ADVERTISEMENT

ಮೈಸೂರು: ಎದೆ ಝಲ್ಲೆನಿಸಿದ ‘ಕಳರಿ’ ಸಾಹಸ

ಮೋಹನ್ ಕುಮಾರ ಸಿ.
Published 15 ಜನವರಿ 2026, 6:12 IST
Last Updated 15 ಜನವರಿ 2026, 6:12 IST
ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ ಬಾಬಾಸಾಹೇಬ್‌’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬುಧವಾರ ಭೂಮಿಗೀತದಲ್ಲಿ ಮಣಿಪುರದ ಕಲಾಕ್ಷೇತ್ರ ತಂಡದವರು ‘ಪಿ ಥದೊಯ್‌’ ನಾಟಕವನ್ನು ಹೈಸ್ನಾಂ ತೋಂಬಾ ಸಿಂಗ್‌ ನಿರ್ದೇಶನದಲ್ಲಿ ಅಭಿನಯಿಸಿದರು –ಪ್ರಜಾವಾಣಿ ಚಿತ್ರಗಳು/ ಅನೂಪ್ ರಾಘ ಟಿ. 
ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ ಬಾಬಾಸಾಹೇಬ್‌’ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬುಧವಾರ ಭೂಮಿಗೀತದಲ್ಲಿ ಮಣಿಪುರದ ಕಲಾಕ್ಷೇತ್ರ ತಂಡದವರು ‘ಪಿ ಥದೊಯ್‌’ ನಾಟಕವನ್ನು ಹೈಸ್ನಾಂ ತೋಂಬಾ ಸಿಂಗ್‌ ನಿರ್ದೇಶನದಲ್ಲಿ ಅಭಿನಯಿಸಿದರು –ಪ್ರಜಾವಾಣಿ ಚಿತ್ರಗಳು/ ಅನೂಪ್ ರಾಘ ಟಿ.    

ಮೈಸೂರು: ಕಿಂದರಿಜೋಗಿ ಅಂಗಳದಲ್ಲಿ ಜಾನಪದ ನೃತ್ಯ, ಗಾಯನವನ್ನು ತಣ್ಣಗೆ, ಆರಾಮವಾಗಿ ಆಸ್ವಾದಿಸುತ್ತಿದ್ದ ಸಹೃದಯರ ಎದೆ ಬುಧವಾರ ಸಂಜೆ ಝಲ್ಲೆಂದಿತು!

ಬೆಂಕಿಯುಂಡೆಗಳೊಂದಿಗೆ ಸರಸಕ್ಕೆ ಇಳಿದ ‘ಕಳರಿ ಪಯಟ್ಟು’ ವೀರರು ಎಲ್ಲರ ಹುಬ್ಬೆರಿಸಿ, ನಿಂತವರನ್ನು ತುದಿಗಾಲಿನಲ್ಲಿ ನಿಲ್ಲಿಸಿದರೆ, ಮೆಟ್ಟಿಲುಗಳಲ್ಲಿ ಕುಳಿತವರ ಬಾಯಿ ಮುಚ್ಚಿಸಿದರು. ಸಾಹಸಿಗಳ ಬಿಚ್ಚುಗತ್ತಿ, ಭರ್ಜಿ, ಕತ್ತಿಯಲಗಿನಲ್ಲಿ ಸಿಡಿಯುತ್ತಿದ್ದ ಕಿಡಿಗಳು ಸಾಹಸದ ಮಿಂಚನ್ನು ಎಲ್ಲರ ಎದೆಗಿಳಿಸಿದವು. 

‘ಬಹುರೂಪಿ– ಬಾಬಾಸಾಹೇಬ್‌’ ರಾಷ್ಟ್ರೀಯ ನಾಟಕೋತ್ಸವದ ನಾಲ್ಕನೇ ದಿನದ ‘ಜನಪದ ಉತ್ಸವ’ದಲ್ಲಿ ಸೋಲಿಗರ ಪದ ಕೇಳಿ ಮಾಧುರ್ಯಕ್ಕೆ ಮನಸೋತವರಿಗೆ ನಂತರ ಕಣ್ಣಿಗೆ ಅಪ್ಪಳಿಸಿದ್ದು ಕೇರಳದ ಕಣ್ಣೂರು ಜಿಲ್ಲೆಯ ಥೈನೇರಿಯ ಗ್ರಾಮೀಣ ಪ್ರತಿಭೆಗಳ ಈ ‘ಕಳರಿ’ ಸಾಹಸ. 

