ADVERTISEMENT

ಎಪಿಎಂಸಿ ಅಧ್ಯಕ್ಷರಾಗಿ ಪ್ರಭುಸ್ವಾಮಿ ಆಯ್ಕೆ

ಲಾಟರಿ ಮೂಲಕ ಕಾಂಗ್ರೆಸ್‌ಗೆ ಒಲಿದ ಅದೃಷ್ಟ; ಜೆಡಿಎಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 14:37 IST
Last Updated 27 ಅಕ್ಟೋಬರ್ 2018, 14:37 IST
ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಪ್ರಭುಸ್ವಾಮಿ (ಬಲದಿಂದ ಎರಡನೆಯವರು) ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಚಿಕ್ಕಜವರಯ್ಯ ಅವರನ್ನು ಅಭಿನಂದಿಸಲಾಯಿತು
ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಪ್ರಭುಸ್ವಾಮಿ (ಬಲದಿಂದ ಎರಡನೆಯವರು) ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಚಿಕ್ಕಜವರಯ್ಯ ಅವರನ್ನು ಅಭಿನಂದಿಸಲಾಯಿತು   

ಮೈಸೂರು: ಕಾಂಗ್ರೆಸ್‌ನ ಕೆ.ಪ್ರಭುಸ್ವಾಮಿ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ಮತ್ತು ಜೆಡಿಎಸ್‌ನ ಚಿಕ್ಕಜವರಯ್ಯ (ಜವರಪ್ಪ) ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಮೈಸೂರು-ನಂಜನಗೂಡು ರಸ್ತೆಯ ರಿಂಗ್ ರಸ್ತೆ ಜಂಕ್ಷನ್ ಬಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಶನಿವಾರ ನಡೆದ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಪ್ರಭುಸ್ವಾಮಿ ಮತ್ತು ಜೆಡಿಎಸ್‌ನ ಎಸ್‌.ಸಿದ್ದೇಗೌಡ ಅವರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಇಬ್ಬರೂ ತಲಾ ಎಂಟು ಮತಗಳನ್ನು ಪಡೆದು ಸಮಬಲ ಸಾಧಿಸಿದರು.

ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಟಿ. ರಮೇಶ್ ಬಾಬು ಅವರು, ಲಾಟರಿ ಎತ್ತುವ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವುದಾಗಿ ಪ್ರಕಟಸಿದರು. ಲಾಟರಿ ಎತ್ತುವ ವಿಧಾನದಲ್ಲಿ ಪ್ರಭುಸ್ವಾಮಿ ಅವರಿಗೆ ಅದೃಷ್ಟ ಒಲಿಯಿತು.

ADVERTISEMENT

ಉಪಾಧ್ಯಕ್ಷ ಸ್ಥಾನಕ್ಕೆ ಜವರಪ್ಪ ಮತ್ತು ಕಾಂಗ್ರೆಸ್‌ನ ಸಾವಿತ್ರಮ್ಮ ಸ್ಪರ್ಧಿಸಿದ್ದರು. ಜವರಪ್ಪ 9 ಮತಗಳನ್ನು ಪಡೆದು ಆಯ್ಕೆಯಾದರೆ, ಸಾವಿತ್ರಮ್ಮ 7 ಮತಗಳನ್ನು ಗಳಿಸಿದರು.

ಅಡ್ಡ ಮತದಾನ: 13 ಚುನಾಯಿತ ಸದಸ್ಯರು ಮತ್ತು ಮೂವರು ನಾಮನಿರ್ದೇಶಿತ ಸದಸ್ಯರು ಒಳಗೊಂಡಂತೆ ಎಪಿಎಂಸಿನಲ್ಲಿ ಒಟ್ಟು 16 ಸದಸ್ಯರಿದ್ದಾರೆ. ಇದರಲ್ಲಿ 9 ಸದಸ್ಯರು ಜೆಡಿಎಸ್‌ ಪರ ಹಾಗೂ 7 ಸದಸ್ಯರು ಕಾಂಗ್ರೆಸ್‌ ಪರವಾಗಿದ್ದರು. ಆದರೆ ಜೆಡಿಎಸ್‌ನ ಸದಸ್ಯರೊಬ್ಬರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದರಿಂದ 8–8 ರಲ್ಲಿ ಸಮಬಲ ಕಂಡುಬಂತು. ಅಂತಿಮವಾಗಿ ಲಾಟರಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಿತು.

ಕಳೆದ ಸಲ ಕಾಂಗ್ರೆಸ್‌ ಸದಸ್ಯ ಅಡ್ಡ ಮತ ಮಾಡಿದ್ದರಿಂದ ಜೆಡಿಎಸ್‌ನ ಸಿದ್ದೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮತ್ತೆ ಆಯ್ಕೆ ಬಯಸಿದ್ದ ಅವರಿಗೆ ಈ ಬಾರಿ ಅದೃಷ್ಟ ಕೈಕೊಟ್ಟಿತು.

‘ರಾಜಕಾರಣದಲ್ಲಿ ಯಾರನ್ನೇ ಆಗಲಿ ನಂಬೋದು ಕಷ್ಟ. ಜೆಡಿಎಸ್‌ನ ಯಾರೋ ಉಲ್ಟಾ ಹೊಡೆದಿದ್ದಾರೆ. ಫಲಿತಾಂಶ ಬಂದಾಗ ಸಮಬಲ ಕಂಡುಬಂದರೂ, ಅಂತಿಮವಾಗಿ ಅದೃಷ್ಟ ಅವರಿಗೆ ಒಲಿದಿದೆ. ಕಳೆದ ಬಾರಿ ಕಾಂಗ್ರೆಸ್ ಹೆಚ್ಚು ಸದಸ್ಯ ಬಲ ಹೊಂದಿದ್ದರೂ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆ’ ಎಂದು ಪರಾಜಿತ ಅಭ್ಯರ್ಥಿ ಸಿದ್ದೇಗೌಡ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.