ಮೈಸೂರು: ‘ಧರ್ಮಸ್ಥಳ ಕ್ಷೇತ್ರಕ್ಕೆ ಜೆಡಿಎಸ್ ಮುಖಂಡರು ಕಾರಿನ ಮೂಲಕ ತೆರಳಲಿದ್ದು, ಕ್ಷೇತ್ರಕ್ಕೆ ಅಪಚಾರ ಬಯಸಿದವರಿಗೆ ಶಿಕ್ಷೆಯಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಲಿದ್ದೇವೆ’ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸೋಮವಾರ ಮುಂಜಾನೆ ಸಾ.ರಾ. ಕನ್ವೆನ್ಷನ್ ಹಾಲ್ ಮುಂಭಾಗದಿಂದ ಯಾತ್ರೆ ಹೊರಡಲಿದ್ದು, ಮಂಡ್ಯದಿಂದ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ 200 ಕಾರುಗಳಲ್ಲಿ ಬಂದು ಇಲವಾಲದ ಬಳಿ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ. ಕೆ.ಆರ್. ನಗರ, ಹರದನಹಳ್ಳಿ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುತ್ತೇವೆ’ ಎಂದರು.
‘ದೇಶದಲ್ಲಿ ವ್ಯವಸ್ಥಿತವಾಗಿ ಧಾರ್ಮಿಕ ಕಾರ್ಯಕ್ರಮ, ದಾಸೋಹ, ಶಿಕ್ಷಣ, ಮಹಿಳೆಯರು ಸ್ವಾವಲಂಬಿಗಳಾಗಲು ಉತ್ತೇಜಿಸುವ ಕಾರ್ಯಕ್ರಮ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಕಾರ ನೀಡಿರುವ ಧರ್ಮಸ್ಥಳದ ಹೆಸರನ್ನು ಹಾಳುಗೆಡವಲು ಅಪಪ್ರಚಾರ ಮಾಡಲಾಗಿದ್ದು, ಇದರ ಹಿಂದಿರುವ ಮೂಲದ ಬಗ್ಗೆ ತಿಳಿದು ಅವರಿಗೆ ಶಿಕ್ಷೆ ನೀಡಬೇಕು. ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧ ಕಾಯ್ದೆ ರೂಪುಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಸಿದ್ದರಾಮಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರೂ ಉತ್ತಮ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಒಳ್ಳೆಯ ಕೆಲಸಕ್ಕಿಂತ ಜನರಿಗೆ ಹೊರೆಯಾಗುವಂತೆ ಮಾಡುತ್ತಿದ್ದಾರೆ. ಕೆ.ಆರ್ ನಗರ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಕೋಟಿಗಟ್ಟಲೇ ಹಣ ನೀಡಿದ್ದೇವೆ ಎನ್ನುತ್ತಾರೆ. ಆದರೆ ರೈತರಿಗೆ ನೀರು ಒದಗಿಸಲು ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಬಿಡುಗಡೆಯಾದ ₹25 ಕೋಟಿಯನ್ನು, ಯಾವುದೋ ತಡೆಗೋಡೆ ನಿರ್ಮಾಣಕ್ಕೆ ಬಳಸುತ್ತಿದ್ದಾರೆ’ ಎಂದು ದೂರಿದರು.
