ತಿ ಗೀತೆಗಳು ದೇಶ ಪ್ರೇಮ ಉಕ್ಕಿಸಿದವು. ಎಲ್ಲೆಲ್ಲೂ ರಾಷ್ಟ್ರೀಯ ಹಬ್ಬದ ಸಂಭ್ರಮ ಗೋಚರಿಸಿತು.

ನಸುಕಿನಲ್ಲೇ ಶಾಲಾ ವಿದ್ಯಾರ್ಥಿಗಳು ಅತ್ಯಂತ ಶಿಸ್ತುಬದ್ಧವಾಗಿ ಪ್ರಭಾತ್ ಪೇರಿ ನಡೆಸುತ್ತಾ, ಕೈಯಲ್ಲಿ ಪುಟ್ಟ ಪುಟ್ಟ ರಾಷ್ಟ್ರಧ್ವಜ ಹಿಡಿದು, ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸುತ್ತಾ, ಮೆರವಣಿಗೆಯಲ್ಲಿ ಸಾಲಾಗಿ ಸಾಗಿದ್ದು ಗಮನ ಸೆಳೆಯಿತು. ಕೆಲ ವಿದೇಶಿಗರು ಸಹ ಭಾರತದ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಿ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಹಲವು ಅಪೂರ್ವ ಕ್ಷಣಗಳನ್ನು ಸೆರೆ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.