ADVERTISEMENT

ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಜುಲೈ 25ರಿಂದ ನೀರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 14:17 IST
Last Updated 12 ಜುಲೈ 2025, 14:17 IST
ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ (ಸಂಗ್ರಹ ಚಿತ್ರ)
ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ (ಸಂಗ್ರಹ ಚಿತ್ರ)   

ಮೈಸೂರು: ‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭತ್ತ ಮೊದಲಾದ ಬೆಳೆಗಳಿಗೆ ಅನುಕೂಲ ಆಗುವಂತೆ ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ‘ಕಟ್ಟು ನೀರು ಪದ್ಧತಿ’ (ತಿಂಗಳಲ್ಲಿ 15 ದಿನ)ಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಇಲ್ಲಿನ ಕಾಡಾದಲ್ಲಿ ಶನಿವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ‘ಕಬಿನಿ ನೀರಾವರಿ ಸಲಹಾ ಸಮಿತಿ’ ಸಭೆಯ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಜುಲೈ 15ರಿಂದ ಕೆರೆ–ಕಟ್ಟೆಗಳಿಗೆ ಹಾಗೂ ಜುಲೈ 25ರಿಂದ ‘ಕಟ್ಟು ಪದ್ಧತಿ’ಯಲ್ಲಿ ನಾಲಾ ಜಾಲಗಳಲ್ಲಿ ನೀರು ಹರಿಸಲಾಗುವುದು. ಹೂಳು ಹಾಗೂ ಗಿಡಗಳನ್ನು ತೆರವುಗೊಳಿಸಿ ನಂತರ ನೀರು ಹರಿಸಲು ಅಗತ್ಯ ಕ್ರಮ ವಹಿಸಬೇಕು. ನಾಲೆಗಳ ಕೊನೆ ಭಾಗದವರೆಗೂ ತಲುಪುವಂತೆ ನಿರ್ವಹಿಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದರು.

ADVERTISEMENT

ಸಭೆಯಲ್ಲಿ: ‘ಕಬಿನಿ ಜಲಾಶಯದಲ್ಲಿ 18.36 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕೃಷಿಗೆ ಬಳಕೆಗೆ 8.54 ಟಿಎಂಸಿ ಅಡಿ ಬೇಕಾಗುತ್ತದೆ. ಕಬಿನಿ ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳ 1,08,060 ಎಕರೆ ಅಚ್ಚುಕಟ್ಟು ಪ್ರದೆಏಶಕ್ಕೆ ನೀರಾವರಿ ಒದಗಿಸಬೇಕಾಗಿದೆ. ಬಲ ಮತ್ತು ಎಡದಂಡೆ ನಾಲೆಗಳಲ್ಲಿ 2,360 ಕ್ಯೂಸೆಕ್‌, ಕುಡಿಯುವ ನೀರು ಮತ್ತು ಅಣೆಕಟ್ಟೆ ನಾಲೆಗೆ 800 ಕ್ಯೂಸೆಕ್‌ ನೀರನ್ನು 120 ದಿನಗಳ ಅವಧಿಗೆ ಹರಿಸಲು 33 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಸದ್ಯ, ಸರಾಸರಿ ಒಳಹರಿವು ಆಧಾರದ ಮೇರೆಗೆ ‘ಕಟ್ಟು ಪದ್ಧತಿ’ಯಲ್ಲಿ ನಾಲೆ ಮತ್ತು ಕೆರೆಗಳಿಗೆ ನೀರು ಹರಿಸಬಹುದು’ ಎಂದು ಕಬಿನಿ ಮತ್ತು ವರುಣ ನಾಲಾವೃತ್ತದ ಎಸ್‌ಇ ಕೆ.ಮಹೇಶ್ ಮಾಹಿತಿ ನೀಡಿದರು.

ಬಳಿಕ ಒಟ್ಟು 110 ದಿನಗಳಲ್ಲಿ 4 ಅವಧಿಯಲ್ಲಿ ನೀರು ಹರಿಸಲು ತೀರ್ಮಾನಿಸಲಾಯಿತು.

