ಮೈಸೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉದ್ಯೋಗ ಘಟಕ, ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರ (ಸಿಐಕ್ಯೂಎ) ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 2,068 ಮಂದಿ ಉದ್ಯೋಗ ಪಡೆದು ಸಂತಸ ಪಟ್ಟರು.
ರಾಜ್ಯದ 78 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದು, ಆರೋಗ್ಯ, ಶೈಕ್ಷಣಿಕ, ಐಟಿ– ಬಿಟಿ ಕಂಪನಿಗಳು ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿದವು. ಶನಿವಾರ ಬೆಳಿಗ್ಗೆಯಿಂದಲೇ ಯುವಕ, ಯುವತಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಆನ್‌ಲೈನ್ ಮೂಲಕ 4,100 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆದ ಮೇಳದಲ್ಲಿ 1,889 ಯುವಕರು ಹಾಗೂ 1,351 ಯುವತಿಯರು ಸೇರಿದಂತೆ ಒಟ್ಟು 3,240 ಆಕಾಂಕ್ಷಿಗಳು ಸಂದರ್ಶನ ನೀಡಿದರು.
ಉದ್ಯೋಗದ ಕನಸು ಹೊತ್ತು ಬಂದ ಸಾವಿರಾರು ಯುವ ಮನಸ್ಸುಗಳು ತಮ್ಮ ಅರ್ಹತೆಗೊಪ್ಪುವ ಕಂಪನಿಗಳ ಹುಡುಕಾಟದಲ್ಲಿ ತೊಡಗಿದರು. ಕುತೂಹಲ, ಗೊಂದಲದಲ್ಲಿದ್ದವರಿಗೆ ಆಯೋಜಕರು ಸೂಕ್ತ ಮಾರ್ಗದರ್ಶನ ನೀಡಿ ಸಂದರ್ಶನಕ್ಕೆ ಕಳಿಸಿದರು. ಬ್ಯಾಂಕಿಂಗ್ ವಿಭಾಗದಲ್ಲಿ ಹೆಚ್ಚಿನ ಆಕಾಂಕ್ಷಿಗಳು ಕಾಣಿಸಿಕೊಂಡರು. ಈಗಷ್ಟೇ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಕಷ್ಟಗಳನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಕಂಡುಬಂತು.
1,287 ಯುವಕರು ಹಾಗೂ 781 ಯುವತಿಯರಿಗೆ ವಿವಿಧ ಕಂಪನಿಗಳು ಆಹ್ವಾನ ಪತ್ರ ನೀಡಿದವು. 439 ಉದ್ಯೋಗಾಕಾಂಕ್ಷಿಗಳನ್ನು ತರಬೇತಿಗೆ ಅವಕಾಶ ನೀಡಿ ಆಹ್ವಾನಿಸಿದರು. ವಿಜ್ಞಾನ ಭವನ, ನಳ, ಕಾವೇರಿ ಸಭಾಂಗಣಗಳಲ್ಲಿ ಸಂದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲೇ ನೋಂದಣಿ ಮಾಡಲು ವಿಜ್ಞಾನ ಭವನದ ಮುಂಭಾಗ ಎರಡು ಕೌಂಟರ್ ತೆರೆಯಲಾಗಿತ್ತು. ಎನ್‌ಸಿಸಿ ಕೆಡೆಟ್‌ಗಳು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದಲ್ಲಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಬರೋಡ ಬ್ಯಾಂಕ್‌ನಲ್ಲಿ ಡೆವಲಪ್‌ಮೆಂಟ್ ಅಧಿಕಾರಿಗಳಾಗಿ ಆಯ್ಕೆಯಾದವರಿಗೆ ಕಂಪನಿಯ ಆಹ್ವಾನ ಪತ್ರ ವಿತರಿಸಲಾಯಿತು.
‘ಸುಮಾರು ₹8 ಸಾವಿರದಿಂದ ₹25 ಸಾವಿರದವರೆಗಿನ ವೇತನವುಳ್ಳ ಉದ್ಯೋಗಗಳನ್ನು ಅಭ್ಯರ್ಥಿಗಳು ಪಡೆದಿದ್ದಾರೆ. ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಉದ್ಯೋಗ ಘಟಕದ ಉದ್ಯೋಗಾಧಿಕಾರಿ ಪ್ರೊ.ಆರ್.ಎಚ್.ಪವಿತ್ರಾ ತಿಳಿಸಿದರು.
ಘಟಿಕೋತ್ಸವ ಭವನದಲ್ಲಿ ಬೆಳಿಗ್ಗೆ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ‘ಗುಣಮಟ್ಟದ ಶಿಕ್ಷಣ ಕೌಶಲ ಇದ್ದಲ್ಲಿ ನಿರುದ್ಯೋಗದ ಮಾತಿಲ್ಲ. ಕಂಪನಿಗಳಲ್ಲಿ ಉದ್ಯೋಗ ಅವಕಾಶಗಳು ಹೇರಳವಾಗಿವೆ. ಆದರೆ ಅವರ ಅಪೇಕ್ಷಿತ ಅರ್ಹತೆಯುಳ್ಳವರ ಸಂಖ್ಯೆ ಕಡಿಮೆಯಿದೆ’ ಎಂದರು. ‘ವಿದ್ಯಾರ್ಥಿಗಳಲ್ಲಿ ಆಯಾ ಸಂದರ್ಭದ ಗಂಭೀರತೆ ಅರಿತು ವರ್ತಿಸುವ ಬುದ್ಧಿವಂತಿಕೆ ಇರಬೇಕು. ಈ ಕಾರಣದಿಂದ ತರಗತಿಯಲ್ಲಿ ಸಾಧಾರಣ ಅಂಕ ಪಡೆದವರು ಉತ್ತಮ ಉದ್ಯೋಗ ಪಡೆಯುತ್ತಿದ್ದು ಅಂಕ ಗಳಿಸಿದವರು ಹಿಂದೆ ಉಳಿಯುತ್ತಿದ್ದಾರೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಶಿಕ್ಷಕರು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್ ಶೈಕ್ಷಣಿಕ ಮುಖ್ಯಸ್ಥ ಪ್ರೊ.ರಾಮನಾಥಂ ನಾಯ್ಡು ಅಧ್ಯಯನ ಕೇಂದ್ರದ ಮುಖ್ಯಸ್ಥ ಎನ್.ಆರ್.ಚಂದ್ರೇಗೌಡ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ನಿರ್ದೇಶಕಿ ಡಿ.ಎಂ.ರಾಣಿ ಸಿಐಕ್ಯೂಎ ನಿರ್ದೇಶಕ ಪ್ರೊ.ಎಸ್.ನಿರಂಜನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.