ಮೈಸೂರು: ‘ಮುಡಾದಲ್ಲಿ ವಿರೋಧ ಪಕ್ಷದ ನಾಯಕರಿಗೆ ನಿವೇಶನ ಹಂಚಿಕೆ ಮಾಡಿರುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪಟ್ಟಿ ಬಿಡುಗಡೆ ಮಾಡಿದ್ದು, ಆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಳಪಡಿಸಬೇಕು’ ಎಂದು ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಒತ್ತಾಯಿಸಿದರು.
‘ಸಚಿವರು ಆರೋಪಿಸಿರುವಂತೆ ನಾನು ಹಾಗೂ ನನ್ನ ಕುಟುಂಬ ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿಲ್ಲ. ನಿವೇಶನಕ್ಕಾಗಿ ಶಿಫಾರಸು ಮಾಡಿಲ್ಲ. ಅದಕ್ಕೆ ದಾಖಲೆ ಕೊಟ್ಟರೆ ಅಷ್ಟೂ ನಿವೇಶನಗಳನ್ನು ಹಿಂತಿರುಗಿಸುತ್ತೇವೆ. ರೇವಣ್ಣ ಪ್ರಕರಣದಲ್ಲಿ ಒಂದೇ ದಿನದಲ್ಲಿ ಎಸ್‌ಐಟಿ ರಚಿಸಿದಂತೆ ಈ ಪ್ರಕರಣದಲ್ಲೂ ತ್ವರಿತ ತನಿಖೆ ನಡೆಸಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
'ಮಾನನಷ್ಟ ಮೊಕದ್ದಮೆ ಎಚ್ಚರಿಕೆ': ‘ಮುಡಾದಿಂದ ನಾನು ಯಾವುದೇ ನಿವೇಶನ ಪಡೆದಿಲ್ಲ. ಆರೋಪ ಮಾಡಿರುವ ಸಚಿವ ಭೈರತಿ ಸುರೇಶ್‌ಗೆ ಪತ್ರ ಬರೆದು, ನನ್ನ ಹೆಸರಿಗೆ ಕಳಂಕ ತಂದಿರುವುದಕ್ಕೆ ಕಾರಣ ಕೇಳುತ್ತೇನೆ. ಒಂದು ವಾರದೊಳಗೆ ಉತ್ತರಿಸದಿದ್ದರೆ, ಮಾನನಷ್ಟ ಮೊಕದ್ದಮೆ ಹೂಡುವೆ’ ಎಂದು ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಸಿದರು.
‘ಸಚಿವರು ಪ್ರಾಮಾಣಿಕವಾಗಿ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ ಪ್ರಮಾದವಾಗುತ್ತಿರಲಿಲ್ಲ. ಸಿದ್ದರಾಮಯ್ಯ ಅಂತಹವರು ಸುಳಿಯಲ್ಲಿ ಸಿಲುಕುತ್ತಿರಲಿಲ್ಲ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.