ಡಿಪಿಆರ್‌ ತಯಾರಿಗ ಸೂಚನೆ: ‘ಕಬಿನಿ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟು ಪ್ರದೇಶಗಳಿಗೆ ಹಾಗೂ ಬಿಟ್ಟು ಹೋಗಿರುವಲ್ಲಿಗೆ ನೀರು ಹರಿಸಲು ಶಾಶ್ವತ ಯೋಜನೆ ರೂಪಿಸಲು ಡಿಪಿಆರ್ ತಯಾರಿಸಲಾಗುತ್ತಿದೆ’ ಎಂದು ಸಚಿವ ಮಹದೇವಪ್ಪ ತಿಳಿಸಿದರು.

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಾಸಕರು, ಸಂಸದರು, ಅಧಿಕಾರಿಗಳ ಸಭೆ ನಡೆಸಿ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು. ಕಬಿನಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಗಳ ಕೊನೆಯ ಭಾಗಕ್ಕೆ ನೀರು ತಲುಪುವಂತೆ ಮಾಡಬೇಕಾಗಿದೆ. ತಾರಕ, ನುಗು ಜಲಾಶಯ ಬಳಸಿಕೊಳ್ಳಬೇಕು. ಆದ್ದರಿಂದ ವಿಸ್ತೃತವಾದ ಯೋಜನಾ ವರದಿ ತಯಾರಿಸುವಂತೆ ತಿಳಿಸಲಾಗಿದೆ’ ಎಂದರು.

‘ಕಬಿನಿ ಭಾಗಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಮತ್ತಷ್ಟು ಕೋರಿ ಸಿಎಂಗೆ ಮನವಿ ಸಲ್ಲಿಸೋಣ’ ಎಂದು ಹೇಳಿದರು.

ಮುಂಚಿತವಾಗಿಯೇ ಆಗಬೇಕಿತ್ತು: ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಕೊಳ್ಳೇಗಾಲ ಭಾಗದ ನಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತಲುಪುವಂತೆ ಮಾಡಬೇಕು. ಕಾವೇರಿ ನ್ಯಾಯಮಂಡಳಿ ತೀರ್ಪಿನಂತೆ ನಾವು ಕೃಷಿಗೆ ಹಂಚಿಕೆಯಾದ ನೀರು ಬಳಸಿಕೊಳ್ಳಬೇಕು. ಈ ವರ್ಷ ಹತ್ತು ಸಾವಿರ ಎಕರೆ ಪ್ರದೇಶವನ್ನು ನಾವು ನೀರಾವರಿ ವ್ಯಾಪ್ತಿಗೆ ತರುತ್ತಿದ್ದೇವೆ’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ‘ನೀರು ಹರಿಸುವ ಮುನ್ನ ನಾಲೆಗಳಲ್ಲಿನ ಹೂಳು ಮತ್ತು ಗಿಡಗಳನ್ನು ತೆರವುಗೊಳಿಸಬೇಕು. ಈ ಬಾರಿ ಕೆರೆ–ಕಟ್ಟೆಗಳಿಗೆ ಮುಂಚಿತವಾಗಿಯೇ ನೀರು ಹರಿಸಬೇಕಿತ್ತು’ ಎಂದರು.

ಶಾಸಕ ಎಂ.ಆರ್.ಮಂಜುನಾಥ್, ‘ಕಾಡಾ’ ಅಧ್ಯಕ್ಷ ಸಿ.ಮರಿಸ್ವಾಮಿ, ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿ.ಪಂ. ಸಿಇಒ ಎಸ್.ಯುಕೇಶ್ ಕುವಾರ್, ನಗರಪಾಲಿಕೆ ಆಯುಕ್ತ ಶೇಖ್‌ ತನ್ವೀರ್ ಆಸೀಫ್, ಎಸ್‌ಪಿ ಎನ್.ವಿಷ್ಣುವರ್ಧನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.