ಮೈಸೂರು: ‘ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿರುವುದು ಸಮಾಧಾನ ತಂದಿದೆ. ಆದರೆ, ಕೆಲ ಲೋಪ ದೋಷಗಳಿದ್ದು ಅವುಗಳನ್ನು ಸರಿಪಡಿಸಿ ಅನುಕೂಲ ಮಾಡಿಕೊಡಬೇಕು’ ಎಂದು ಮಾಜಿ ಸಚಿವ ಎಂ.ಶಿವಣ್ಣ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಪರ ವೇದಿಕೆ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ಒಳ ಮೀಸಲಾತಿಯ ಒಳಸುಳಿಗಳು’ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಲೋಪದೋಷಗಳನ್ನು ಸರಿಪಡಿಸದಿದ್ದರೆ ಒಳಮೀಸಲಾತಿಯು ಸಮರ್ಪಕವಾಗಿ ಜಾರಿಯಾಗುವುದಿಲ್ಲ. ಅರ್ಹರಿಗೆ ಸೌಲಭ್ಯ ತಲುಪುವುದಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.
‘ಪ್ರಸ್ತುತ ಸಮುದಾಯದಲ್ಲಿ ಜಾಗೃತಿ ಮೂಡುತ್ತಿದೆ. ನಮ್ಮ ಜನ ಯಾರಿಗೂ ಕಡಿಮೆ ಇಲ್ಲಾ. ಯಾವ ಮಟ್ಟಕ್ಕೆ ಬೇಕಾದರೂ ಹೋರಾಟ ಮಾಡುವ ಶಕ್ತಿ ಅವರಿಗೆ ಬಂದಿದೆ. ಒಳ ಮೀಸಲಾತಿ ಜಾರಿ ಸಂಬಂಧ ಹಲವು ಮಂದಿ ಮಹನೀಯರು ದಶಕಗಳಿಂದಲೂ ಹೋರಾಟ ನಡೆಸಿದ್ದಾರೆ. ಅದು ವ್ಯರ್ಥವಾಗಬಾರದು. ನಮಗೆ ನ್ಯಾಯಬದ್ಧ ಹಕ್ಕುಗಳು ದೊರೆಯುವಂತೆ ಆಗಬೇಕು’ ಎಂದರು.
‘ನಾವು ಯಾವುದೇ ಸಮುದಾಯದ ವಿರುದ್ಧ ಹೋರಾಟ ನಡೆಸುವುದಿಲ್ಲ. ನಮ್ಮ ಪಾಲನ್ನು ಬೇರೆಯವರು ಕಸಿದುಕೊಳ್ಳಬಾರದು ಎಂಬುದೇ ನಮ್ಮ ಆಶಯ. ನಮ್ಮ ಸೋದರ ಸಮುದಾಯದವರು ಎಲ್ಲವನ್ನೂ ವಿರೋಧ ಮಾಡಿದರೆ ಅದು ಸರಿ ಕಾಣಿಸುವುದಿಲ್ಲ. ನಮ್ಮ ಹಕ್ಕುಗಳ ಸಂಬಂಧ ಸರ್ಕಾರದ ಗಮನ ಸೆಳೆಯಬೇಕು’ ಎಂದು ತಿಳಿಸಿದರು.
ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಿಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತಕ ಅರಕಲವಾಡಿ ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ಜೇವೂರು, ವಕೀಲ ವಿ.ಪ್ರಕಾಶ್, ಆದಿಜಾಂಬವ ಅಭಿವೃದ್ಧಿ ನಿಗಮದ ಕುಮಾರರಾಮು, ಮರಡೀಪುರ ರವಿಕುಮಾರ್, ಸಾಮಾಜಿಕ ಹೋರಾಟಗಾರ ಬಿ.ಆರ್.ಭಾಸ್ಕರ ಪ್ರಸಾದ್ ಹಾಗೂ ಕೋಡಿಹಳ್ಳಿ ಸಂತೋಷ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.