‘ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳುತ್ತಾರೆ. ಆದರೆ ನನ್ನ ಕ್ಷೇತ್ರದ ನಾಡ ಕಚೇರಿಗಳಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್‌ಗಳಿಗೆ ಎರಡೂವರೆ ವರ್ಷದಿಂದ ವೇತನ ಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಮಂಜೂರಾಗಿದ್ದ ಮನೆಗಳಿಗೆ ಇನ್ನು 2, 3ನೇ ಬಿಲ್ ಬಿಡುಗಡೆ ಆಗಿಲ್ಲ. ಕೇಂದ್ರ ಸರ್ಕಾರದಿಂದ ಮಾತ್ರ ಮನೆಗಳನ್ನು ನೀಡಲಾಗಿದೆ. ಹೀಗಿದ್ದಾಗ ಕೆಆರ್‌ಎಸ್ ಕಟ್ಟಲು ಚಿನ್ನಾಭರಣ ಗಿರವಿಯಿಟ್ಟ ಕುಟುಂಬವನ್ನು, ಬಡಬಗ್ಗರ ಆಸ್ತಿ ಗಿರವಿ ಇಟ್ಟು ₹7 ಸಾವಿರ ಕೋಟಿ ಸಾಲ ಮಾಡುವವರಿಗೆ ಹೋಲಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಜೆಡಿಎಸ್ ಸ್ಥಾನ ಕುಸಿಯಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾವು ಅರಮನೆ ಸಿಕ್ಕಿತೆಂದು ಇದ್ದ ಮನೆ ದೂರುವವರಲ್ಲ. ದೇವೇಗೌಡ ಅವರು ನಂಬಿಕಸ್ಥ ಬೇಕು ಎಂದು ಹಣಕಾಸು ಸಚಿವ ಸ್ಥಾನ ನೀಡಿದ್ದರು ಎಂದು ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದರು. ಹಾಗಿದ್ದರೆ ಆ ಖಾತೆಯನ್ನು ಏಕೆ ಉಳಿಸಿಕೊಂಡಿದ್ದಾರೆ. ನಿಮ್ಮ ಪಕ್ಷದ ಚುನಾಯಿತ ಪ್ರತಿನಿಧಿಗಳ ಬಗ್ಗೆ ನಿಮಗೆ ನಂಬಿಕೆಯಿಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ದೇವೇಗೌಡ ಅವರಿಗಿರುವ ವಿಶಾಲ ಭಾವನೆ ನಿಮಗಿಲ್ಲ’ ಎಂದು ದೂರಿದರು.
ಮಾಜಿ ಮೇಯರ್ ಆರ್. ಲಿಂಗಪ್ಪ, ನಗರ ಪಾಲಿಕೆ ಮಾಜಿ ಸದಸ್ಯರಾದ ಭಾಗ್ಯ ಮಹದೇಶ್, ಅಶ್ವಿನಿ, ಶೋಭಾ, ಜಿಪಂ ಮಾಜಿ ಸದಸ್ಯ ದ್ವಾರಕೀಶ್, ಮುಖಂಡರಾದ ಕುಮಾರಸ್ವಾಮಿ, ಅನಂತು, ರಾಮು, ರಿಜ್ವಾನ್, ಪ್ರಕಾಶ್ ಪ್ರಿಯದರ್ಶನ್ ಇದ್ದರು.
‘ಪೊಲೀಸ್ ಇಲಾಖೆಯಲ್ಲಿ ಕೌನ್ಸೆಲಿಂಗ್ ನಡೆಸಿ’
‘ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಜಾತಿ ತಾರತಮ್ಯ ವರ್ಗಾವಣೆಗೆ ಹಣ ಬೇಡಿಕೆಯಿಡುವ ಪರಿಸ್ಥಿತಿ ಇದೆ. ಗೃಹಸಚಿವರು ಐಪಿಎಸ್ ಬಿಟ್ಟು ಉಳಿದವರಿಗೆ ಕೌನ್ಸೆಲಿಂಗ್ ಮಾಡಿ ವರ್ಗಾವಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು. ಠಾಣೆಯೊಂದಕ್ಕೆ ₹15 ಲಕ್ಷದಿಂದ ₹1 ಕೋಟಿ ನೀಡಿ ವರ್ಗಾವಣೆ ಮಾಡಿಸಿಕೊಳ್ಳಬೇಕಿದೆ. ಮೈಸೂರಿನಲ್ಲೂ ₹45 ಲಕ್ಷದಿಂದ ₹ 50 ಲಕ್ಷಕ್ಕೆ ವರ್ಗಾವಣೆ ನಡೆಯುತ್ತಿದ್ದು. ಗೃಹ ಸಚಿವರು ಕೇಳಿದರೆ ದಾಖಲೆ ಒದಗಿಸುವೆ’ ಎಂದು ಮಹೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.