ADVERTISEMENT

ಹಿನಕಲ್‌ ಸಂಪೂರ್ಣ ಅಭಿವೃದ್ಧಿಗೆ ಬದ್ಧ: ಸಿದ್ದರಾಮಯ್ಯ

ಜಿಲ್ಲೆಯಲ್ಲಿ ಹೊಸದಾಗಿ 9 ಇಂದಿರಾ ಕ್ಯಾಂಟೀನ್‌ಗಳ ಉದ್ಘಾಟನೆ ನೆರವೇರಿಸಿದ ಸಿಎಂ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:02 IST
Last Updated 24 ಮೇ 2025, 14:02 IST
ಹಿನಕಲ್‌ನಲ್ಲಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಟಿ. ದೇವೇಗೌಡ, ಡಾ.ಎಚ್‌.ಸಿ. ಮಹದೇವಪ್ಪ ಉಪಾಹಾರ ಸವಿದರು –ಪ್ರಜಾವಾಣಿ ಚಿತ್ರ
ಹಿನಕಲ್‌ನಲ್ಲಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಟಿ. ದೇವೇಗೌಡ, ಡಾ.ಎಚ್‌.ಸಿ. ಮಹದೇವಪ್ಪ ಉಪಾಹಾರ ಸವಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಹಿನಕಲ್‌ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮವಾಗಿದ್ದು, ಇಲ್ಲಿನ ಸಮಗ್ರ ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡಿಕೊಡಲು ಬದ್ಧನಾಗಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ತಾಲ್ಲೂಕಿನ ಹಿನಕಲ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನಗರ, ಹಿನಕಲ್‌ ಹಾಗೂ ಜಿಲ್ಲೆಯ ವಿವಿಧೆಡೆ ಹೊಸದಾಗಿ ಆರಂಭಿಸಿರುವ 9 ಇಂದಿರಾ ಕ್ಯಾಂಟೀನ್‌ಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಶಾಸಕ ಜಿ.ಟಿ. ದೇವೇಗೌಡ, ಮುಖಂಡ ರಾಕೇಶ್ ಪಾಪಣ್ಣ ಮೊದಲಾದವರು ಹಲವು ಬೇಡಿಕೆ ಮಂಡಿಸಿದ್ದಾರೆ. ಪೂರ್ಣ ಗ್ರಾಮಕ್ಕೆ ಕಾವೇರಿ ನೀರು ಪೂರೈಕೆ, ಸ್ಮಶಾನ ಅಭಿವೃದ್ಧಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ನಿವೇಶನ ಮಂಜೂರು, ಪಶು ಹಾಗೂ ಸಾಕುಪ್ರಾಣಿಗಳ ಚಿಕಿತ್ಸಾ ಕೇಂದ್ರಕ್ಕೆ ಹೆಚ್ಚುವರಿ ನಿವೇಶನ, ಗ್ರಾಮದೇವತೆ ಮಾರಮ್ಮತಾಯಿ ಹಾಗೂ ಶನೇಶ್ವರ ದೇವಾಲಯ ಅಭಿವೃದ್ಧಿಗೆ ತಲಾ ₹50 ಲಕ್ಷ, ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ₹50 ಲಕ್ಷ ಅನುದಾನ, ಸರ್ವೇ ನಂ.48ರಲ್ಲಿ 2 ಎಕರೆ ಸರ್ಕಾರದ ನಿವೇಶನವನ್ನು ಕುಲದೈವ ಹಬ್ಬ ಆಚರಣೆಗೆ ಮೀಸಲಿಡಬೇಕು. ಫ್ಲೈಓವರ್‌ ಕೆಳಭಾಗದಲ್ಲಿ ಅಥವಾ ಅವಕಾಶವಿರುವಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು ಎಂದು ಕೇಳಿದ್ದೀರಿ. ಸಾಧ್ಯವಾಗುವ ಎಲ್ಲ ಕೆಲಸವನ್ನೂ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಕಾಲೇಜು ಮಂಜೂರಿಗೆ ಮನವಿ: ‘ಶಾಸಕರ ಮನವಿ ಮೇರೆಗೆ ಪಿಯು ಕಾಲೇಜು ಮಂಜೂರಾತಿಯನ್ನು ಈ ವರ್ಷ, ಇಲ್ಲದಿದ್ದರೆ ಮುಂದಿನ ವರ್ಷ ಮಾಡಿಕೊಡಲಾಗುವುದು. ಪಟ್ಟಣ ಪಂಚಾಯಿತಿಗಳಿಗೆ ಎಂಜಿನಿಯರ್‌ಗಳನ್ನು ನೇಮಿಸಲಾಗುವುದು’ ಎಂದು ಹೇಳಿದರು.

