ADVERTISEMENT

ಜಯಪುರ | ಚುರುಕು ಪಡೆದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2025, 6:16 IST
Last Updated 4 ಮೇ 2025, 6:16 IST
   

ಜಯಪುರ: ಕಳೆದ ಎರಡು ದಿನಗಳಿಂದ ಜಯಪುರ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ.

ಇತ್ತೀಚೆಗಿನ ಸಾಧಾರಣ ಮಳೆಗೆ ರೈತರು ತಮ್ಮ ಜಮೀನುಗಳನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಸಿ ಹಸನುಗೊಳಿಸಿ ಕೊಂಡಿದ್ದರು. ಈಚೆಗೆ ಸುರಿದ ಮಳೆ ರೈತರಿಗೆ ಸಂತಸವನ್ನುಂಟು ಮಾಡಿದ್ದು, ಬಿತ್ತನೆ ಹಾಕುವ ತಯಾರಿ ನಡೆಸಿದ್ದಾರೆ.

ಈಚೆಗೆ ರಜೆ ಇದ್ದ ಕಾರಣ ಜಯಪುರ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಸ್ಥಳೀಯ ರೈತರು ಆಗ್ರೋ ಕೇಂದ್ರಗಳಲ್ಲಿ ಹೆಚ್ಚಿನ ಹಣ ನೀಡಿ ಅವರೆ, ಉದ್ದು, ಅಲಸಂದೆ, ಹೆಸರು ಕಾಳು, ಹತ್ತಿ ಬಿತ್ತನೆ ಬೀಜಗಳು ಮತ್ತು ರಾಸಾಯನಿಕ ಗೊಬ್ಬರ ಖರೀದಿಸಲು ಮುಗಿಬಿದ್ದರು.

ADVERTISEMENT

ಜಯಪುರ ಹೋಬಳಿ ವ್ಯಾಪ್ತಿಯ ಹಳ್ಳಿಗಳ ರೈತರು ಮಳೆಯಾಧರಿತ ಕೃಷಿಯನ್ನು ನೆಚ್ಚಿಕೊಂಡಿದ್ದು ಈಗಾಗಲೇ ಹತ್ತಿ, ಮೆಕ್ಕೆಜೋಳ, ಬಿಳಿ ಜೋಳ, ಸೇರಿದಂತೆ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಹಲವು ರೈತರು ಕೊಳವೆ ಬಾವಿ ನೀರಾವರಿ ಮೂಲಕ ತರಕಾರಿ ಬೆಳೆಗಳು ಮತ್ತು ವಾರ್ಷಿಕ ಬೆಳೆ ಶುಂಠಿ ಬೇಸಾಯಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ, ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯದಲ್ಲಿ ಇಳಿಮುಖವಾಗಿದೆ.

‘ಭರಣಿ ಮಳೆಯು ಕೈಕೊಟ್ಟಿದ್ದರಿಂದ ರೋಹಿಣಿ ಮಳೆಗೆ ಬಿತ್ತನೆ ಮಾಡುತ್ತಿದ್ದೇವೆ. ಇದೇ ರೀತಿ ಉತ್ತಮ ಮಳೆಯಾದರೆ ಉತ್ತಮ ಬೆಳೆಯಾಗುತ್ತವೆ. ಬಿಸಿಲ ತಾಪ ಹೆಚ್ಚಾದಷ್ಟು ಬೆಳೆಯಲ್ಲಿ ಇಳುವರಿ ಕಮ್ಮಿ ಯಾಗುತ್ತದೆ’ ಎಂದು ಜಯಪುರ ಗ್ರಾಮದ ರೈತ ಸಣ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರಿಗೆ ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಬಿತ್ತನೆ ಬೀಜಗಳು ಮತ್ತು ಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಜಯಪುರ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆಯಬಹುದು. ಮುಂಗಾರು ಬೆಳೆಯ ಬಗ್ಗೆ ರೈತರಿಗೆ ಅಗತ್ಯ ಮಾಹಿತಿಯನ್ನು ಕೃಷಿ ಇಲಾಖೆಯಿಂದ ನೀಡಲಾಗುವುದು’ ಎಂದು ಜಯಪುರ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಅರುಣಾ ತಿಳಿಸಿದರು.

ಕೃಷಿಗೂ ಮುನ್ನ ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆ ಹಾಗೂ ಬೆಳೆ ಸಂರಕ್ಷಣೆಯ ಅಗತ್ಯ ಮಾಹಿತಿಗೆ ಕೇಂದ್ರಕ್ಕೆ ಭೇಟಿ ನೀಡಬಹುದು.

-ಅರುಣಾ, ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ, ಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.