ADVERTISEMENT

ಜ್ಯೋತಿಷದ ಪುನರ್ ವಿಮರ್ಶೆ ಅಗತ್ಯ: ಪೇಜಾವರ ಶ್ರೀ

‘ಜ್ಯೋತಿಷ ದರ್ಶನ’ ರಾಷ್ಟ್ರೀಯ ಸಮ್ಮೇಳನ ಆಯೋಜನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 5:06 IST
Last Updated 10 ಸೆಪ್ಟೆಂಬರ್ 2023, 5:06 IST
ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದರು. ನವನೀತ್‌ ಕೌಶಿಕ್‌, ಗಾಯತ್ರಿದೇವಿ ವಾಸುದೇವ್, ಎ.ಬಿ. ಶುಕ್ಲ, ನರಸಿಂಹ ಆಸ್ಲೆ ಇದ್ದರು
ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದರು. ನವನೀತ್‌ ಕೌಶಿಕ್‌, ಗಾಯತ್ರಿದೇವಿ ವಾಸುದೇವ್, ಎ.ಬಿ. ಶುಕ್ಲ, ನರಸಿಂಹ ಆಸ್ಲೆ ಇದ್ದರು   

ಮೈಸೂರು: ದೇಶದಲ್ಲಿ ವಾಸ್ತು ಮತ್ತು ಜ್ಯೋತಿಷದ ಪುನರ್‌ ವಿಮರ್ಶೆ ಅಗತ್ಯವಿದ್ದು, ಅದಕ್ಕೆ ಈ ಕಾರ್ಯಕ್ರಮ ವೇದಿಕೆಯಾಗಲಿ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿಸಿದರು.

ನಗರದಲ್ಲಿ ಶನಿವಾರ ಭಾರತೀಯ ಜ್ಯೋತಿಷ ವಿಜ್ಞಾನಗಳ ಪರಿಷತ್‌ ಆಯೋಜಿಸಿದ್ದ ‘ಜ್ಯೋತಿಷ ದರ್ಶನ’ ಒಂದು ದಿನದ ರಾಷ್ಟ್ರೀಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಭವಿಷ್ಯ ಶಾಸ್ತ್ರವು ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು. ಋಷಿಮುನಿಗಳು ನಿಂತಲ್ಲಿಯೇ ಯಂತ್ರ–ಮಂತ್ರಗಳಿಂದ ಗ್ರಹ, ನಕ್ಷತ್ರಗಳ ಪರಿಜ್ಞಾನ ಪಡೆದಿದ್ದರು. ಇಂದು ನಾವು ಚಂದ್ರಲೋಕ, ಸೂರ್ಯ ಲೋಕವನ್ನು ತಲುಪುವ ಪ್ರಯತ್ನದಲ್ಲಿ ಇದ್ದೇವೆ ಎಂದರು.

ಮಂಡಳಿಯ ರಾಷ್ಟ್ರೀಯ ಉಪಾಧ್ಯಕ್ಷ ಸೌಮ್ಯಕುಮಾರ್ ಮಾತನಾಡಿ, ಮೈಸೂರು ಜ್ಯೋತಿಷ ಶಾಸ್ತ್ರಕ್ಕೆ ಆಗಿನಿಂದಲೂ ಆದ್ಯತೆ ನೀಡುತ್ತ ಬಂದಿದೆ. ನಾಲ್ಕು ವೇದಗಳನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲೂ ಮುದ್ರಿಸಿದ ಕೀರ್ತಿ ಇಲ್ಲಿನ ಮಹಾರಾಜರಿಗೆ ಸಲ್ಲುತ್ತದೆ. ಅನೇಕ ಮಹತ್ವದ ಹಸ್ತಪ್ರತಿಗಳನ್ನು ಇಲ್ಲಿ ಸಂರಕ್ಷಿಸುತ್ತ ಬರಲಾಗಿದೆ. ಅದಕ್ಕೆ ಇಲ್ಲಿನ ಅರಸರ ಪ್ರೋತ್ಸಾಹ ಮಹತ್ವದ್ದಾಗಿದೆ ಎಂದು ನುಡಿದರು.

ADVERTISEMENT

ಇಂದಿನ ಜ್ಯೋತಿಷ ದರ್ಶನ ಕಾರ್ಯಕ್ರಮವು ‘ಅನುರಕ್ತ ಗ್ರಹ’ ವಿಷಯದ ಕುರಿತು ಹೆಚ್ಚು ಬೆಳಕು ಚೆಲ್ಲಲಿದೆ. ನಾವು ಪೂರ್ವಜನ್ಮದಲ್ಲಿ ಯಾವುದಕ್ಕೆ ಹೆಚ್ಚು ಅನುರಕ್ತರಾಗಿದ್ದೆವು ಎಂಬುದನ್ನು ಗುರುತಿಸುವ ಪ್ರಯತ್ನಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರಿಸಲಿದ್ದಾರೆ ಎಂದರು.

ಐಸಿಎಎಸ್‌ ರಾಷ್ಟ್ರೀಯ ಅಧ್ಯಕ್ಷ ಎ.ಬಿ. ಶುಕ್ಲ, ಮೈಸೂರು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ, ಸಂಪನ್ಮೂಲ ವ್ಯಕ್ತಿಗಳಾದ ನರಸಿಂಹ ಆಸ್ಲೆ, ಗಾಯತ್ರಿದೇವಿ ವಾಸುದೇವ್‌, ನವನೀತ್‌ ಕೌಶಿಕ್‌, ರೇವತಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.