‘ಕೈಗಾರಿಕಾ ಪ್ರಾಧಿಕಾರ ರಚನೆಯಿಂದ ತೆರಿಗೆಯು ಸ್ಥಳೀಯ ಸಂಸ್ಥೆಗಳ ಬದಲಿಗೆ ಕೆಐಎಡಿಬಿಗೆ ಹೋಗುವಂತೆ ಮಾಡಲಾಗಿದೆ. ಇದನ್ನು ಮರುಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಶಾಸಕ ಜಿಟಿಡಿ ಅವರ ಮನವಿಗೆ ಪ್ರತಿಕ್ರಿಯಿಸಿದರು.

ಬಡವರಿಗೆಂದು: ‘ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಇಂದಿರಾ ಕ್ಯಾಂಟೀನ್‌ಗಳನ್ನು ಬಡವರು, ಕೂಲಿ ಕಾರ್ಮಿಕರು, ಆಸ್ಪತ್ರೆಗಳಿಗೆ ಬರುವ ಜನರ ಹಸಿವನ್ನು ಕಡಿಮೆ ದರದಲ್ಲಿ ನೀಗಿಸುವ ಉದ್ದೇಶದಿಂದ ಆರಂಭಿಸಿದೆ. ಬೆಂಗಳೂರು ಹಾಗೂ ಎಲ್ಲ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ 2017ರಲ್ಲಿ ಆರಂಭಿಸಿದ್ದೆವು. ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರನ್ನು ಕರೆಸಿ ಚಾಲನೆ ಕೊಡಿಸಿದ್ದೆವು. ಆದರೆ, ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರ ಕ್ಯಾಂಟೀನ್‌ಗಳು ಸೊರಗಿದ್ದವು. ನಾವೇ ಮತ್ತೆ ಅಧಿಕಾರಕ್ಕೆ ಬಂದು ಅವುಗಳಿಗೆ ಬಲ ತುಂಬಿದ್ದೇವೆ. ಹೊಸದಾಗಿ ಇನ್ನೂ 184 ಕ್ಯಾಂಟೀನ್‌ಗಳನ್ನು ಆರಂಭಿಸುತ್ತಿದ್ದೇವೆ’ ಎಂದು ತಿಳಿಸಿದರು.

ಹೆಚ್ಚಿನವರು ಹೋಟೆಲ್‌ಗಳಲ್ಲಿ ಜಾಸ್ತಿ ಹಣ ನೀಡಿ ಉಪಾಹಾರ–ಊಟ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿದ್ದೇವೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಇಲ್ಲಿ ₹5ಕ್ಕೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ತಲಾ ₹10ಕ್ಕೆ ಕೊಡಲಾಗುತ್ತದೆ. ನಾನೂ ರುಚಿ ನೋಡಿದೆ. ಚೆನ್ನಾಗಿ ಮಾಡುತ್ತಾರೆ. ಯಾರೂ ಹಸಿವಿನಿಂದ ಇರಬಾರದು ಎಂಬುದು ನಮ್ಮ ಉದ್ದೇಶ. ಅಗತ್ಯವಿರುವವರು ಈ ಕ್ಯಾಂಟೀನ್‌ ಸೌಲಭ್ಯ ಬಳಸಿಕೊಳ್ಳಬೇಕು’ ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕರಾದ ತನ್ವಿರ್‌ ಸೇಠ್, ಡಿ.ರವಿಶಂಕರ್‌, ಎ.ಎಸ್. ಪೊನ್ನಣ್ಣ, ಕೆ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ಮುಖಂಡರಾದ ರಾಕೇಶ್ ಪಾಪಣ್ಣ, ಹಿನಕಲ್ ಪ್ರಕಾಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್‌ ಪಾಲ್ಗೊಂಡಿದ್ದರು.