ADVERTISEMENT

ಯೋಗದಿಂದ ಸಾವಧಾನವಾಗಿ ಆರಂಭಗೊಂಡ ಕಸರತ್ತು ಬೆಂಕಿಯ ಸರಸದೊಂದಿಗೆ ಮುಗಿದಿತ್ತು. ಗೋಪಿಕಾ, ಶರಜ್ಜಿತ್‌, ಹರಿನಾರಾಯಣ, ವಿಷ್ಣುನಾರಾಯಣ, ದೇವರಾಜನ್, ಅಭಿಲಾಷ, ಮನು, ಅಖಿಲಾ ಸೇರಿದಂತೆ 10ಕ್ಕೂ ಹೆಚ್ಚು ಸಾಹಸಿಗಳು ‘ಕಳರಿ’ ಕಲೆಯನ್ನು ಗುರು ವೇಣುಗೋಪಾಲ್‌ ಮಾರ್ಗದರ್ಶನದಲ್ಲಿ ತೋರ್ಗೊಟ್ಟರು. 

ವೇದಿಕೆಯ ಅಷ್ಟೂ ಜಾಗವನ್ನು ಬಳಸಿಕೊಂಡ ಎಲ್ಲರು ಬೆಂಕಿಯ ರಿಂಗ್‌ಗಳಲ್ಲಿ ನೆಗೆದರು. ಕತ್ತಿಗಳಲ್ಲಿ ಹೋರಾಡಿದರು. ದೊಣ್ಣೆ, ಕತ್ತಿ ವರಸೆ ನಡೆಸಿದರು. ಶ್ಯಾಮ್‌ಜಿತ್‌ ಎನ್ನುವ ಸಾಹಸಿಗ ಕಾಲಿಗೆ ಪೆಟ್ಟಾದರೂ ಆರು ಜನರನ್ನು ನಿಲ್ಲಿಸಿ, ಅವರ ಮುಂದೆ ಬೆಂಕಿಯ ವೃತ್ತವನ್ನು ಹುಲಿಯಂತೆ ಹಾಯ್ದದ್ದು, ನಿಶ್ಚಲನಾಗಿ ನಿಂತಿದ್ದ ‘ಕಿಂದರಿಜೋಗಿ’ ಪ್ರತಿಮೆಯೂ ‘ಎಂಥಾ ಜಾದೂ’ ಎನ್ನುವಂತೆ ನೋಡುಗರಲ್ಲಿ ಭಾಸವಾಯಿತು. 

ಅಭಿಲಾಷ್, ಆರು ಸರಪಳಿಗಳಲ್ಲಿ ನೇತು ಬಿದ್ದಿದ್ದ ಬೆಂಕಿಯುಂಡೆಯನ್ನು ತಿರುಗಿಸಿದಾಗ ಅದ್ಭುತ ಲೋಕ ತೆರೆಯಿತು. ಅಂಗಳ ಮೇಲೆ ಬೆಂಕಿ ಬೀಳುತ್ತಿದ್ದರೂ, ಮೈಗೆ ಬಿಸಿ ತಾಕುತ್ತಿದ್ದರೂ ತಾಪ ಸಹಿಸಿ ಎಲ್ಲರ ಚಪ್ಪಾಳೆಗಳ ಮಳೆಯನ್ನು ಹೊದ್ದು ತಂಪಾದರು. ಸಾಹಸ ಮುಗಿದರೂ ಭೂಮಿಗೀತದಲ್ಲಿ 6.30ಕ್ಕೆ ನಾಟಕವಿದ್ದರೂ ಅಲ್ಲಿಯೇ ಕುಳಿತದ್ದು, ಕಲೆಯ ತೀವ್ರತೆಯನ್ನು ತಿಳಿಸಿಕೊಟ್ಟಿತ್ತು. ನಾಟಕ ನೋಡಲು ನಟ ದುನಿಯಾ ವಿಜಯ್ ಸಾಹಸ ವೀಕ್ಷಿಸಿದರು. 

ಸೋಲಿಗರ ಹಾಡಿನ ಲಾಲಿ:

ಬಿಳಿಗಿರಿರಂಗನಬೆಟ್ಟದ ಕಲಾವಿದ ಬಸವರಾಜು ಮತ್ತು ತಂಡದವರು ‘ಸೋಲಿಗರ ಪದ’ ಹಾಡಿದರು. ‘ಗೊರುಕ ಗೊರುಕ ಗೊರುಕಾನ’, ‘ಗೌಜಲಕ್ಕಿ’ಯ ಬೇಟೆಯ ಬಗೆಯನ್ನು ಜಾನಪದ ಹಾಡನ್ನು ನೃತ್ಯದಲ್ಲಿ ಅನಾವರಣಗೊಳಿಸಿದರು. ಲಾಲಿಯಂತಿದ್ದ ಹಾಡುಗಳು, ಎಲ್ಲರ ತಲೆದೂಗಿಸಿದವು.

