ADVERTISEMENT

ಇನಿಂಗ್ಸ್‌ ಓಪನ್‌, ವಿಕೆಟ್‌ ಕೀಪಿಂಗ್‌ ಮಾಡಪ್ಪಾ ಅಂದರೂ ಮಾಡ್ತೇನೆ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 15:17 IST
Last Updated 22 ಜನವರಿ 2021, 15:17 IST
ಸಚಿವ ಜೆ.ಸಿ.ಮಾಧುಸ್ವಾಮಿ
ಸಚಿವ ಜೆ.ಸಿ.ಮಾಧುಸ್ವಾಮಿ   

ಮೈಸೂರು: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ರಿಕೆಟ್‌ ತಂಡದ ಕ್ಯಾಪ್ಟನ್. ಇನಿಂಗ್ಸ್‌ ಓಪನ್‌ ಮಾಡು ಎಂದರೆ ಮಾಡ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಆಡು ಎಂದರೆ ಅದಕ್ಕೂ ಸಿದ್ಧ. ವಿಕೆಟ್‌ ಕೀಪಿಂಗ್‌ ಮಾಡಪ್ಪಾ ಎಂದರೂ ಮಾಡ್ತೇನೆ’ ಎಂದುಸಚಿವ ಜೆ.ಸಿ.ಮಾಧುಸ್ವಾಮಿ ಮಾರ್ಮಿಕವಾಗಿ ನುಡಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಚೆನ್ನಾಗಿ ಹೊಂದಿಕೊಂಡಿರುವ ಖಾತೆ ಬದಲಾದಾಗ ಬೇಸರ ಸಹಜ. ಸಣ್ಣ ನೀರಾವರಿ ಖಾತೆ ಬದಲಾಯಿಸಿದ್ದಕ್ಕೆ ನೋವಾಗಿದೆ’ ಎಂದು ಹೇಳಿದರು.

‘ನಾನು ಗ್ರಾಮೀಣ ಭಾಗದಿಂದ ಬಂದವನು. ಆದ್ದರಿಂದ ರೈತರು, ಹಳ್ಳಿ ಜನರ ಜತೆ ಇರುವ ಖಾತೆ ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದೇನೆ. ಖಾತೆ ಹೋದಾಗ ರೈತರಿಗೆ ನೆರವಾಗುವ ಅವಕಾಶ ಕಳೆದುಕೊಂಡೆನಲ್ಲಾ ಎಂದು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದೇನೆಯೇ ಹೊರತು ಅಸಮಾಧಾನ ವ್ಯಕ್ತಪಡಿಸಿಲ್ಲ’ ಎಂದು ತಿಳಿಸಿದರು.

ADVERTISEMENT

‘ಒಬ್ಬರಿಗೆ ಎರಡು ದೊಡ್ಡ ಖಾತೆಗಳನ್ನು ಇಟ್ಟುಕೊಳ್ಳಲು ಆಗುವುದಿಲ್ಲ. ಕಾನೂನು ಮತ್ತು ವೈದ್ಯಕೀಯ ಶಿಕ್ಷಣ ಎರಡೂ ದೊಡ್ಡ ಖಾತೆಗಳು. ಆದ್ದರಿಂದ ಒಂದನ್ನು ಮಾತ್ರ ಕೊಟ್ಟಿದ್ದಾರೆ. ಕಾನೂನು ಖಾತೆಗೆ ಹೋಲಿಸಿದರೆ ವೈದ್ಯಕೀಯ ಶಿಕ್ಷಣ ನಾಲ್ಕು ಪಟ್ಟು ದೊಡ್ಡ ಖಾತೆ‌’ ಎಂದರು.

ಖಾತೆ ಮತ್ತೆ ಬದಲಾಯ್ತಾ?: ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಹಿಂದಕ್ಕೆ ಪಡೆದು ಹಜ್‌ ಮತ್ತು ವಕ್ಫ್‌ ಖಾತೆ ನೀಡಿರುವುದರ ಬಗ್ಗೆ ಕೇಳಿದಾಗ, ‘ಹೌದಾ? ಮತ್ತೆ ಬದಲಾಯ್ತಾ? ನಾನು ಬೆಳಿಗ್ಗೆಯೇ ಮನೆ ಬಿಟ್ಟಿದ್ದೆ. ಖಾತೆ ಮತ್ತೆ ಬದಲಾದದ್ದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದರು.

ಸುತ್ತೂರು ಶ್ರೀ ಜತೆ ಮಾತುಕತೆ: ಸಚಿವ ಮಾಧುಸ್ವಾಮಿ ಮತ್ತು ಶಾಸಕ ಮುನಿರತ್ನ ಅವರು ಶುಕ್ರವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಒಂದು ಗಂಟೆಗೂ ಹೆಚ್ಚು ಹೊತ್ತು ಚರ್ಚಿಸಿದರು.

ಈ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ನಾನು ಮಠದ ಭಕ್ತ. ರಾಜಕಾರಣಿಯಾಗಿ ಇಲ್ಲಿಗೆ ಬಂದಿಲ್ಲ. ಜೆಎಸ್‌ಎಸ್‌ ಕಾಲೇಜಿನಲ್ಲಿ ಪದವಿ ಪಡೆದ ದಿನದಿಂದಲೂ ಮಠಕ್ಕೆ ಬರುತ್ತಿರುತ್ತೇನೆ. ಪ್ರತಿ ಬಾರಿ ಬಂದಾಗಲೂ ಸ್ವಾಮೀಜಿ ಜತೆ ತುಂಬಾ ಹೊತ್ತು ಮಾತನಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.