ADVERTISEMENT

ಪ್ರಜಾವಾಣಿ ಫೋನ್ಇನ್‌: ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ; ಡಾ.ಎಂ.ಮಹಾಂತೇಶಪ್ಪ

​ಪ್ರಜಾವಾಣಿ ವಾರ್ತೆ
Published 30 ಮೇ 2020, 9:34 IST
Last Updated 30 ಮೇ 2020, 9:34 IST
ಕೃಷಿ ಇಲಾಖೆ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಡಾ.ಎಂ.ಮಹಾತೇಂಶಪ್ಪ
ಕೃಷಿ ಇಲಾಖೆ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಡಾ.ಎಂ.ಮಹಾತೇಂಶಪ್ಪ   

ಮೈಸೂರು: ಕೃಷಿ ಇಲಾಖೆಯ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಡಾ.ಎಂ.ಮಹಾತೇಂಶಪ್ಪ ಜತೆ ‘ಪ್ರಜಾವಾಣಿ’ ಫೋನ್ ಇನ್‌ನಲ್ಲಿ ನಡೆದ ‘ಫಟಾಫಟ್’ ಮಾತುಕತೆಯ ವಿವರ...

* ಕೃಷಿಯಲ್ಲಿ ಲಾಭವಿಲ್ಲ ಎಂಬ ಮಾತಿದೆಯಲ್ಲಾ ?

ಒಂದೇ ಬೆಳೆಯ ಪದ್ಧತಿ ಅವಲಂಬಿಸಬಾರದು. ಕೃಷಿ, ತೋಟಗಾರಿಕೆ, ಅರಣ್ಯ, ಮೀನು, ಕುರಿ, ಆಡು, ಕೋಳಿ ಸಾಕಣೆಯೂ ಕೃಷಿಯೊಳಗಿರಬೇಕು. ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಯಶಸ್ವಿಯಾದವರ ಸಂಖ್ಯೆ ಹೆಚ್ಚಿದೆ. ಕೃಷಿ ಎಂದಿಗೂ ಕೈ ಸುಡಲ್ಲ. ನಾವು ಕೃಷಿ ಮಾಡುವಲ್ಲಿ ಸೋಲಬಾರದಷ್ಟೇ.

ADVERTISEMENT

* ರೈತರ ಆತ್ಮಹತ್ಯೆ ಮತ್ತೆ ಹೆಚ್ಚುತ್ತಿದೆಯಲ್ಲಾ ?

ಆತ್ಮಹತ್ಯೆಗೆ ಹಲವು ಕಾರಣಗಳಿವೆ. ಸರ್ಕಾರ ರೈತರ ಪರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ.

* ತಂಬಾಕಿಗೆ ಪರ್ಯಾಯ ಇಲ್ಲವೇ ?

ಈ ವೇಳೆಗೆ ತಂಬಾಕು ಬೆಳೆಯುವ ಪ್ರಮಾಣ ಅರ್ಧಕ್ಕರ್ಧ ಕಡಿಮೆಯಾಗಬೇಕಿತ್ತು. ಹಿಂದಿನ ವರ್ಷ 9.9 ಕೋಟಿ ಕೆ.ಜಿ. ತಂಬಾಕು ಉತ್ಪಾದಿಸಲು ಅನುಮತಿ ದೊರೆತಿತ್ತು. ಈ ಬಾರಿ 8.8 ಕೆ.ಜಿ. ತಂಬಾಕು ಉತ್ಪಾದನೆಗಷ್ಟೇ ಅನುಮತಿ ದೊರೆತಿದೆ. ತಂಬಾಕು ಮಂಡಳಿ ಈ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಂಡಿದೆ. ಕೃಷಿ ಇಲಾಖೆಯು ನೀರಾವರಿ ಆಶ್ರಿತ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗೆ ಶಿಫಾರಸು ಮಾಡಿದರೆ, ಮಳೆಯಾಶ್ರಿತ ಪ್ರದೇಶದಲ್ಲಿ ರೇಷ್ಮೆ ಸೇರಿದಂತೆ ಇನ್ನಿತರೆ ಕೃಷಿ ಕೈಗೊಳ್ಳಲು ಸಲಹೆ ನೀಡಿದೆ.

* ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಜಾಲದ ವಿರುದ್ಧ ಕ್ರಮ?

ಮೈಸೂರು ಜಿಲ್ಲೆಯಾದ್ಯಂತ 554 ಚಿಲ್ಲರೆ ರಸಗೊಬ್ಬರ ಮಾರಾಟಗಾರರು, 85 ಹೋಲ್‌ಸೇಲ್ ಮಾರಾಟಗಾರರು, 408 ಬಿತ್ತನೆ ಬೀಜ ಮಾರಾಟಗಾರರಿದ್ದರೆ, 622 ಜನರು ಕೀಟನಾಶಕ ಮಾರಾಟ ಮಾಡುವವರಿದ್ದಾರೆ.

ನಕಲಿ ಜಾಲ, ತೂಕದಲ್ಲಿ ಮೋಸ ಮಾಡುವವರ ವಿರುದ್ಧ ಕ್ರಮ ಜರುಗಿಸಲು ಇಲಾಖೆಯಲ್ಲಿ ಕೃಷಿ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಜಾಗೃತ ದಳವೊಂದಿದೆ. ನಿಖರ ಮಾಹಿತಿ, ದೂರು ನೀಡಿದರೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

* ಪ್ರಸಕ್ತ ಸಾಲಿನಲ್ಲಿನ ಸರ್ಕಾರಿ ಸೌಲಭ್ಯಗಳು ?

ಬಿತ್ತನೆ ಬೀಜ ವಿತರಿಸುತ್ತಿದ್ದೇವೆ. ನರೇಗಾದಡಿ ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ನೀರುಗಾಲುವೆ ನಿರ್ಮಾಣಕ್ಕೆ ಅವಕಾಶವಿದೆ. ಹೊಸ ಯೋಜನೆ ಘೋಷಣೆಯಾಗಬೇಕಿದೆ. ನಿತ್ಯವೂ ಒಂದೊಂದು ವಿಷಯದಲ್ಲಿ ಆನ್‌ಲೈನ್ ತರಬೇತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.