ಕಿಂದರಿಜೋಗಿ ಆವರಣದಲ್ಲಿ ನಡೆದ ‘ಜನಪದ ಉತ್ಸವ’ದಲ್ಲಿ ‘ಕಳರಿ ಪಯಟ್ಟು’ ಸಾಹಸ ಕಲೆ ಪ್ರದರ್ಶಿಸಿದ  ಕೇರಳದ ಥೈನೇರಿಯ ವೇಣುಗೋಪಾಲ್‌ ಮತ್ತು ತಂಡದ ಸದಸ್ಯರು ಬೆಂಕಿಯ ರಿಂಗ್‌ಗಳಲ್ಲಿ ಹುಲಿಯಂತೆ ಜಿಗಿದರು 
 ‘ಕಳರಿ’ ಕಲೆಯ ರೋಚಕ ದೃಶ್ಯ 
ಬಿಳಿಗಿರಿರಂಗನಬೆಟ್ಟದ ಬಸವರಾಜು ಮತ್ತು ತಂಡದವರು ಪ್ರದರ್ಶಿಸಿದ ‘ಸೋಲಿಗರ ನೃತ್ಯ’
ವನರಂಗದಲ್ಲಿ ಮುಂಬೈನ ತಮಾಷಾ ಥಿಯೇಟರ್‌ ಕಲಾವಿದರು ಸಪನ್ ಸರನ್ ನಿರ್ದೇಶನದಲ್ಲಿ ‘ಸೇಮ್‌ ಟು ಸೇಮ್‌ ಬಟ್‌ ಡಿಫರೆಂಟ್‌’ ನಾಟಕ ಅಭಿನಯಿಸಿದರು
ಕಿರುರಂಗಮಂದಿರದಲ್ಲಿ ಚಾಮರಾಜನಗರದ ರಂಗವಾಹಿನಿ ತಂಡದವರು ಅಭಿನಯಿಸಿದ ಹನೂರು ಚನ್ನಪ್ಪ ರಚನೆಯ ‘ಬೆಲ್ಲದ ದೋಣಿ’ ನಾಟಕ  
ಕೆ.ಮನು

ನವರಸದ ನಾಟಕಗಳು

ಬಹುರೂಪಿಯ ನಾಟಕಗಳು ನವರಸವನ್ನು ಹರಿಸಿದವು. ಭೂಮಿಗೀತದಲ್ಲಿ ಮಣಿಪುರದ ಕಲಾಕ್ಷೇತ್ರ ತಂಡದವರು ‘ಪಿ ಥದೊಯ್‌’ ನಾಟಕವನ್ನು ಹೈಸ್ನಾಂ ತೋಂಬಾ ಸಿಂಗ್‌ ನಿರ್ದೇಶನದಲ್ಲಿ ಅಭಿನಯಿಸಿದರು.  ಹಿರಿಯ ರಂಗಕರ್ಮಿ ‘ಬಹುರೂಪಿ’ ಬೆಳ್ಳಿಹಬ್ಬದ ರಂಗಗೌರವಕ್ಕೆ ಪಾತ್ರರಾದ ಹೈಸ್ನಾಂ ಸಾವಿತ್ರಿ ದೇವಿ ಅವರು 80ರ ವಯಸ್ಸಿನಲ್ಲೂ ಯುವಜನರು ನಾಚುವಂತೆ ಅಭಿನಯಿಸಿದರು. ಅರಣ್ಯ ನೆನೆಸಿಕೊಳ್ಳುತ್ತಾ ಶೋಕಿಸುವ ರಾಜ ಹಿಯಾಂಗ್ ಹಿರೇಲಾಲ್‌ ಅವನ ದೇಹ ಕತ್ತರಿಸಿದ ನಂತರ ಭೂಮಿಯ ಆಳದಲ್ಲಿ ಬೇರಾಗಿ ಮರವಾಗಿ ಅದು ದೋಣಿಯಾಗಿ ಬದಲಾಗುತ್ತದೆ. ‘ಅಸ್ತಿತ್ವವಾದ’ ಮತ್ತು ‘ಮಾಂತ್ರಿಕ ವಾಸ್ತವವಾದ’ದ ಮಿಳಿತದಂತಿದ್ದ ಇದು ಭಾವುಕತೆಯ ಜೊತೆಗೆ ನವರಸವನ್ನು ನೋಡಗರಲ್ಲಿ ಹರಿಸಿತು.  ವನರಂಗದಲ್ಲಿ ಮುಂಬೈನ ತಮಾಷಾ ಥಿಯೇಟರ್‌ ಕಲಾವಿದರು ಸಪನ್ ಸರನ್ ನಿರ್ದೇಶನದಲ್ಲಿ ‘ಸೇಮ್‌ ಟು ಸೇಮ್‌ ಬಟ್‌ ಡಿಫರೆಂಟ್‌’ ನಾಟಕ ಅಭಿನಯಿಸಿದರು. ಜಾನ್ವಿ ಶ್ರೀಮಂಕರ್ ಕೈಲಾಶ್‌ ವಾಘಮಾರೆ ಸಂಗೀತದ ಬದುಕನ್ನು ಹೇಳಿದರೆ ಕಿರುರಂಗಮಂದಿರದಲ್ಲಿ ಚಾಮರಾಜನಗರದ ರಂಗವಾಹಿನಿ ತಂಡದವರು ಹನೂರು ಚನ್ನಪ್ಪ ರಚನೆಯ ‘ಬೆಲ್ಲದ ದೋಣಿ’ ನಾಟಕವು ತಳ ಸಮುದಾಯದ ಕಥನವನ್ನು ಹೇಳಿತು.  ಕಲಾಮಂದಿರದಲ್ಲಿ ನಡೆಯುತ್ತಿರುವ ‘ಮಕ್ಕಳ ಬಹುರೂಪಿ’ಯಲ್ಲಿ ತೆಕ್ಕಟ್ಟೆಯ ಧಮನಿ ತಂಡದವರು ರೋಹಿತ್‌ ಬೈಕಾಡಿ ನಿರ್ದೇಶನದಲ್ಲಿ ಕೆ.ಶಿವರಾಮಕಾರಂತ ರಚನೆಯ ‘ಸೂರ್ಯಚಂದ್ರ’ ನಾಟಕವನ್ನು ಅಭಿನಯಿಸಿದರು. 

