ಮೈಸೂರು: ‘ಕಬೀರ್ ದಾಸರ ದೋಹೆಗಳಲ್ಲಿ ಸಾಮಾಜಿಕ ಸ್ವಾತಂತ್ರ್ಯ ಪ್ರತಿಧ್ವನಿಸುತ್ತಿತ್ತು’ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರವು ಮಾನಸ ಗಂಗೋತ್ರಿಯ ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ‘ಅಂಬೇಡ್ಕರ್ ಅವರನ್ನು ಪ್ರಭಾವಿಸಿದ ಸಂತ ಕಬೀರ್ ದಾಸ್ ಚಿಂತನೆಗಳ ತಾತ್ವಿಕ ನೆಲೆಗಳು’ ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದರು.
‘ಆರ್ಥಿಕ ಸದೃಢತೆಗೆ ಕಾರಣವಾಗಬಲ್ಲ ಜ್ಞಾನಕ್ಕೆ ಗೌರವ ನೀಡದೆ, ಜಾತಿ ಆಧರಿಸಿ ಗೌರವ ನೀಡುತ್ತಿದ್ದ ಕಾಲದಲ್ಲಿ ಕಬೀರ್ ದಾಸ್ ಜನಿಸಿದ್ದರು. ಭಾರತದ ಇತಿಹಾಸದಲ್ಲಿ ಭಕ್ತಿ, ಆಧ್ಯಾತ್ಮ ಹಾಗೂ ಅನುಭಾವದ ಅಭಿಯಾನಗಳು ನಡೆದಿದ್ದು, ಕಬೀರ್ ದಾಸ್ ಅನುಭಾವದ ಅಭಿಯಾನದ ಮೂಲಕ ಪ್ರಚಲಿತರಾದರು’ ಎಂದರು.
‘ಜ್ಞಾನವು ಎರಡು ರೀತಿಯಲ್ಲಿ ವ್ಯಕ್ತವಾಗುತ್ತದೆ. ಭಾಷೆ, ಅಕ್ಷರದ ಮೂಲಕ ಒಂದು ರೀತಿಯಾದರೆ, ಕರ್ತವ್ಯದ ಅನುಭವದ ಜ್ಞಾನ ಇನ್ನೊಂದೆಡೆ. ವಿಶೇಷವಾದ ಶಕ್ತಿ ನಮ್ಮೊಳಗೆ ಇದೆ. ಕಾಯಕದ ಮೂಲಕ ಅದನ್ನು ಪಡೆಯಬಹುದು ಎಂಬುದನ್ನು ಕಬೀರ್ ದಾಸ್ ಪ್ರತಿಪಾದಿಸಿದರು. ಶ್ರಮಕ್ಕೆ ಘನತೆ ದೊರೆಯಬೇಕು ಹಾಗೂ ಸಾಮಾಜಿಕ ಸ್ವಾತಂತ್ರ್ಯ ದೊರೆಯಬೇಕು ಎಂಬುದು ಅವರ ಉದ್ದೇಶವಾಗಿತ್ತು’ ಎಂದು ಹೇಳಿದರು.
‘ಜಾತಿ ವ್ಯವಸ್ಥೆ, ಸಂಸ್ಕೃತ, ಗುಡಿ, ಮಸೀದಿ, ಮಡಿಮೈಲಿಗೆಯನ್ನು ಕಬೀರರು ವಿರೋಧಿಸಿದ್ದರು. ಬೌದ್ಧರ ಶೂನ್ಯವಾದ ಹಾಗೂ ಕಬೀರರ ನಿರಾಕಾರ ವಾದಕ್ಕೆ ಸಾಮ್ಯತೆಗಳಿವೆ. ಅದು ಎಲ್ಲಾ ಜೀವಿಗಳನ್ನು ಸಮಾನರಾಗಿ ಕಾಣಬೇಕೆಂದು ಪ್ರತಿಪಾದಿಸಿದೆ. ಸಾಮಾನ್ಯರಾಗಿ ಕೆಳಜಾತಿಯಲ್ಲಿ ಹುಟ್ಟಿದವರಿಗೆ ಸಾಮಾಜಿಕ ಪ್ರಾಮುಖ್ಯತೆ ನೀಡಿದ ಅನುಭಾವದ ಅಭಿಯಾನವು ತಮ್ಮ ಸಿದ್ಧಾಂತಕ್ಕೆ ಹತ್ತಿರವಿದ್ದದ್ದರಿಂದ ಅಂಬೇಡ್ಕರ್ ಅವರ ಮೆಚ್ಚುಗೆಯನ್ನೂ ಪಡೆಯಿತು’ ಎಂದರು.
ತತ್ವಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಎಂ.ಡ್ಯಾನಿಯಲ್, ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.