ಮೈಸೂರು: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ಕೆ.ಸಾಲುಂಡಿ ಗ್ರಾಮದ ನಿವಾಸಿ ಕನಕರಾಜು (22) ಮಂಗಳವಾರ ಮೃತಪಟ್ಟು, 47 ಮಂದಿ ಚೇತರಿಸಿಕೊಂಡಿದ್ದಾರೆ.
ಸೋಮವಾರ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ 48 ಮಂದಿ ಗ್ರಾಮಸ್ಥರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ವಾಂತಿ– ಭೇದಿಯಿಂದ ಬಳಲಿದ್ದ ಕನಕರಾಜು, ಖಾಸಗಿ ಆಸ್ಪತ್ರೆಯಲ್ಲಿ ಔಷಧ ಪಡೆದು ಮನೆಗೆ ಮರಳಿದ್ದರು. ಸಮಸ್ಯೆ ತೀವ್ರಗೊಂಡಾಗ ಸೋಮವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು.
‘ಕುಡಿಯುವ ನೀರು ಮಲಿನಗೊಂಡಿದ್ದೇ ಗ್ರಾಮಸ್ಥರು ಅಸ್ವಸ್ಥಗೊಳ್ಳಲು ಕಾರಣ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅಧಿಕಾರಿಗಳಿಗೆ ಕರೆ ಮಾಡಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ‘ನೀರು ಕಲುಷಿತವಾಗಲು ಕಾರಣವೇನು ಎಂದು ತಿಳಿದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿರುವವರಿಗೆ ಚಿಕಿತ್ಸೆಗೆ ಅಗತ್ಯ ಸೇವೆ ನೀಡಲು ಕ್ರಮ ವಹಿಸಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.