ಚಿಂತನೆಗೆ ಹಚ್ಚಿದ ಚಲನಚಿತ್ರೋತ್ಸವ

  ಶ್ರೀರಂಗದಲ್ಲಿ ನಡೆಯುತ್ತಿರುವ ಬಹುರೂಪಿ ಚಲನಚಿತ್ರೋತ್ಸವದಲ್ಲಿ ಬುಧವಾರ ‘ಸಾಕ್ಷ್ಯಚಿತ್ರ’ ಮಯವಾಗಿತ್ತು. ಹೊಸ ವೀಕ್ಷಕರು ಬಂದಿದ್ದರು.  ಅಭಿನವ್ ಪಾಂಡೆ ನಿರ್ದೇಶನದ ‘ಮುಸಾಹರ್’ ಆನಂದ ಪಟವರ್ಧನ್‌ ನಿರ್ದೇಶನದ ‘ಜೈ ಭೀಮ್‌ ಕಾಮ್ರೇಡ್‌’ನ 2ನೇ ಭಾಗವು ಪ್ರದರ್ಶನಗೊಂಡಿತು. ದಲಿತ ಮತ್ತು ತಳ ಸಮುದಾಯಗಳು ದೇಶದಲ್ಲಿ ಎದುರಿಸುತ್ತಿರುವ ಸಂಕಷ್ಟಗಳು ನೋಡಿದವರ ಮನಕಲಕಿತು.  ಗಿರೀಶ್‌ ಮಾಚಳ್ಳಿ ನಿರ್ದೇಶನದ ‘ಕಾಳ್ಚೌಡಿ’ ಚಿತ್ರವು ಬಿಡುಗಡೆಯಾಗಿ ಒಂದೂವರೆ ದಶಕವಾದರೂ ಗ್ರಾಮೀಣರು ದಲಿತರ ಪರಿಸ್ಥಿತಿ ಬದಲಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿತು.  ‘ಜನರ ಪ್ರತಿಕ್ರಿಯೆ ಚೆನ್ನಾಗಿದ್ದು ಹೊಸ ವೀಕ್ಷಕರು ಬರುತ್ತಿದ್ದಾರೆ. ಚರ್ಚೆಯಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಅಭಿಪ್ರಾಯಭೇದವಿದ್ದವರು ಕಾಣುತ್ತಿಲ್ಲ. ತಟಸ್ಥರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ’ ಎಂದು ಚಲನಚಿತ್ರೋತ್ಸವ ಸಂಯೋಜಕ ಕೆ.ಮನು ‘ಪ್ರಜಾವಾಣಿ’ಗೆ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.