ADVERTISEMENT

ಸ್ವಾವಲಂಬಿ ಜೀವನಕ್ಕೆ ನೌಕರಿ ಅವಶ್ಯ: ಎನ್.ಸುಬ್ರಹ್ಮಣ್ಯ

ಅಂಗವಿಕಲರಿಗೆ ಉದ್ಯೋಗ ಮೇಳ; 383 ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:12 IST
Last Updated 11 ಆಗಸ್ಟ್ 2024, 16:12 IST
ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಜೆಎಸ್‌ಎಸ್‌ ಅಂಗವಿಕಲರ ಪಾಲಿಟೆಕ್ನಿಕ್ ಸಹಯೋಗದಲ್ಲಿ ಅಂಗವಿಕಲರಿಗಾಗಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಎನ್.ಸುಬ್ರಹ್ಮಣ್ಯ ಉದ್ಘಾಟಿಸಿದರು
ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಜೆಎಸ್‌ಎಸ್‌ ಅಂಗವಿಕಲರ ಪಾಲಿಟೆಕ್ನಿಕ್ ಸಹಯೋಗದಲ್ಲಿ ಅಂಗವಿಕಲರಿಗಾಗಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಎನ್.ಸುಬ್ರಹ್ಮಣ್ಯ ಉದ್ಘಾಟಿಸಿದರು   

ಮೈಸೂರು: ‘ಸ್ವಾವಲಂಬಿ ಜೀವನಕ್ಕೆ ಉದ್ಯೋಗ ಪ್ರಮುಖ ಅವಶ್ಯವಾಗಿದೆ’ ಎಂದು ಲಯನ್ಸ್ ಇಂಟರ್‌ನ್ಯಾಷನಲ್‌ ಜಿಲ್ಲಾ ಗವರ್ನರ್ ಎನ್.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ನಗರದ ಜೆ.ಎಸ್.ಎಸ್. ಅಂಗವಿಕಲರ ಪಾಲಿಟೆಕ್ನಿಕ್ ಆವರಣದಲ್ಲಿ ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 109ನೇ ಜಯಂತಿ ಮಹೋತ್ಸವ ಅಂಗವಾಗಿ ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಜೆಎಸ್‌ಎಸ್‌ ಅಂಗವಿಕಲರ ಪಾಲಿಟೆಕ್ನಿಕ್ ಸಹಯೋಗದಲ್ಲಿ ಅಂಗವಿಕಲರಿಗಾಗಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

‘ಉದ್ಯೋಗ ಗಿಟ್ಟಿಸಿಕೊಳ್ಳಲು ಅರ್ಹತೆ ಜೊತೆಗೆ ಆ ಕೆಲಸ ಮಾಡುವ ಆತ್ಮವಿಶ್ವಾಸ ಹೊಂದಿರಬೇಕು. ಈ ನಿಟ್ಟಿನಲ್ಲಿ ಇಂತಹ ಮೇಳಗಳು ಸಹಕಾರಿ ಆಗುತ್ತವೆ’ ಎಂದರು.

ADVERTISEMENT

ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಉದ್ಯೋಗ ಕೋಶದ ಮುಖ್ಯಸ್ಥ ಕೆ.ಸತೀಶ್ ಮಾತನಾಡಿ, ‘ಬದಲಾಗಿರುವ ಈಗಿನ ಸಾಮಾಜಿಕ ಸನ್ನಿವೇಶದಲ್ಲಿ ಕೆಲಸ ಮಾಡುವ ಮನಸ್ಸಿದ್ದರೆ ಅನೇಕ ಅವಕಾಶಗಳು ದೊರಕುತ್ತವೆ. ಅಲ್ಲದೆ ಉದ್ಯೋಗ ಮೇಳದಲ್ಲಿ ಭಾಗವಹಿಸುವುದು ಅಸಾಧಾರಣ ಪ್ರತಿಭೆಯನ್ನು ಸಕ್ರಿಯವಾಗಿ ಹುಡುಕುತ್ತಿರುವ ಪ್ರಮುಖ ಕಂಪನಿಗಳೊಂದಿಗೆ ತೊಡಗಿಸಿಕೊಳ್ಳಲು ಅನನ್ಯ ಅವಕಾಶ ದೊರೆಯುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಇಳಂಗೋವನ್, ‘ಅಂಗವೈಕಲ್ಯ ಶಾಪವಲ್ಲ. ಅದು ವರವಾಗಿದ್ದು, ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

ಮೈಸೂರು ಕಿವುಡರ ಸಂಘದ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿದರು. ಸಮರ್ಥನಂ ಅಂಗವಿಕಲರ ಸಂಸ್ಥೆ ಎಲ್‌ಆರ್‌ಸಿ ವಿಭಾಗದ ಮುಖ್ಯಸ್ಥ ಸುಭಾಷ್‌ ಚಂದ್ರ, ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಕೆ.ಕುಶಲ್, ಸಮರ್ಥನಂ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು, ಸತೀಶ್ ನಾಯರ್, ವೀರಭದ್ರ ಪಾಟೇಲ, ಸ್ವರ್ಶ ಪಾಲ್ಗೊಂಡಿದ್ದರು.

ಮೇಳದಲ್ಲಿ 383 ಅಭ್ಯರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 114 ಮಂದಿ ಸ್ಥಳದಲ್ಲೇ ಆಯ್ಕೆಯಾದರು. 82 ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾದರು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.