ಮಾಸ್ಕ್‌ ಧರಿಸಿದ್ದ ಮುಖ್ಯಮಂತ್ರಿ!

ಮುಖ್ಯಮಂತ್ರಿಯು ಕಾರ್ಯಕ್ರಮದಲ್ಲಿ ಮಾಸ್ಕ್‌ ಧರಿಸಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಕ್ಯಾಂಟೀನ್‌ನಲ್ಲಿ ಸವಿದ ಉಪಾಹಾರಕ್ಕೆ ಹಣ ಪಾವತಿಸಲೆಂದು ಶಾಸಕ ಜಿ.ಟಿ. ದೇವೇಗೌಡ ಅವರು ಮುಖ್ಯಮಂತ್ರಿಗೆ ₹5 ನಾಣ್ಯ ನೀಡಿದರು. ಕೇಸರಿಬಾತು ಬಿಸಿಬೇಳೆ ಬಾತನ್ನು ಸಿದ್ದರಾಮಯ್ಯ ಸವಿದರು. ‘ಗೌಡ್ರೇ ನೀವು ಹಸಿದುಕೊಂಡಿದ್ದೀರಿ ತಿಂಡಿ ತಗೊಳ್ಳಿ’ ಎಂದು ಸಚಿವ ಮಹದೇವಪ್ಪ ಉಪಾಹಾರದ ತಟ್ಟೆಯನ್ನು ಕೊಟ್ಟರು.

ಎಲ್ಲೆಲ್ಲಿ ಕ್ಯಾಂಟೀನ್‌?

ಸಿದ್ಧಾರ್ಥನಗರದ ಹೊಸ ಜಿಲ್ಲಾಧಿಕಾರಿ ಕಚೇರಿಯ ಬಳಿ ಹಾಗೂ ಪಡುವಾರಹಳ್ಳಿಯ ಮಹರ್ಷಿ ವಾಲ್ಮೀಕಿ ರಸ್ತೆಯ ಮಹಾರಾಣಿ ವಾಣಿಜ್ಯ ಕಾಲೇಜು ಆವರಣದಲ್ಲಿ ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹಿನಕಲ್‌ ಪಿರಿಯಾಪಟ್ಟಣ ಬನ್ನೂರು ಪುರಸಭೆ ಸರಗೂರು ಬೋಗಾದಿ ಕಡಕೊಳ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಉದ್ಘಾಟಿಸಲಾಯಿತು.

ಗ್ರೇಟರ್ ಮೈಸೂರು: ಜಿಟಿಡಿ ಒತ್ತಾಯ

ಅಧ್ಯಕ್ಷತೆ ವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮಾಡಿರುವ ತೀರ್ಮಾನ ಉತ್ತಮವಾಗಿದೆ. ಯೋಜಿತ ನಗರವಾಗಬೇಕೆಂಬ ಆಶಯ ಚೆನ್ನಾಗಿದೆ. ಅದರಂತೆಯೇ ಇಲ್ಲಿನ ಮಹಾನಗರ ಪಾಲಿಕೆಯನ್ನು ಗ್ರೇಟರ್ ಮೈಸೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.